ಹುಬ್ಬಳ್ಳಿ: ಉಪ ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಬಹುತೇಕ ಅಭ್ಯರ್ಥಿಗಳ ಆಯ್ಕೆ ಅಂತಿಮ ಹಂತ ತಲುಪಿದೆ. ಸುಪ್ರೀಂಕೋರ್ಟ್ ತೀರ್ಪು ನೋಡಿಕೊಂಡು ಅಭ್ಯರ್ಥಿಗಳ ಆಯ್ಕೆ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ನಮ್ಮ ಶಾಸಕರನ್ನು ಕರೆದೊಯ್ದು ಆಕಾಶ ತೋರಿಸಿದ್ದರು. ನಡುನೀರಲ್ಲಿ ಕೈಬಿಟ್ಟಿದ್ದಾರೆ. ನಿಮಗೆ ಅವರು ಸಮಾಧಿ ಮಾಡುತ್ತಾರೆಂದು ಅವರಿಗೆ ಮೊದಲೇ ಹೇಳಿದ್ದೇವು. ಆದರೆ, ಅವರು ಕೇಳಲಿಲ್ಲ ಎಂದರು.
ಪರಿಹಾರ ವಿತರಣೆಯಲ್ಲಿ ತಾರತಮ್ಯ: ರಾಜ್ಯ ಸರಕಾರ ಪ್ರವಾಹ ಪೀಡಿತರಿಗೆ ಸೂಕ್ತ ಪರಿಹಾರ ಕೊಟ್ಟಿಲ್ಲ. ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದೆ. ಪರಿಹಾರ ಸಂತ್ರಸ್ತರ ಪಟ್ಟಿಯಿಂದ ಬಹಳಷ್ಟು ಜನ ಬಿಟ್ಟು ಹೋಗಿದ್ದಾರೆ. ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಲ್ಲ. ಬಿಜೆಪಿಯವರು ಮೋಜು ಮಾಡುತ್ತಿದ್ದಾರೆ. ನೆರೆ ಪರಿಹಾರ ವಿಳಂಬ ಖಂಡಿಸಿ ಪಾದಯಾತ್ರೆ ಮಾಡುವ ಯೋಚನೆಯಿದೆ, ಇನ್ನೂ ಅಂತಿಮವಾಗಿಲ್ಲ ಎಂದರು.
ಹಕ್ಕುಚ್ಯುತಿ ಮಂಡಿಸಲಿ ಬಿಡಿ: ಅಧಿವೇಶನದಲ್ಲಿ ಮಾತನಾಡಲು ವಿಪಕ್ಷ ನಾಯಕರಿಗೆ ಸ್ಪೀಕರ್ ಅವಕಾಶ ಕೊಡಲಿಲ್ಲ. ಹೀಗಾಗಿ, ಸ್ಪೀಕರ್ ನಡೆ ಖಂಡಿಸಿದ್ದೇನೆ. ಬೇಕಾದರೆ ಸಿಎಂ ಯಡಿಯೂರಪ್ಪ ಅವರು, ನನ್ನ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಲಿ ಬಿಡಿ. ಸದನದಲ್ಲೇ ಉತ್ತರಿಸುವೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಶನಿವಾರ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಪ್ಪೇ ಮಾಡಿಲ್ಲವೆಂದ ಮೇಲೆ ಕ್ಷಮೆ ಏಕೆ ಕೇಳಲಿ’ ಎಂದು ಪ್ರಶ್ನಿಸಿದರು. “ಸ್ಪೀಕರ್‌ಗೆ ಹೇಗೆ ಗೌರವ ಕೊಡಬೇಕೆಂಬ ಬಗ್ಗೆ ಯಡಿಯೂರಪ್ಪನವರಿಂದ ಪಾಠ ಕಲಿಯಬೇ ಕಿಲ್ಲ. 40 ವರ್ಷದಿಂದ ರಾಜಕೀಯದಲ್ಲಿದ್ದು, ಯಾರಿಗೆ, ಯಾವ ರೀತಿ ಗೌರವ ಕೊಡಬೇಕೆಂಬುದು ನನಗೆ ಗೊತ್ತು’ ಎಂದರು.
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಅನ್ನೋದು ಕೇವಲ ವದಂತಿ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪ್ರಸ್ತಾಪ ಸದ್ಯಕ್ಕಿಲ್ಲ. ಬಿಜೆಪಿಯ ಮೂರು ಡಿಸಿಎಂಗಳ ಬಗ್ಗೆ ಉಮೇಶ ಕತ್ತಿ ಸತ್ಯ ಹೇಳಿದ್ದಾರೆ. ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲು ಕಾಯುತ್ತಿದ್ದಾರೆ.
-ಸಿದ್ದರಾಮಯ್ಯ, ವಿಪಕ್ಷ ನಾಯಕ