ಚಾಮರಾಜನಗರ: ವಿದ್ಯಾಭ್ಯಾಸದ ಜತೆಗೆ ವ್ಯಕ್ತಿತ್ವ ವಿಕಸನದ ಶಿಬಿರಗಳು ವ್ಯಕ್ತಿಯ ವ್ಯಕ್ತಿತ್ವ ಅಭಿವೃದ್ಧಿಗೆ ಕಾರಣವಾಗುತ್ತವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ. ಬಸವರಾಜು ಅಭಿಪ್ರಾಯಪಟ್ಟರು.
ನಗರದ ವಿಶ್ವ ಹಿಂದೂ ಪರಿಷತ್ ಶಾಲೆಯಲ್ಲಿ ಸರ್ಕಾರಿ ಬಾಲಮಂದಿರದ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ವ್ಯಕ್ತಿತ್ವ ವಿಕಸನ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿ: ಮಕ್ಕಳು ವ್ಯಾಸಂಗದ ಜತೆಯಲ್ಲೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳಿಗೂ ಗಮನ ನೀಡಬೇಕು. ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಸಮರ್ಥವಾಗಿ ಬಳಸಿಕೊಂಡು ಆತ್ಮವಿಶ್ವಾಸದಿಂದ ಭಾಗವಹಿಸಿ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಬೇಕು ಎಂದರು.
ವಿಶಿಷ್ಟ ಉಪನ್ಯಾಸ: ಮಕ್ಕಳಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸಂಗೀತ, ನೃತ್ಯ, ನಾಟಕ, ಪೇಪರ್ ಕಟಿಂಗ್, ಕ್ಲೇ ಮಾಡಲಿಂಗ್, ಯೋಗ, ಚಿತ್ರಕಲೆ, ಕನ್ನಡ-ಇಂಗ್ಲಿಷ್ ಉಪನ್ಯಾಸ, ಆರೋಗ್ಯ ಮತ್ತು ವೈಯುಕ್ತಿಕ ಸ್ವಚ್ಚತೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳ ಕುರಿತು ವಿಶಿಷ್ಟ ಉಪನ್ಯಾಸದಂತಹ ಕಾರ್ಯಕ್ರಮಗಳನ್ನು ಶಿಬಿರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಾಮರ್ಥ್ಯ ತೋರಿಸಿ: ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎಂ.ಜಯಶೀಲ ಮಾತನಾಡಿ, ವ್ಯಕ್ತಿ, ವ್ಯಕ್ತಿತ್ವ ವಿಕಸನ ಶಿಬಿರಗಳು ಮಕ್ಕಳ ಭವಿಷ್ಯದ ಬೆಳವಣಿಗೆಗೆ ಪೂರಕವಾಗಲಿದೆ. ಇಂತಹ ಶಿಬಿರಗಳು ಮಕ್ಕಳಲ್ಲಿ ಇರುವ ಅಗಾಧ ಶಕ್ತಿ, ಸಾಮರ್ಥ್ಯವನ್ನು ತೋರಲು ಸಹಾಯಕವಾಗಲಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ವಿಶ್ವ ಹಿಂದೂ ಪರಿಷತ್ ಸಂಸ್ಥೆಯ ಕಾರ್ಯದರ್ಶಿ ವಾಸುದೇವರಾವ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಅರುಣ್ ಮನಮೋಹನ್ ರೇ, ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ ಸುರೇಶ್, ಸಮಷ್ಠಿ ಸಮಗ್ರ ಅಭಿವೃದ್ಧಿ ಟ್ರಸ್ಟ್‌ನ ಕಾರ್ಯನಿರ್ವಾಹಕ ಗಂಗಾಧರಸ್ವಾಮಿ,
ಸರ್ಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕರಾದ ಎಚ್.ಎನ್. ಮೀನಾಕ್ಷಿ, ಸರ್ಕಾರಿ ಬಾಲಕರ ಬಾಲಮಂದಿರದ ಪರಿವೀಕ್ಷಣಾಧಿಕಾರಿ ಸುರೇಶ್, ಮೊಬಿಲಿಟಿ ಇಂಡಿಯಾದ ರಾಜಣ್ಣ, ಸಂಪನ್ಮೂಲ ವ್ಯಕ್ತಿ ರಾಜು ಇತರರು ಇದ್ದರು.