ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕಿದವರನ್ನು ಆಯ್ಕೆ ಮಾಡುವ ಪದ್ಧತಿ ಇದೆ. ಇದರ ಬದಲಿಗೆ ಪದ್ಮ ಪ್ರಶಸ್ತಿ ಆಯ್ಕೆ ಮಾದರಿಯಲ್ಲಿ ಅರ್ಜಿ ಹಾಕದ ಸಾಧಕರನ್ನು ಗುರುತಿಸಿ ನೇರವಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಬೇಕು ಎಂದು ಸರ್ಕಾರ ತೀರ್ಮಾನಿಸಿದೆ.
ರಾಜ್ಯೋತ್ಸವ ಪ್ರಶಸ್ತಿ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿ ಇದಕ್ಕೆ ಸ್ವತಃ ಮುಖ್ಯಮಂತ್ರಿಯವರೂ ಸಹಮತ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ. ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕರು ಇರುತ್ತಾರೆ. ಆದರೆ, ಅವರು ಎಲ್ಲಿಯೂ ತೆರೆಗೆ ಬರುವುದಿಲ್ಲ.
ಕೆಲವರು ತಮ್ಮ ಸಾಧನೆಗಳನ್ನು ಹೇಳಿ ಕೊಳ್ಳಲಿಕ್ಕೂ ಬಯಸುವುದಿಲ್ಲ. ಅಂತವರನ್ನು ಗುರುತಿಸುವ ಕೆಲಸ ಆಗಬೇಕು. ಅದಕ್ಕಾಗಿ, ಪದ್ಮ ಪ್ರಶಸ್ತಿ ಆಯ್ಕೆ ಮಾದರಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕದೇ ಇದ್ದವರನ್ನು ಗುರುತಿಸಿ ಆಯ್ಕೆ ಮಾಡುವ ಕೆಲಸ ಆಗಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು ಎನ್ನಲಾಗಿದೆ.
ಅಂತಿಮ ಪಟ್ಟಿ ಆಯ್ಕೆ ಅಧಿಕಾರ ಸಿಎಂಗೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿನ ವಿವಿಧ ಕ್ಷೇತ್ರಗಳ ತಜ್ಞರ ಸಮಿತಿಗಳು ಆಯಾ ಕ್ಷೇತ್ರಗಳ ಸಾಧಕರ ಪಟ್ಟಿ ಮಾಡಿದ್ದಾರೆ. ತಜ್ಞರ ಸಮಿತಿಗಳು ಒಂದೊಂದು ಕ್ಷೇತ್ರದಲ್ಲಿ 5ರಿಂದ 6 ಮಂದಿಯನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿದ್ದಾರೆ. ಸೇವಾ ಕ್ಷೇತ್ರ ಮತ್ತು ಜಿಲ್ಲಾವಾರು ಪ್ರಾತಿನಿಧ್ಯ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ 1:2 ಅನುಪಾತದ ಪಟ್ಟಿಯನ್ನು ಸಿದ್ಧಪಡಿಸಿ ಮುಖ್ಯಮಂತ್ರಿ ಯವರಿಗೆ ನೀಡಲಾಗಿದೆ.
ಅಂತಿಮ ಆಯ್ಕೆಯ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಅದರಂತೆ, ಶೀಘ್ರದಲ್ಲೇ ಮುಖ್ಯಮಂತ್ರಿಯವರು ಅಂತಿಮ ಪಟ್ಟಿಯನ್ನು ಆಯ್ಕೆ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳಿಂದ 850ಕ್ಕೂ ಹೆಚ್ಚು ಅರ್ಜಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಕೆಯಾಗಿದ್ದವು. ಇದಲ್ಲದೆ ಮುಖ್ಯಮಂತ್ರಿಯವರ ಕಚೇರಿಗೂ ನೇರ ವಾಗಿ ಕೆಲ ಅರ್ಜಿಗಳು ಬಂದಿವೆ. ಸಚಿವರು, ಶಾಸಕರು ಶಿಫಾರಸು ಮಾಡಿದ ಅರ್ಜಿಗಳು
ಇವೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸಚಿವರಾದ ಆರ್. ಅಶೋಕ್, ವಿ.ಸುನೀಲ್ ಕುಮಾರ್, ಶಿವ ರಾಮ್ ಹೆಬ್ಟಾರ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ ಹಾಗೂ ಆಯ್ಕೆ ಸಮಿತಿಯ ಸದಸ್ಯರು ಇದ್ದರು.