ಸಿನಿಮಾ ಟೈಟಲ್ ವಿಭಿನ್ನವಾಗಿದ್ದರೆ ಬೇಗನೇ ಜನರನ್ನು ಸೆಳೆಯಬಹುದು ಎಂಬ ನಂಬಿಕೆ ಸಿನಿಮಾ ಮಂದಿಯದ್ದು. ಅದೇ ಕಾರಣದಿಂದ ಸಿನಿಮಾದ ಕಥೆ ಬರೆದಾದರೂ ಅನೇಕ ಸಿನಿಮಾಗಳು ತಂಡಗಳು ಟೈಟಲ್‌ಗೆ ತಲೆಕೆಡಿಸಿಕೊಂಡಿರುತ್ತವೆ. ಈಗ ಇದೇ ರೀತಿ ವಿಭಿನ್ನ ಟೈಟಲ್‌ನೊಂದಿಗೆ ಸಿನಿಮಾವೊಂದು ತಯಾರಾಗುತ್ತಿದೆ. ಆ ಚಿತ್ರದ ಹೆಸರೇ “ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’. ಈ ರೀತಿಯ ವಿಭಿನ್ನ ಶೀರ್ಷಿಕೆಯ ಸಿನಿಮಾ ತನ್ನ ಪೋಸ್ಟರ್ ಮತ್ತು ಟೈಟಲ್ ಬಿಡುಗಡೆ ಮಾಡಿದೆ.
ಕಾಮಿಡಿ ಥ್ರಿಲ್ಲರ್ ಡ್ರಾಮಾ ಹೊಂದಿರುವ ಈ ಸಿನಿಮಾವನ್ನು ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ ಸಂಭಾಷಣೆ, ಸಾಹಿತ್ಯ ಬರೆದಿರುವ ಅಭಿನಂದನ್ ದೇಶ್‌ಪ್ರಿಯ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ವಿನಯ್ ಯುವರಾಜ್, ಮನೋಜ್ ಪುತ್ತೂರು, ರಕ್ಷಿತಾ ಅಭಿನಯಿಸಿದ್ದಾರೆ. ಅದಲ್ಲದೆ ಈ ಚಿತ್ರದಲ್ಲಿ ನವೀಂದ್ರ, ದತ್ತಣ್ಣ, ಮನ್‌ದೀಪ್ ರಾಯ್, ಮಿಮಿಕ್ರಿ ಗೋಪಿ, ಅನಿಲ್ ಸಿದ್ದು, ಪ್ರಶಾಂತ್, ರವಿಶಂಕರ್ ನಾಗ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಈಗಾಗಲೇ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು, ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ಮಹಾನ್ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಡಿ ಪ್ರತೀತ್ ಅಕ್ಕಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಷ್ಣು ಪ್ರಸಾದ್, ವಿಶ್ವ ಪಾಟೀಲ್ ಛಾಯಾಗ್ರಹಣವಿದೆ.
ಬೆಂಗಳೂರು, ಸಕಲೇಶಪುರ, ಮಡಿಕೇರಿ, ಹೊನ್ನಾವರ, ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ರಾಘವೇಂದ್ರ. ವಿ ಸಂಗೀತ ನಿರ್ದೇಶನ, ಚೇತನ್ ರಾವ್ ಹಿನ್ನೆಲೆ ಸಂಗೀತ, ಉಜ್ವಲ್ ಚಂದ್ರ ಸಂಕಲನ, ಚಂದ್ರು ಬಂಡೆ ಸಾಹಸ ಚಿತ್ರಕ್ಕಿದೆ. ಫಸ್ಟ್‌ಲುಕ್ ಮೂಲಕ ಸಿನಿಮಾ ಪ್ರಚಾರ ಆರಂಭಿಸಿದೆ.