ಶಿರಸಿ: ಪರಿಸರ ಸ್ನೇಹಿ ಕೆಲಸ ಮಾಡುತ್ತಿರುವ ಸೆಲ್ಕೋ ಸೋಲಾರ್ ಇಂಡಿಯಾ ಸಮಾಜಮುಖೀ ಕೆಲಸ ಮಾಡುತ್ತಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಶ್ಲಾಘಿಸಿದರು. ಅವರು ನಗರದ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯದ ಮಹಿಷಿ ಆವಾಸದ ಮಂಟಪದಲ್ಲಿ ಸೆಲ್ಕೋ ಸೋಲಾರ್ ಸಂಸ್ಥೆಯಿಂದ ಉಚಿತವಾಗಿ ಅಳವಡಿಸಿದ ಸೌರ ಶಕ್ತಿ ಜೀವ ಶಕ್ತಿ ಘಟಕವನ್ನು ದೇವಾಲಯಕ್ಕೆ ಸಮರ್ಪಣೆಗೊಳಿಸಿ ಮಾತನಾಡಿದರು.
ಸೆಲ್ಕೋ ಸೋಲಾರ್ ಘಟಕ ರಾಜ್ಯ, ಹೊರ ರಾಜ್ಯಗಳಲ್ಲಿ ಆರೋಗ್ಯ, ಶೈಕ್ಷಣಿಕ ಸೇರಿದಂತೆ ಅನೇಕ ಸಮಾಜಮುಖೀ ಕಾರ್ಯ ಮಾಡಿದೆ. ಸೌರ ಶಕ್ತಿ ಮೂಲಕ ಪರಿಸರ ಸ್ನೇಹಿ ಕಾರ್ಯ ಮಾಡುತ್ತಿದೆ ಎಂದರು.
ಸೆಲ್ಕೋ ಇಂಡಿಯಾದ ಸಿಇಒ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಸೌರ ವಿದ್ಯುತ್ ಕ್ಷೇತ್ರದಲ್ಲಿ ಕಳೆದ 27 ವರ್ಷದಿಂದ ಸೆಲ್ಕೋ ಸೋಲಾರ ಸಂಸ್ಥೆ ಕೆಲಸ ಮಾಡುತ್ತಿದೆ. ಕರ್ನಾಟಕದ ಬಹುದೊಡ್ಡ ಶಕ್ತಿ ಕೇಂದ್ರವಾಗಿರುವ ಮಾರಿಕಾಂಬಾ ದೇವಸ್ಥಾನದ ಮಹಿಷನಿಗೆ ಬೆಳಕು ಹಾಗೂ ಗಾಳಿಯ ವ್ಯವಸ್ಥೆಯನ್ನು ಮಾಡಿದ್ದು ತೃಪ್ತಿ ಕೊಟ್ಟಿದೆ ಎಂದ ಅವರು, ಮಾತನಾಡಲು ಬಾರದ ಮೂಕ ಪ್ರಾಣಿಗಳಿಗೆ ಏನು ಎಂಬುದನ್ನು ಅರಿತು ಅವುಗಳಿಗೆ ಬೇಕಾದ ಸೌಲಭ್ಯ ನೀಡಬೇಕು ಎಂದರು.
ದೇವಸ್ಥಾನದ ಅಧ್ಯಕ್ಷ ಆರ್.ಜಿ. ನಾಯ್ಕ ಮಾತನಾಡಿ, ಮಹಿಷ ಮಂಟಪಕ್ಕೆ ಬೆಳಕು ಹಾಗೂ ಫೆನ್ ನೀಡಿದ್ದು, ಸಾರ್ಥಕ ಬಳಕೆಗೆ ಅನುಕೂಲ ಆಗಲಿದೆ ಎಂದರು.
ಸುಧೀರ ಕುಲಕರ್ಣಿ, ಸೆಲ್ಕೋದ ಕ್ಷೇತ್ರ ಪ್ರಬಂಧಕರಾದ ಮಂಜುನಾಥ ಭಾಗವತ, ದತ್ತಾತ್ರಯ ಭಟ್ಟ, ಶಾಖಾ ವ್ಯವಸ್ಥಾಪಕ ಸುಬ್ರಾಯ ಹೆಗಡೆ, ಉಪಾಧ್ಯಕ್ಷ ಸುಧೀಶ ಜೋಗಳೇಕರ್, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ಬಾಬುದಾರ ಪ್ರಮುಖ ಜಗದೀಶ ಗೌಡ ಇದ್ದರು.
ಯಾವುದೇ ಸಂಘ ಸಂಸ್ಥೆಯ ಸಮಾಜಮುಖೀ ಹಾಗೂ ಒಳ್ಳೆಯ ಕಾರ್ಯದಲ್ಲಿ ಎಲ್ಲರೂ ಜೊತೆಗೂಡಿ ಕೈಗೂಡಿಸಬೇಕು. –
ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್
ಸೆಲ್ಕೋ ಸೋಲಾರ್ ಸಂಸ್ಥೆ ಇತಿಹಾಸದಲ್ಲಿ ದೇವಸ್ಥಾನದ ಮಹಿಷನಿಗೆ ಬೆಳಕು- ಗಾಳಿ ಸೌಲಭ್ಯವನ್ನು ಸೋಲಾರ್ ಮೂಲಕ ಒದಗಿಸಲು ಸಿಕ್ಕ ಸೇವಾ ಭಾಗ್ಯ ಇದು. –
ಮೋಹನ ಭಾಸ್ಕರ ಹೆಗಡೆ, ಸಿಇಒ, ಸೆಲ್ಕೋ ಸೋಲಾರ್ ಸಂಸ್ಥೆ, ಬೆಂಗಳೂರು