ಕೋಲಾರ: ದೇಶದ ಪ್ರತಿಯೊಂದು ಮನೆಗೂ ಪೈಪ್‌ಲೈನ್ ಮೂಲಕ ಅಗತ್ಯ ನೀರನ್ನು ಪೂರೈಸಲು ಪ್ರಧಾನಿ ಮಂತ್ರಿಗಳ ದೂರದೃಷಿಯಿಂದ ಜಲಶಕ್ತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಋತ್ವಿಕ್ ಪಾಂಡೆ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಲಶಕ್ತಿ ಅಭಿಯಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದಿನ ವರ್ಷಗಳಲ್ಲಿ ಭಾರತ ಸರ್ಕಾರವು ಸ್ವಚ್ಛ ಭಾರತ ಅಭಿಯಾನವನ್ನು ಹಮ್ಮಿಕೊಂಡಿತ್ತು. ಇದರಂತೆ ಯಶಸ್ವಿಯಾಗಿ ಶೌಚಾಲಯ ನಿರ್ಮಿಸಲಾಗಿದೆ. ಅದೇ ರೀತಿ ಈಗ ಜಲಶಕ್ತಿ ಆಂದೋಲನವನ್ನೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ 2 ಹಂತಗಳಲ್ಲಿ ಹಮ್ಮಿಕೊಂಡಿದೆ. ದೇಶದ 56 ಜಿಲ್ಲೆಗಳಲ್ಲಿ 1592 ಬ್ಲಾಕ್‌ಗಳು ಹಾಗೂ 756 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಮ್ಮಿಕೊಂಡಿದ್ದು, ಜಿಲ್ಲೆಯು ಇದರಲ್ಲಿ ಸೇರ್ಪಡೆಯಾಗಿದೆ ಎಂದು ತಿಳಿಸಿದರು.
ಅಭಿಯಾನವು ಜಿಲ್ಲೆಗೆ ವರದಾನ: ಜಲಶಕ್ತಿ ಅಭಿಯಾನವನ್ನು 5 ಅಂಶಗಳ ಮೂಲಕ ಹಮ್ಮಿಕೊಳ್ಳಲಾಗಿದ್ದು, ನೀರಿನ ಸಂರಕ್ಷಣೆ, ಕೆರೆಗಳ ಅಭಿವೃದ್ಧಿ, ಕೊಳವೆಬಾವಿಗಳ ಮರುಪೂರಣ ಮತ್ತು ಮಳೆ ನೀರು ಸಂಗ್ರಹಣೆ, ವಾಟರ್ ಶೆಡ್ ನಿರ್ಮಿಸುವುದು ಹಾಗೂ ಅರಣ್ಯೀಕರಣವನ್ನು ಮಾಡುವುದಾಗಿದೆ. ಜಿಲ್ಲೆಯು ಹಿಂದಿನಿಂದಲೂ ನೀರಿನ ಕೊರತೆ ಎದುರಿಸುತ್ತಿದ್ದು, ಈ ಅಭಿಯಾನವು ಜಿಲ್ಲೆಗೆ ವರದಾನವಾಗಿ ಪರಿಣಮಿಸಲಿದೆ ಎಂದು ತಿಳಿಸಿದರು.
ಶೇ.45 ಪ್ರದೇಶಗಲ್ಲಿ ನೀರಿನ ಸಮಸ್ಯೆ: ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಭಾರತವು 21 ನಗರ ಪ್ರದೇಶಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. 2025ಕ್ಕೆ ಶೇ.45 ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಸಂಭವಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರವು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಹಾಗೂ ನೀರಿನ ಸಂರಕ್ಷಣೆ ಮಾಡಲು ಜಲಶಕ್ತಿ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ವಿವರಿಸಿದರು.
ಅಂತರ್ಜಲ 1497 ಅಡಿಗೆ ಕುಸಿತ: ಕೋಲಾರ ಜಿಲ್ಲೆಯಲ್ಲಿ ಅಂತರ್ಜಲದ ಸರಾಸರಿ ಮಟ್ಟ 1497 ಅಡಿಗಳಿಗೆ ಕುಸಿದಿದೆ. ಜಿಲ್ಲೆಯಲ್ಲಿ 1138 ಸಣ್ಣ ನೀರಾವರಿ ಇಲಾಖೆಯ ಕೆರೆಗಳು, 1190 ಜಿಲ್ಲಾ ಪಂಚಾಯ್ತಿ ಕೆರೆಗಳು ಇದ್ದು, ಕೆ.ಸಿ.ವ್ಯಾಲಿ ನೀರು ಜಿಲ್ಲೆಗೆ ಹರಿಯುತ್ತಿದೆ. ಕೆ.ಸಿ.ವ್ಯಾಲಿ ನೀರಿನಿಂದ ಈಗಾಗಲೇ 18 ಕೆರೆಗಳು ತುಂಬಿವೆ. ಕೆ.ಸಿ.ವ್ಯಾಲಿ ನೀರು ಬಂದ ನಂತರ ಜಿಲ್ಲೆಯ ರೈತರು ಸ್ವಯಂ ಪ್ರೇರಿತರಾಗಿ ನೀಲಗಿರಿ ಹಾಗೂ ಜಾಲಿಮರಗಳನ್ನು ತೆರವುಗೊಳಿಸಿ ಕೈಷಿ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಸಲು ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ಜಿಲ್ಲೆಯ 126 ಕೆರೆಗಳನ್ನು ತುಂಬಿಸಲಾಗುವುದು. ಇದಲ್ಲದೆ ಯರಗೋಳ್ ಡ್ಯಾಂ ಅನ್ನು ನಿರ್ಮಿಸಲಾಗುತ್ತಿದ್ದು, ಇದು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳುವುದು. ಈ ಡ್ಯಾಂನಲ್ಲಿ 0.5 ಟಿ.ಎಂ.ಸಿ ನೀರು ಸಂಗ್ರಹವಾಗಲಿದ್ದು, ಇದರಿಂದ ಕೋಲಾರ, ಮಾಲೂರು ಹಾಗೂ ಬಂಗಾರಪೇಟೆ ನಗರಗಳು ಹಾಗೂ 45 ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
100 ಕೆರೆಗಳ ಅಭಿವೃದ್ಧಿ: ಜಿಪಂ ಸಿಇಒ ಜಿ.ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ ನೀರಿನ ಸಂರಕ್ಷಣೆ ಮಾಡಲು ಹಾಗೂ ಅಂತರ್ಜಲ ಮಟ್ಟವನ್ನು ವೃದ್ಧಿಸಲು ಜಿಲ್ಲೆಯಲ್ಲಿ 1280 ಚೆಕ್ ಡ್ಯಾಂಗಳ್ನು ನಿರ್ಮಿಸುವ ಗುರಿ ಹೊಂದಿದ್ದು, ಇದರಲ್ಲಿ 434 ಪೂರ್ಣಗೊಂಡಿವೆ. 438 ಕಾಮಗಾರಿ ಪ್ರಗತಿಯಲ್ಲಿವೆ. ಉಳಿದವನ್ನೂ ಈ ಆರ್ಥಿಕ ವರ್ಷದೊಳಗೆ ಪೂರ್ಣಗೊಳಿಸಲಾಗುವುದು. 100 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, 1214 ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು.
17 ಕೋಟಿ ರೂ. ಖರ್ಚು: ನರೇಗಾ ಯೋಜನೆಯಲ್ಲಿ ಕಳೆದ ವರ್ಷ 40 ಲಕ್ಷ ಮಾನವ ದಿನಗಳನ್ನು ಸೃಜಿಸಿದ್ದು, 140 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ವರ್ಷ 50 ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಿದ್ದು, ಈಗಾಗಲೇ 17 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ವಿವರಿಸಿದರು.
ಸಭೆಯ ನಂತರ ಕೆ.ಸಿ ವ್ಯಾಲಿ, ಡಿಸಿ ಪಾಯಿಂಟ್ ಆದ ಲಕ್ಷ್ಮೀಸಾಗರ ಕೆರೆ, ನರಸಾಪುರ ಕೆರೆ, ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಯೋಜನೆಯಲ್ಲಿ ತೋಪುಗಳ ನಿರ್ಮಾಣ ಕಾಮಗಾರಿ ಹಾಗೂ ಹೊಳೇರಹಳ್ಳಿಯಲ್ಲಿ ನಿರ್ಮಿಸಿರುವ ಮಲ್ಟಿ ಆಕ್ಸೆಲ್ ಚೆಕ್‌ಡ್ಯಾಂಗಳನ್ನು ವೀಕ್ಷಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ನಿರ್ದೇಶಕರಾದ ಗುಲಾಮ್ ಮಸ್ತಾಪ್ ಸೇರಿದಂತೆ ಜಿಲ್ಲಾ ಮಟ್ಟದ ಅಕಾರಿಗಳು ಉಪಸ್ಥಿತರಿದ್ದರು.