Advertisement

ನಿರ್ವಹಣೆ ಇಲ್ಲದೆ ಮೂಲೆ ಸೇರಿದ ಸೆಗ್ವೇ ಸ್ಕೂಟರ್‌

11:23 AM Sep 18, 2019 | Suhan S |

ಗದಗ: ಗದಗ ಪರಿಸರವನ್ನು ಪ್ರವಾಸಿ ತಾಣವನ್ನಾಗಿಸುವ ಉದ್ದೇಶದಿಂದ ಜಿಲ್ಲಾಡಳಿತ ಹತ್ತು ಹಲವು ಯೋಜನೆಗಳನ್ನು ಕೈಗೊಂಡಿದೆ. ಭಿಷ್ಮಕೆರೆ ಅಭಿವೃದ್ಧಿ, ಬಿಂಕದಕಟ್ಟಿ ಸಣ್ಣ ಉದ್ಯಾನವದಿಂದಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಮತ್ತಷ್ಟು ಸಂಖ್ಯೆಯಲ್ಲಿ ಯುವ ಪ್ರವಾಸಿಗರನ್ನು ಆಕರ್ಷಿಸಲು ಸೆಗ್ವೇ ಸ್ಕೂಟರ್‌ಗಳನ್ನು ಖರೀದಿಸಲಾಗಿತ್ತು. ಆದರೆ, ಅದರ ನಿರ್ವಹಣೆಗೆ ಸೂಕ್ತ ಯೋಜನೆ ಇಲ್ಲದೇ ಒಂದೂವರೆ ವರ್ಷದಿಂದ ಸ್ಕೂಟರ್‌ಗಳು ಧೂಳು ತಿನ್ನುತ್ತಿವೆ.

Advertisement

ನಗರದ ಹೃದಯ ಭಾಗದಲ್ಲಿರುವ ಭಿಷ್ಮಕೆರೆ ಒಡಲಿಗೆ ನದಿ ನೀರು ತುಂಬಿಸಿದ್ದು, 116 ಅಡಿ ಎತ್ತರದ ಬಸವಣ್ಣನ ಮೂರ್ತಿ ಸ್ಥಾಪನೆ, ಉದ್ಯಾನಗಳ ಅಭಿವೃದ್ಧಿಯೊಂದಿಗೆ ಕೆರೆಯಲ್ಲಿ ದೋಣಿ ವಿಹಾರವನ್ನೂ ಆರಂಭಿಸಿತ್ತು. ಜೊತೆಗೆ ಬಿಂಕದಕಟ್ಟಿ ಸಣ್ಣ ಮೃಗಾಯಲದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿತ್ತು. ಅದರೊಂದಿಗೆ ಯುವ ಜನರಿಗೆ ಸಾಹಸಮಯ ಹಾಗೂ ರೋಮಾಂಚನ ಅನುಭವ ನೀಡಲು ಜಿಲ್ಲಾಡಳಿತ ಐದು ಸೆಗ್ವೇ ಸ್ಕೂಟರ್‌ಗಳನ್ನು ಖರೀದಿಸಿತ್ತು. ಅದರ ಖರೀದಿಗೆ ತಲಾ 98 ಸಾವಿರ ರೂ. ಖರ್ಚು ಮಾಡಿರುವ ಜಿಲ್ಲಾಡಳಿತ 26-8-2018ರಂದು ಲೋಕಾರ್ಪಣೆಗೊಳಿಸಿತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಕೆ. ಪಾಟೀಲ ಅವರಿಂದ ಸೆಗ್ವೇ ಸ್ಕೂಟರ್‌ಗಳಿಗೆ ಚಾಲನೆ ನೀಡಲಾಯಿತು. ಆನಂತರಅಧಿಕಾರಿಗಳ ನಿರಾಸಕ್ತಿಯಿಂದಾಗಿ ಅವು ಮತ್ತೆ ರಸ್ತೆಗಿಳಿಯಲಿಲ್ಲ. ಸ್ಥಳಾವಕಾಶದ ಕೊರತೆಯಿಂದಾಗಿ ಅವು ವಿವಿಧ ಇಲಾಖೆಗಳ ಕಚೇರಿ ಕೊಠಡಿಗಳಲ್ಲಿ ಮೂಲೆ ಸೇರಿವೆ.

ಸೆಗ್ವೇ ಸ್ಕೂಟರ್‌ ವಿಶೇಷವೇನು?: ವಿದ್ಯುತ್‌ ಯಂತ್ರ ಚಾಲಿತ ಸ್ಕೂಟರ್‌ ಇದಾಗಿದ್ದು, ಎರಡು ಚಕ್ರಗಳನ್ನು ಹೊಂದಿರುತ್ತದೆ. ಇದರಲ್ಲಿ ಒಬ್ಬರು ಮಾತ್ರ ನಿಂತು ಕೊಂಡೇ ಚಲಾಯಿಸುವ ವಾಹನ ಇದಾಗಿದೆ. ಪ್ರತಿ ಗಂಟೆಗೆ 5ರಿಂದ 20 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ವಿದೇಶಿ ಹಾಗೂ ವಿವಿಧ ಕಾರ್ಪೋರೇಟ್ ಕಂಪನಿಗಳಲ್ಲಿ ಇದು ಹೆಚ್ಚು ಬಳಕೆಯಲ್ಲಿದೆ. 1.5×2 ಅಡಿ ವಿಸ್ತೀರ್ಣವಿದ್ದು, ಕಡಿಮೆ ಖರ್ಚು, ಟ್ರಾಫಿಕ್‌ ಮತ್ತು ಪಾರ್ಕಿಂಗ್‌ ಸಮಸ್ಯೆ ಉಂಟಾಗದಿರುವುದು ಇದರ ವಿಶೇಷ.

ಹೀಗಾಗಿ ಅದನ್ನು ನಗರಕ್ಕೆ ಪರಿಚಯಿಸುವುದರಿಂದ ಯುವ ಸಮೂಹವನ್ನು ಆಕರ್ಷಿಸಲು ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರದಿಂದ ಜಿಲ್ಲಾಡಳಿತ ಅವುಗಳನ್ನು ಖರೀದಿಸಿತ್ತು.

ಜಾರಿಗೆ ಬಾರದ ಯೋಜನೆ: ಸೆಗ್ವೇ ಸ್ಕೂಟರ್‌ಗಳು ಇಲ್ಲಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ, ಭಿಷ್ಮಕೆರೆ ಹಾಗೂ ಬಿಂಕದಕಟ್ಟಿ ಮಾರ್ಗದಲ್ಲಿ ಇವುಗಳನ್ನು ಓಡಿಸಲಾಗುತ್ತದೆ. ಅವುಗಳಿಗೆ ಪ್ರತಿ ಗಂಟಿಗೆ ಕನಿಷ್ಠ ದರದಲ್ಲಿ ಬಾಡಿಗೆ ನಿಗದಿಗೊಳಿಸಲಾಗುತ್ತದೆ ಎನ್ನಲಾಗಿತ್ತು.

Advertisement

ಆದರೆ, ಉದ್ಘಾಟನೆ ಬಳಿಕ ಇವುಗಳನ್ನು ವಿವಿಧ ಇಲಾಖೆಗಳ ಕೋಣೆಗೆ ಸೇರಿಸಿದ ಅಧಿಕಾರಿಗಳು ಮತ್ತೆ ಅವುಗಳತ್ತ ಮುಖ ಮಾಡಿಲ್ಲ ಎಂಬುದು ಗಮನಾರ್ಹ.

ಹೀಗಾಗಿ ಕಳೆದ ಒಂದೂವರೆ ವರ್ಷದಿಂದ ಎರಡು ನಿರ್ಮಿತಿ ಕೇಂದ್ರದಲ್ಲಿ, ಒಂದು ಜಿಲ್ಲಾ ಕ್ರೀಡಾಂಗಣದಲ್ಲಿ ಸೇರಿದಂತೆ ಮೂರು ಸೆಗ್ವೇ ಸ್ಕೂಟರ್‌ಗಳು ಧೂಳು ತಿನ್ನುತ್ತಿವೆ.

ಇನ್ನೆರಡು ಸ್ಕೂಟರ್‌ಗಳು ಬಿಂಕದಕಟ್ಟಿ ಸಣ್ಣ ಮೃಗಾಲಯದಲ್ಲಿವೆ. ಅವುಗಳಿಗೆ ಒಬ್ಬರಿಗೆ 50 ರೂ. ನಿಗದಿಗೊಳಿಸಲಾಗಿದೆ. ಆದರೆ, ಒಂದು ಮಾತ್ರ ಆಗೊಮ್ಮೆ- ಈಗೊಮ್ಮೆ ಬಳಕೆಯಾಗುತ್ತಿದೆ ಎಂದು ಹೇಳಲಾಗಿದೆ.

ಸೆಗ್ವೇ ಮೇಲೆ ಕಾಲಿಡುತ್ತಿದ್ದಂತೆ ಗರಿಷ್ಠ 20 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಹೀಗಾಗಿ ಜಿಲ್ಲಾ ಕ್ರೀಂಡಾಂಗಣದಲ್ಲಿರುವ ಸೆಗ್ವೇಯನ್ನು ಉಚಿತವಾಗಿ ಬಳಸಲೂ ಕ್ರೀಡಾಪಟುಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಜಿಲ್ಲಾ ಯುವಜನ ಸೇವಾ ಕ್ರೀಡಾಧಿಕಾರಿ ವಿಶ್ವನಾಥ.

 

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next