Advertisement

ದಾರಿಯಲ್ಲಿ ಕಂಡ ಪ್ರಾಣಿಗಳಿಗೆ ಹಣ್ಣು ಕೊಡೋರು…

09:17 AM Mar 25, 2019 | Team Udayavani |

ಶ್ರೀ ಶಿವಕುಮಾರ ಸ್ವಾಮೀಜಿಯವರು ಮಠದ ಅಧ್ಯಕ್ಷರಾಗಿದ್ದ ಆರಂಭದ ದಿನಗಳಲ್ಲಿ, ಮಠ ಆರ್ಥಿಕವಾಗಿ ಸಂಕಷ್ಟದಲ್ಲಿತ್ತು. ಹೀಗಾಗಿ, ಹಳ್ಳಿ ಹಳ್ಳಿಗೆ ಹೋಗಿ ಭಿಕ್ಷಾಟನೆ ಮಾಡಿ, ಮಠದಲ್ಲಿ ಮಕ್ಕಳಿಗೆ ಅನ್ನ ದಾಸೋಹ ಏರ್ಪಡಿಸುತ್ತಿದ್ದರು.   ಆ ಕಾಲದಲ್ಲಿ ಯಾವುದೇ ಸಂಪರ್ಕ ಸಾರಿಗೆ ಇಷ್ಟೊಂದು ಅಭಿವೃದ್ಧಿಯಾಗಿರಲಿಲ್ಲ. ಕುದುರೆಯ ಮೇಲೆ, ಎತ್ತಿನಗಾಡಿಯಲ್ಲಿ ಹೋಗಬೇಕಿತ್ತು.  ಕೆಲವು ವರ್ಷಗಳ ನಂತರ ಭಕ್ತರು ಒಂದು ಡಾರ್ಜ್‌ ಕಾರನ್ನು ನೀಡಿದ್ದರು. ಅದರಲ್ಲಿ ಶ್ರೀಗಳು ಸಂಚರಿಸುತ್ತಿದ್ದರು.  ಅದಾದನಂತರ ಅಂಬಾಸಿಡರ್‌, ನಿಷಾನ್‌, ಕ್ಯಾಪ್ಟಿನೊ ಕಾರುಗಳಲ್ಲಿ ಓಡಾಡಿದ್ದಾರೆ. ಶ್ರೀಗಳು ಕಾರಿನಲ್ಲಿ ಓಡಾಡಲು ಆರಂಭಿಸಿದ ಮೇಲೆ ಮೂರು ಜನ ಚಾಲಕರು ಕೆಲಸ ಮಾಡುತ್ತಿದ್ದರು.  ಮೊದಲನೆ ಚಾಲಕ ಶಿವಣ್ಣ, ಎರಡನೇ ಚಾಲಕ ರಾಜ ಶೇಖರಯ್ಯ, ಮೂರನೇ ಚಾಲಕ ಮಹಾದೇವ ಸ್ವಾಮಿ.

Advertisement

ಮೂರನೇ ಚಾಲಕ ಮಹಾದೇವ ಸ್ವಾಮಿಯು, ಮೂಲತಃ ಟಿ. ನರಸೀಪುರ ತಾಲೂಕಿನ ಮೂಡರಹಳ್ಳಿ ಇಂದ ವಿದ್ಯಾಭ್ಯಾಸಕ್ಕೆ ಅಂತ ಬಂದು ಶ್ರೀಗಳ ಕಾರು ಚಾಲಕರಾಗಿ ಇಲ್ಲೇ ನಲೆಸಿದ್ದಾರೆ. 15 ವರ್ಷಗಳ ಕಾಲ ನಡೆದಾಡುವ ದೇವರು ಎಲ್ಲಿಗೆ ಹೋದರೂ ಆಗೆಲ್ಲ ಮಾದೇವ ಸ್ವಾಮಿಯವರೇ ಕಾರು ಚಾಲಕ. ಸ್ವಾಮೀಜಿಗಳ ಒಡನಾಟದ ಬಗ್ಗೆ ಅವರು ಹೀಗೆನ್ನುತ್ತಾರೆ: ಶ್ರೀಗಳು ಎಷ್ಟೇ ದೂರ ಪ್ರಯಾಣಿಸಿದರೂ ಮಠಕ್ಕೆ ವಾಪಸ್ಸು ಬಂದು,  ಮಕ್ಕಳೊಂದಿಗೆ ಇರಬೇಕು ಎನ್ನುವುದೇ ಅವರ ಆಸೆಯಾಗಿತ್ತು. ಕೆಲ ಭಕ್ತರು ಕೋಟ್ಯಂತರ ರೂ. ಬೆಲೆಬಾಳುವ ಕಾರುಗಳಲ್ಲಿ  ಶ್ರೀಗಳನ್ನು ಕರೆದು ಕೊಂಡು ಹೋಗುತ್ತಿದ್ದರು. ಆಗ ಶ್ರೀಗಳು ಇದರ ಬೆಲೆ ಎಷ್ಟು ಎಂದು ಕೇಳುತ್ತಿದ್ದರು.  ಒಂದು ಕೋಟಿ ಬುದ್ದಿ ಎಂದರೆ, ಅಷ್ಟೊಂದು ಬೆಲೆಯೇ? ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು. “ಇಂಧನವನ್ನು ಮಿತವಾಗಿ ಬಳಸಿ. ಅನಗತ್ಯವಾಗಿ ಕಾರು ಓಡಿಸಬೇಡಿ. ಅವಶ್ಯಕತೆ ಇದ್ದರೆ ಮಾತ್ರ ಕಾರು ಬಳಸಿ’ ಎಂದೆಲ್ಲಾ ಸಲಹೆ ನೀಡುತ್ತಿದ್ದರು.

ಶ್ರೀಗಳ ಕಾರಿನಲ್ಲಿ ಬಿಸ್ಕತ್ತು ಮತ್ತು ಬಾಳೆಹಣ್ಣು ಇರುತ್ತಿತ್ತು. ಏಕೆಂದರೆ,  ದಾರಿಯಲ್ಲಿ ನಾಯಿ ಕಂಡರೆ ಶ್ರೀಗಳು ಬಿಸ್ಕತ್ತು ಹಾಕುತ್ತಿದ್ದರು. ಅದೇ ರೀತಿಯಲ್ಲಿ ಜಾನುವಾರುಗಳು ಕಂಡರೆ ಅವುಗಳಿಗೆ ಬಾಳೆಹಣ್ಣು ತಿನ್ನಿಸುತ್ತಿದ್ದರು.

ಶ್ರೀಗಳು ಮಠದ ಶಕ್ತಿಪೀಠ ಮಂಚದ ಮೇಲೆ ಕುಳಿತರೆ ಸಾಕು ನೂರಾರು ಪಾರಿವಾಳಗಳು ಮಠದ ಆವರಣಕ್ಕೆ ಬರುತ್ತಿದ್ದವು. ಅವಕ್ಕೆ ಕಾಳುಗಳನ್ನು ಹಾಕಿಸುತ್ತಿದ್ದರು. ಪ್ರಾಣಿ, ಪಕ್ಷಿ$ಗಳೆಂದರೆ ಶ್ರೀಗಳಿಗೆ ಎಲ್ಲಿಲ್ಲದ ಪ್ರೀತಿ’ ಇಷ್ಟು ಹೇಳಿದ ಮಹದೇವ ಸ್ವಾಮಿಯ ಕಣ್ಣು ತೇವವಾಯಿತು.

ಚಿ. ನಿ. ಪುರುಷೋತ್ತಮ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next