Advertisement

Selection of Awardees: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ 2,800 ಅರ್ಜಿ!

02:01 AM Oct 10, 2024 | Team Udayavani |

ಬೆಂಗಳೂರು: ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ ಬಗ್ಗೆ ಚಟುವಟಿಕೆ ಗರಿಗೆದರಿದೆ. ಸಾಧಕರ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯ, ಪ್ರಾದೇಶಿಕ, ಜಿಲ್ಲಾ ಪ್ರಾತಿನಿಧ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಅವರು ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯ ಸದಸ್ಯರಿಗೆ ಸೂಚನೆ ನೀಡಿದ್ದಾರೆ.

Advertisement

2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ವಲಯಗಳಿಂದ ಸುಮಾರು 2,800ಕ್ಕೂ ಅಧಿಕ ಅರ್ಜಿಗಳು ಸರಕಾರಕ್ಕೆ ಸಲ್ಲಿಕೆ ಆಗಿದ್ದು, ಈ ಸಂಬಂಧ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ 5 ವಿವಿಧ ವಲಯಗಳ ಸಲಹಾ ಸಮಿತಿ ಸದಸ್ಯರ ಸಭೆ ನಡೆಸಿ ಸಮಾಲೋಚನೆ ನಡೆಸಿದರು.

ಲಿಂಗ ತಾರತಮ್ಯ ಆಗದಿರಲಿ
ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಸಾಮಾಜಿಕ ನ್ಯಾಯ, ಲಿಂಗ ಸಮಾನತೆಗೆ ಆದ್ಯತೆ ನೀಡಬೇಕು. ಜತೆಗೆ ಯಾವುದೇ ಜಿಲ್ಲೆಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಪ್ರಶಸ್ತಿ ಆಯ್ಕೆ ವಿಷಯದಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲವೆಂದು ಸಚಿವರು ಸಭೆಯಲ್ಲಿ ಹೇಳಿದರು ಎಂದು ಬಲ್ಲ ಮೂಲಗಳು ತಿಳಿಸಿವೆ.

ಈಗಾಗಲೇ ಹಲವು ಸಾಧಕರಿಗೆ ವಿವಿಧ ರೀತಿಯ ಪ್ರಶಸ್ತಿಗಳು ಬಂದಿವೆ. ಹಳ್ಳಿಗಳಲ್ಲಿ ಇನ್ನೂ ಎಲೆಮರೆಯ ಕಾಯಿಯಂತಿರುವ ಸಾಧಕರಿದ್ದಾರೆ. ಅಂಥವರನ್ನು ಗುರುತಿಸುವ ಕೆಲಸ ಆಗಲಿ. ಅರ್ಜಿ ಹಾಕದೇ ಇರುವ ಅರ್ಹರನ್ನೂ ಗುರುತಿಸಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಶೀಘ್ರ ಮತ್ತೊಂದು ಸುತ್ತಿನ ಸಭೆ
69ನೇ ರಾಜ್ಯೋತ್ಸವ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳ 69 ಮಂದಿ ಸಾಧಕರಿಗೆ ಈ ವರ್ಷ ಸರಕಾರ ಪ್ರಶಸ್ತಿ ನೀಡಲಿದೆ. ಈಗಾಗಲೇ 2,800ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಅವುಗಳನ್ನು ಶೀಘ್ರದಲ್ಲೇ 1:3ಗೆ ಇಳಿಸಿ ಅಂತಿಮ ಪಟ್ಟಿಯನ್ನು ಸರಕಾರಕ್ಕೆ ಕಳುಹಿಸಿಕೊಡಲಿದೆ. ಪ್ರಶಸ್ತಿ ಆಯ್ಕೆ ಕುರಿತಂತೆ ಒಂದೆರೆಡು ದಿನಗಳಲ್ಲಿ ಮತ್ತೆ ಆಯ್ಕೆ ಸಲಹಾ ಸಮಿತಿಯ ಸಭೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

Advertisement

ಸಭೆಯಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆ, ಹಿರಿಯ ಸಂಗೀತ ರಚನೆಕಾರ ಹಂಸಲೇಖ, ಸಾಧುಕೋಕಿಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ| ಧರಣಿದೇವಿ ಮಾಲಗತ್ತಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next