ಜಾರ್ಖಂಡ್: ಗಣಿಗಾರಿಕೆ ಹಗರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಬುಧವಾರ (ಆಗಸ್ಟ್ 24) ಬೆಳಗ್ಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಆಪ್ತ ಪ್ರೇಮ್ ಪ್ರಕಾಶ್ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ ಎರಡು ಎಕೆ 47 ರೈಫಲ್ಸ್ ಮತ್ತು 60 ಗುಂಡುಗಳು ಪತ್ತೆಯಾಗಿರುವುದಾಗಿ ಇಂಡಿಯಾ ಟುಡೇ ವರದಿ ತಿಳಿಸಿದೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಪತ್ತೆಯಾದ ಅನಾಮಧೇಯ ಪತ್ರಕ್ಕೆ ಟ್ವಿಸ್ಟ್ : ಪ್ರಕರಣದ ಹಿಂದೆ ಲವ್ ಸ್ಟೋರಿ
100 ಕೋಟಿ ರೂಪಾಯಿ ಮೊತ್ತದ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಇಂದು ಜಾರ್ಖಂಡ್, ತಮಿಳುನಾಡು, ದೆಹಲಿ, ಎನ್ ಸಿಆರ್ ಸೇರಿದಂತೆ ಸುಮಾರು 20 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸುತ್ತಿದೆ ಎಂದು ವರದಿ ವಿವರಿಸಿದೆ.
ಸಿಎಂ ಆಪ್ತ ಪ್ರೇಮ್ ಪ್ರಕಾಶ್ ಜಾರ್ಖಂಡ್ ನಲ್ಲಿರುವ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದಾಗ, ಅಲ್ಮೇರಾದಲ್ಲಿ ಅಡಗಿಸಿ ಇಟ್ಟಿದ್ದ ಎರಡು ಎಕೆ 47 ರೈಫಲ್ಸ್ ಪತ್ತೆಯಾಗಿದ್ದು, ಈ ಸಂಬಂಧ ಪ್ರಕಾಶ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗುವುದು ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಕೆಲವು ವರದಿ ಪ್ರಕಾರ, ಎಕೆ 47 ರೈಫಲ್ಸ್ ಕಾನೂನು ಬಾಹಿರವಾಗಿ ಇರಿಸಿಕೊಂಡಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅಷ್ಟೇ ಅಲ್ಲ ಎಕೆ 47 ರೈಫಲ್ಸ್ ಕುರಿತು ಈವರೆಗೂ ಪ್ರೇಮ್ ಪ್ರಕಾಶ್ ಆಗಲಿ, ಸಿಎಂ ಸೋರೆನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಹೇಳಿದೆ.
ಸಿಎಂ ಸೋರೆನ್ ಆಪ್ತ ಪ್ರೇಮ್ ಪ್ರಕಾಶ್ ಕುರಿತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯ್ದೆಯಡಿ ಸಿಎ ಸೋರೆನ್ ಆಪ್ತರಾದ ಶಾಸಕ ಪಂಕಜ್ ಮಿಶ್ರಾ ಸೇರಿದಂತೆ ಜನಪ್ರತಿನಿಧಿಗಳ ಸುಮಾರು 37 ಬ್ಯಾಂಕ್ ಖಾತೆಗಳಿಂದ 11.88 ಕೋಟಿ ರೂಪಾಯಿ ಹಣ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.