ಆತ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲವಿರುವ ಹುಡುಗ. ನೋಡಲು ಚಾಕೋಲೆಟ್ ಬಾಯ್‌ನಂತೆ ಕಾಣುವ ಜೊತೆಗೆ ಅಷ್ಟೇ ರಫ್ ಆ್ಯಂಡ್ ಟಫ್ ಆಗಿರುವ ಈ ಹುಡುಗನ ಜೀವನದಲ್ಲಿ ಹುಡುಗಿಯೊಬ್ಬಳು ಪ್ರವೇಶಿಸಿ, ಆತನನ್ನು ಪ್ರೀತಿಸುವಂತೆ ದುಂಬಾಳು ಬೀಳುತ್ತಾಳೆ. ಕೊನೆಗೂ ಆಕೆಯ ಪ್ರೀತಿಗೆ ಮನಸೋಲುವ ಹುಡುಗ ಮನೆಯವರ ಸಮ್ಮತಿ ಪಡೆದು ಪ್ರೀತಿಸಿದ ಹುಡುಗನನ್ನೇ ವರಿಸುತ್ತಾನೆ. ಎರಡು-ಮೂರು ಸಾಂಗ್, ಬ್ಯಾಂಕಾಕ್‌ನಲ್ಲಿ ಹನಿಮೂನ್ ಟ್ರಿಪ್, ಲವ್-ರೊಮ್ಯಾನ್ಸ್ ಎಲ್ಲವೂ ಸುಖವಾಗಿ, ಸುಸೂತ್ರವಾಗಿ ನಡೆಯುತ್ತದೆ ಎನ್ನುವಾಗಲೇ ಅನಿರೀಕ್ಷಿತ ಆಘಾತವೊಂದು ಹುಡುಗನ ಜೀವನದಲ್ಲಿ ಎದುರಾಗುತ್ತದೆ. ಅಲ್ಲಿಯವರೆಗೂ ರೊಮ್ಯಾಂಟಿಕ್ ಟ್ರ್ಯಾಕ್‌ನಲ್ಲಿ ಸಾಗುತ್ತಿದ್ದ ಕಥೆ, ಕೊಂಚ ಟ್ವಿಸ್ಟ್-ಟರ್ನ್ ತೆಗೆದುಕೊಂಡು ಸಸ್ಪೆನ್ಸ್-ಆ್ಯಕ್ಷನ್ ಟ್ರ್ಯಾಕ್‌ಗೆ ಬಂದು ನಿಲ್ಲುತ್ತದೆ. ಕೊನೆಗೆ ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲದಕ್ಕೂ ಉತ್ತರ ಸಿಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಸೀತಾಯಣ’ ಸಿನಿಮಾದ ಕಥೆಯ ಒಂದು ಎಳೆ.
ಒಂದು ಲವ್‌ಸ್ಟೋರಿಯಲ್ಲಿ ಒಂದಷ್ಟು ಸಸ್ಪೆನ್ಸ್-ಆ್ಯಕ್ಷನ್ ಅಂಶಗಳನ್ನು ಇಟ್ಟುಕೊಂಡು ಜೊತೆಯಲ್ಲಿ ಒಂದಷ್ಟು ಟ್ವಿಸ್ಟ್- ಟರ್ನ್ ಸೇರಿಸಿ ಹಿರಿಯರು (ಪೋಷಕರು) ಮತ್ತು ಕಿರಿಯರು (ಯುವಕರು) ಎರಡೂ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ “ಸೀತಾಯಣ’ ಚಿತ್ರವನ್ನು ತೆರೆಗೆ ತಂದಿದ್ದಾರೆ ನಿರ್ದೇಶಕ ಪ್ರಭಾಕರ್ ಆರಿಪ್ಕಾ.
ಇದನ್ನೂ ಓದಿ:‘ವೀಲ್ ಚೇರ್ ರೋಮಿಯೋ’ ಚಿತ್ರ ವಿಮರ್ಶೆ; ವೀಲ್‌ಚೇರ್‌ನಿಂದ ಮೇಲೇಳುವ ಸಿನಿಮಾವಿದು…
ಚಿತ್ರದ ಕಥಾಹಂದರ ಚೆನ್ನಾಗಿದ್ದರೂ, ಚಿತ್ರದ ನಿರೂಪಣೆ ಮತ್ತು ಸಂಭಾಷಣೆ ಚಿತ್ರದ ಓಟಕ್ಕೆ ಅಲ್ಲಲ್ಲಿ ತೊಡಕಾದಂತೆ ಕಾಣುತ್ತದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ “ಸೀತಾಯಣ’ ಚಿತ್ರ ನಿರ್ಮಾಣವಾಗಿದ್ದರೂ, ಚಿತ್ರದ ಕಲಾವಿದರು ಮತ್ತು ತಂತ್ರಜ್ಞರಲ್ಲಿ ತೆಲುಗಿನವರದ್ದೇ ಪಾರಮ್ಯ ತೆರೆಮುಂದೆ ಮತ್ತು ತೆರೆಹಿಂದೆ ಹೆಚ್ಚಾಗಿ ಕಾಣುತ್ತದೆ. ಅನೇಕ ಕಲಾವಿದರ ಡೈಲಾಗ್ ಡೆಲಿವರಿ ತೆರೆಮೇಲೆ ಕೆಲವು ಕಡೆಗಳಲ್ಲಿ ತುಂಬ ಅಸಹಜ ಎನಿಸುವಂತಿದೆ.
ಇನ್ನು ಚೊಚ್ಚಲ ಚಿತ್ರದಲ್ಲಿ ನಟ ಅಕ್ಷಿತ್ ಶಶಿಕುಮಾರ್ ತಮ್ಮ ಪಾತ್ರಕ್ಕೆ ಸಾಕಷ್ಟು ಪರಿಶ್ರಮ ಹಾಕಿರುವುದು ತೆರೆಮೇಲೆ ಕಾಣುತ್ತದೆ. ಉಳಿದಂತೆ ನಾಯಕಿ ಅನಹಿತಾ ಭೂಷಣ್ ಗ್ಲಾಮರ್ ಬೊಂಬೆಯಾಗಿ ತೆರೆಮೇಲೆ ಇದ್ದಷ್ಟು ಹೊತ್ತು ಅಂದವಾಗಿ ಕಾಣುತ್ತಾರೆ. ಉಳಿದಂತೆ ಇತರ ಕಲಾವಿದರ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ.
ಚಿತ್ರದ ಒಂದೆರಡು ಹಾಡುಗಳು ಗುನುಗುವಂತಿದ್ದು, ಚಿತ್ರದ ಛಾಯಾಗ್ರಹಣ, ಸಂಕಲನ, ಕಲರಿಂಗ್, ಒಳ್ಳೆಯ ಲೊಕೇಶನ್ಸ್ ತೆರೆಮೇಲೆ “ಸೀತಾಯಣ’ವನ್ನು ಕಲರ್‌ಫುಲ್ ಆಗಿ ತೋರುವಂತೆ ಮಾಡಿದೆ. ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೆ ವಾರಾಂತ್ಯದಲ್ಲಿ ಒಮ್ಮೆ “ಸೀತಾಯಣ’ ಕಣ್ತುಂಬಿಕೊಂಡು ಬರಲು ಅಡ್ಡಿಯಿಲ್ಲ.
ಜಿ.ಎಸ್.ಕೆ. ಸುಧನ್