ಚೇಳೂರು: ಈ ಹಿಂದೆ ಸಮ್ಮಿಶ್ರ ಸರ್ಕಾರ ರಚನೆಯಾದ ಸಂದರ್ಭವನ್ನು ಉಪಯೋಗಿಸಿಕೊಳ್ಳುವಲ್ಲಿ ಕಾಂಗ್ರೆಸ್ ಪಕ್ಷ ಎಡವಿದೆ. ಅಧಿಕಾರ ಉಳಿಸಿಕೊಳ್ಳುವುದು ಕಷ್ಟ ಎಂಬ ಪಾಠ ಕಲಿತಾಗಿದೆ ಎಂದು ರಾಜ್ಯ ವೀಕ್ಷಕ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ರಾಜಪ್ಪ ಹೇಳಿದರು. ಚೇಳೂರು ಹೋಬಳಿ ನಿಂಬೆಕಟ್ಟೆಯಲ್ಲಿ ಆಯೋಜಿಸ ಲಾಗಿದ್ದ ಕಾಂಗ್ರೆಸ್ ಘಟಕದ ಪ್ರತಿಜ್ಞಾ ದಿನ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಮರ್ಥ ನಾಯಕನ ಆಯ್ಕೆಯಿಂದ ಎಲ್ಲಾ ಕಾಂಗ್ರೆಸಿಗರಲ್ಲೂ ಚೈತನ್ಯ ಹೆಚ್ಚಿದೆ. ಕೊರೊನಾ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕತ್ವವನ್ನು ನಿಭಾ ಯಿಸುವಲ್ಲಿ ಯಶಸ್ಸು ಕಂಡ ಡಿ.ಕೆ.ಶಿವಕುಮಾರ್ ಅವರ ಅಲೆಯು ಮುಂದಿನ ದಿನದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯ ಮನ್ಸೂಚನೆ ತೋರುತ್ತಿದೆ ಎಂದರು. ಈ ಪಕ್ಷ ಕಟ್ಟುವ ಕೆಲಸಕ್ಕೆ ಎಲ್ಲಾ ಕಾರ್ಯಕರ್ತರು ಮುಂದಾಗಬೇಕು.
ಅವರ ಹುಮ್ಮಸ್ಸಿಗೆ ಪ್ರಮುಖ ಮುಖಂಡರು ಸಾಥ್ ನೀಡುವ ಕೆಲಸ ಆಗಬೇಕು ಎಂದು ತಿಳಿಸಿದರು. ಪಕ್ಷದ ರಾಜ್ಯವಕ್ತಾರ ಮುರಳೀಧರ ಹಾಲಪ್ಪ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತಿದ್ದು, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಶ್ರಮಿಸಬೇಕು ಎಂದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶಂಕರಾನಂದ ಮಾತನಾಡಿ, ಪಕ್ಷವನ್ನು ತಳಮಟ್ಟದಿಂದ ಶ್ರಮಿಸುತ್ತಿರುವ ಕಾರ್ಯಕರ್ತರು ಚುನಾವಣೆ ಸಂದರ್ಭದಲ್ಲಿ ಬೇರೊಂದು ಪಕ್ಷದಿಂದ ಬಂದವರನ್ನು ಅವಲಂಬಿಸುವಂತಾಗಿದೆ ಎಂದು ವಿಷಾದಿಸಿದರು.
ಪಕ್ಷದಲ್ಲಿ ನಾಲ್ಕೂ ವರೆ ವರ್ಷ ಪ್ರಾಮಾಣಿಕವಾಗಿ ದುಡಿದ ಕಾರ್ಯರ್ತರು ಕೊನೆಯ ಆರು ತಿಂಗಳಲ್ಲಿ ನಾಪತ್ತೆಯಾಗುವ ದುಸ್ಥಿತಿ ಯಲ್ಲೂ ಕೆಲ ಮುಖಂಡರು ಮಾತ್ರ ಪ್ರಾಮಾಣಿಕವಾಗಿ ಕ್ಷೇತ್ರದಲ್ಲಿ ಪ್ರವಾಸ ನಡೆಸುತ್ತಿರುವುದು ಶ್ಲಾಘನೀಯ. ಪಕ್ಷದ ಕಾರ್ಯಕರ್ತರು ಹಗಲಿರುಳೂ ಪಕ್ಷ ಸಂಘಟನೆಗೆ ಶ್ರಮಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಮನವಿ ಮಾಡಿದರು.