ಹೊನ್ನಾಳಿ: ಚಾರಣ ಮಾಡುವುದರಿಂದ ಮಕ್ಕಳಲ್ಲಿ ಪರಿಸರಾಸಕ್ತಿ ಮೂಡುವುದರ ಜೊತೆಗೆ ಆರೋಗ್ಯವೂ ವೃದ್ಧಿಯಾಗಲಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ನ್ಯಾಮತಿ ತಾಲೂಕಿನ ಕೊಡತಾಳು ಗುಡ್ಡದಲ್ಲಿ ಯೂತ್ ಹಾಸ್ಟಲ್ ಶಿವಮೊಗ್ಗ ಘಟಕ, ಕರ್ನಾಟಕ ಪತ್ರಕರ್ತರ ಸಂಘ ಹೊನ್ನಾಳಿ-ನ್ಯಾಮತಿ ತಾಲೂಕು ಘಟಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ್ಯಾಮತಿ ತಾಲೂಕು ಘಟಕ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಚಾರಣಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು. ಒಂದು ಕಾಲದಲ್ಲಿ ನಮ್ಮ ಪೂರ್ವಜರು ಮತ್ತು ನಾವು ಹೆಚ್ಚು ನಡೆಯುತ್ತಿದ್ದೆವು. ಈಗ ನಡೆದಾಡುವ ಗುಣ ಅನೇಕರಲ್ಲಿ ಮಾಯವಾಗಿದೆ. ನಡೆಯುವುದರಿಂದ ಮೊಣಕಾಲು, ಪಾದದ ಆರೋಗ್ಯ ವೃದ್ಧಿಯಾಗಿ ಮುಪ್ಪಿನಲ್ಲಿ ಹೆಚ್ಚು ಸಮಸ್ಯೆ ಬರುವುದಿಲ್ಲ ಎಂದರು.
ಚಾರಣ ಎನ್ನುವ ಹವ್ಯಾಸ ದೇಹಕ್ಕೆ, ಮನಸ್ಸಿಗೆ ಆರೋಗ್ಯ ಕೊಡುವುದಲ್ಲದೆ ಮನೋಲ್ಲಾಸ ನೀಡುತ್ತದೆ. ಚಾರಣ ಪ್ರಿಯರು ಪ್ರಕೃತಿ ಸೌಂದರ್ಯವನ್ನು ಆನಂದಿಸುವುದರ ಜೊತೆಗೆ ಸುರಕ್ಷಿತವಾಗಿರಬೇಕು. ಚಾರಣ ಪ್ರಿಯರು ಪ್ರಕೃತಿ ಸೌಂದರ್ಯ ಸವಿಯಲೆಂದು ಕಾಡು ಮೇಡು ಸುತ್ತಾಡುವುದರಿಂದ ಅವರಲ್ಲಿ ಧೈರ್ಯ, ಸಾಹಸ, ಆತ್ಮವಿಶ್ವಾಸ, ನಾಯಕತ್ವ ಬೆಳೆಸುವಲ್ಲಿ ಚಾರಣ ಅನುಕೂಲವಾಗಲಿದೆ. ಆಧುನಿಕತೆ ಬೆಳೆದಂತೆ ಮಕ್ಕಳಲ್ಲಿ ಪರಿಸರಾಸಕ್ತಿ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಚಾರಣ ಅನುಕೂಲವಾಗಲಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಯೂತ್ ಹಾಸ್ಟಲ್ ವತಿಯಿಂದ 10ರಿಂದ 15 ವರ್ಷದ ಒಳಗಿನ ಮಕ್ಕಳಿಗೆ ಚಾರಣ ಹಮ್ಮಿಕೊಂಡಿದ್ದು, ಸುಮಾರು ಏಳು ಕಿಲೋಮೀಟರ್ ಕೊಡತಾಳ್ ಗುಡ್ಡವನ್ನು ಮಕ್ಕಳು ಏರಲಿದ್ದಾರೆ. ಜಾಗ್ರತೆಯಿಂದ ಚಾರಣ ಮಾಡಬೇಕು. ಯೂತ್ ಹಾಸ್ಟೆಲ್ ವತಿಯಿಂದ ಈಗಾಗಲೇ 70ಕ್ಕೂ ಹೆಚ್ಚು ಕಡೆ ಚಾರಣ ಮಾಡಲಾಗಿದೆ. ಈಗ ಕೊಡತಾಳು ಗುಡ್ಡದಲ್ಲಿ ಚಾರಣ ಹಮ್ಮಿಕೊಂಡಿದ್ದು ಯಶಸ್ವಿಯಾಗಲಿ. ಯುವಕರು ಮುಂದಿನ ದಿನಗಳಲ್ಲಿ ಹಿಮಾಲಯ ಪರ್ವತ ಏರಲು ಮುಂದಾಗಿದ್ದಾರೆ. ಇದರಲ್ಲಿ ಯಶಸ್ವಿಯಾಗಿ ಶಿವಮೊಗ್ಗ ಜಿಲ್ಲೆಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು.
ಸರ್ಕಲ್ ಇನ್ಸ್‌ಪೆಕ್ಟರ್ ಟಿ.ವಿ. ದೇವರಾಜ್, ಯೂತ್ ಹಾಸ್ಟೆಲ್ ಚೇರ್ಮನ್ ವಾಗೀಶ್, ಹರೀಶ್ ಪಂಡಿತ್, ಸುರೇಶ್, ಪ್ರಶಾಂತ್, ದೊರಯ್ಯ ಸೇರಿದಂತೆ ಮತ್ತಿತರರು ಇದ್ದರು.