Advertisement
ಅಂಥ ಒಂದು ಡೌನ್‌ಟೌನ್‌ನ ಬೀದಿಯಲ್ಲಿ ನಾನು ನನ್ನ ಮಗಳು ಮೊಮ್ಮಕ್ಕಳ ಜೊತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನಮ್ಮೆದುರು ಕೆಲವು ಮಾರುಗಳಾಚೆ ಅರೇಳು ಶಾಲೆಯ ಮಕ್ಕಳು ಮೌನವಾಗಿ ಹೋಗುವುದನ್ನು ನೋಡುತ್ತಿದ್ದೆ. ರಸ್ತೆಯ ಪಕ್ಕದಲ್ಲಿದ್ದ ಒಂದು ಮನೆ ಎದುರು ಆ ಮಕ್ಕಳು ಮುಟ್ಟಿದಾಗ ಬಾಗಿಲು ತೆರೆದು ಸುಮಾರು ನಲುವತ್ತರ ಪ್ರಾಯದ ತೆಳುವಾದ ಮೈಕಟ್ಟಿನ ವ್ಯಕ್ತಿಯೊಬ್ಬ ಹೊರಗೆ ಬಿದ್ದ. ಅವನನ್ನು ನೋಡಿದವರೇ ಆ ಶಾಲಾಮಕ್ಕಳು ತಮ್ಮ ಹೆಗಲ ಮೇಲಿದ್ದ ಪುಸ್ತಕಗಳ ಚೀಲಗಳನ್ನು ನೆಲದ ಮೇಲಿಟ್ಟು ಅಟೆನ್ಶನ್‌ಗೆ ಬಂದು ಅವನಿಗೆ ಸೆಲ್ಯೂಟ್ ಮಾಡಿದರು. ಅವನು ಮುಗುಳ್ನಗೆ ಸೂಸಿ ಅವರನ್ನು ದಾಟಿ ಮುಂದಕ್ಕೆ ಬಂದು ನಮ್ಮನ್ನು ಹಾದುಹೋದ. ಆ ಮಕ್ಕಳು ಮತ್ತೆ ತಮ್ಮ ಚೀಲಗಳನ್ನು ಎತ್ತಿಕೊಂಡು ಅವರ ದಾರಿ ಹಿಡಿದರು. ನನಗೆ ಆಶ್ಚರ್ಯವೆನಿಸಿತು.
Related Articles
Advertisement
ವಾಷಿಂಗ್ಟನ್‌ನಲ್ಲಿರುವ ಸ್ಮಿತೊನಿಯನ್ ಮ್ಯೂಸಿಯಮ್‌ನಲ್ಲಿ ಒಂದು ವಿಭಾಗವಿದೆ. ತಮ್ಮ ದೇಶದ ಸೈನಿಕರು ಯುದ್ಧದಲ್ಲಿ ಯಾವುದೇ ದೇಶದಲ್ಲಿ ಸಾಯಲಿ, ಅವರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ಮರಳಿ ತಂದು ಆರ್ಲಿಂಗ್ಟನ್ ಸಮಾಧಿಸ್ಥಳದಲ್ಲಿ ಸಮಾಧಿಮಾಡಿದ್ದಾರಲ್ಲ. ಎರಡನೆಯ ಮಹಾಯುದ್ಧದಲ್ಲಿ ಹಾಗೆ ಸತ್ತವರ ಶರೀರಗಳು ಸಿಕ್ಕದಿದ್ದಾಗ, ಅವರ ಬೂಟು, ಚಪ್ಪಲಿಗಳನ್ನು ಸಂಗ್ರಹಿಸಿ ಆ ವಿಭಾಗದಲ್ಲಿ ಇಡಲಾಗಿದೆ. ಅವು ಯಾರ ಬೂಟುಗಳು, ಯಾವ ಸೈನಿಕನ ಪಳೆಯುಳಿಕೆಗಳು ಎಂದು ತಿಳಿಯದಿದ್ದರೂ ಅವುಗಳಿಗೆ ಕೊಡಬೇಕಾದ ಗೌರವವನ್ನು ಅಲ್ಲಿ ಕೊಡಲಾಗಿದೆ. ಅವುಗಳ ರಾಶಿ ಕಂಡಾಗ ಮನಸ್ಸು ಖೇದಗೊಳ್ಳುತ್ತದೆ. ಮಾತು ಮರೆಯಾಗುತ್ತದೆ.
ಹಾಗೆ ನೋಡಿದರೆ ಅಮೆರಿಕಕ್ಕೆ ನಮ್ಮ ದೇಶದಷ್ಟು ಪುರಾತನ ಇತಿಹಾಸವಿಲ್ಲ. ಅಲ್ಲಿರುವ ಮೂಲನಿವಾಸಿ ರೆಡ್‌ಇಂಡಿಯನ್ಸ್‌ಗಳನ್ನು ಬಿಟ್ಟರೆ (ಈಗ ಅವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ) ಪ್ರತಿಯೊಬ್ಬರೂ ಜಗತ್ತಿನ ಬೇರೆ ಬೇರೆ ದೇಶಗಳಿಂದ ವಲಸೆ ಬಂದವರೇ. ಹಾಗೆ ವಲಸೆ ಬಂದು ಇನ್ನೂ 500 ವರ್ಷಗಳಾಗಿಲ್ಲ. ಅಲ್ಲಿರುವ ಯಾರಿಗೂ ಅಮೆರಿಕ ತಾಯ್ನಾಡಲ್ಲ. ಆದರೂ ಅಲ್ಲಿಯ ಈಗಿನ ತಲೆಮಾರುಗಳು, ವಿಶೇಷವಾಗಿ ನಾಲ್ಕು ವರ್ಷ ನಡೆದು 1865ರಲ್ಲಿ ಅಂತ್ಯಗೊಂಡ ಅಮೆರಿಕ ಆಂತರಿಕ ಯುದ್ಧ American civil ನ ನಂತರದ ತಲೆಮಾರುಗಳು, ಅಮೆರಿಕವನ್ನು ತಮ್ಮದೇ ದೇಶ ಎಂದು ಭಾವಿಸಿ ಅದನ್ನು ಪ್ರೀತಿ-ಗೌರವಗಳಿಂದ ಕಾಣುತ್ತಾರಲ್ಲ, ಅದು ವಿಶೇಷ. ಅದಕ್ಕೆ ಮೂಲಕಾರಣ ಅಮೆರಿಕದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಹಾಗೂ ಅಮೆರಿಕದ ಸಂವಿಧಾನವನ್ನು ಬರೆದ ಜೇಮ್ಸ್ ಮ್ಯಾಡಿಸನ್ ಅವರ ದೂರದರ್ಶಿತ್ವ ಎನ್ನುವುದರಲ್ಲಿ ಸಂಶಯವಿಲ್ಲ.
ಅತ್ಯಂತ ಸರಳ ಸಂವಿಧಾನ ಮತ್ತು ತಮ್ಮ ಎಲ್ಲ ಜನರಿಗೆ ಸಮಸ್ತ ನಾಗರಿಕ ಸೌಲಭ್ಯಗಳನ್ನು ಒದಗಿಸುವತ್ತ ಅವರ ಕಾಳಜಿ ಅಮೆರಿಕದಂಥ ವಿಶಾಲ ದೇಶವನ್ನು ಒಗ್ಗಟ್ಟಿನಲ್ಲಿರಿಸಲು ಹಾಕಿದ ಬುನಾದಿಯಾಗಿದ್ದು ಅದನ್ನು ಅಭೇದ್ಯವನ್ನಾಗಿ ಮಾಡಿದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಾಗ ಬದಲಾಗುವ ಪ್ರಾಕೃತಿಕ, ಸಾಮಾಜಿಕ, ಸಾಮಯಿಕ ವೈಪರೀತ್ಯಗಳಿದ್ದೂ ಇದು ಒಂದೇ ದೇಶ ಮತ್ತು ಇದನ್ನು ನಾವು ಪ್ರೀತಿಸಬೇಕು, ಹೆಮ್ಮೆ ಪಡಬೇಕು, ಹಾಗೂ ಇದನ್ನು ರಕ್ಷಣೆ ಮಾಡುವ ಸೈನಿಕರನ್ನು ಗೌರವದಿಂದ ಕಾಣಬೇಕು ಅನ್ನುವ ಭಾವನೆ ಅಲ್ಲಿಯ ನಾಗರಿಕರಲ್ಲಿ ಮೂಡಿಬರಲು ಅವರು ಮತ್ತವರ ಮುಂದಿನ ತಲೆಮಾರಿನ ಅಧ್ಯಕ್ಷರುಗಳು ನಡೆದುಕೊಂಡು ಬಂದ ರೀತಿ. ಅಲ್ಲಿ ವೈವಿಧ್ಯತೆ ಇದೆ, ಆದರೆ ದೇಶದ ಏಕತೆಯ ವಿಚಾರ ಬಂದರೆ ಅದಕ್ಕೆ ಭಿನ್ನಾಭಿಪ್ರಾಯವಿಲ್ಲ. ಅಭಿವೃದ್ಧಿಗೊಂಡು ಜಗತ್ತಿನ ಎಲ್ಲ ದೇಶದ ಜನರನ್ನೂ ಆಕರ್ಷಿಸುವ ರೀತಿಯಲ್ಲಿ ಅದೀಗ ಬೆಳೆದು ನಿಂತಿದೆ. ಇಂದಿಗೂ ಎಲ್ಲರ ಕನಸಿನ ದೇಶ ಅದೇ ಆಗಿದೆ. ಹೋದರೆ ಆ ದೇಶಕ್ಕೆ ಹೋಗಿ ನೆಲಸಬೇಕು ಎನ್ನುವ ಆಸೆ ಜಗತ್ತಿನ ಪ್ರತಿಯೊಂದು ದೇಶದ ಯುವಜನರಿಗೆ ಇದ್ದೇ ಇದೆ. ಅಲ್ಲಿ ಎಲ್ಲ ರೀತಿಯ ಸೌಲಭ್ಯಗಳಿದ್ದು ಅವು ಕೈಗೆಟಕುವ ಹಾಗೆ ಸನಿಹದಲ್ಲಿದ್ದು, ಸಂಶೋಧನೆಗೋ, ವಿದ್ಯಾರ್ಜನೆಗೋ, ಹೊಟ್ಟೆಪಾಡಿಗೋ ದಕ್ಕಬಹುದಾದ ದೇಶವದು.
ಹಾಗೆಂದು ಅಲ್ಲಿ ಭ್ರಷ್ಟಾಚಾರ, ಲಂಚಕೋರತನ, ಮೋಸ, ದಗಲಬಾಜಿ, ಅತ್ಯಾಚಾರ, ಇತ್ಯಾದಿ ಇಲ್ಲವೆಂದಲ್ಲ. ಮುಕ್ತ ಸಮಾಜ, ಸುಲಭವಾಗಿ ದೊರಕುವ ಮಾರಕಾಯುಧಗಳು, ಮಾದಕದ್ರವ್ಯಗಳು ಇವೆಲ್ಲವೂ ಅಲ್ಲಿದ್ದರೂ ಸಾಮಾನ್ಯ ನಾಗರಿಕನಿಗೆ ಸುಲಭದಲ್ಲಿ (ಆರ್ಥಿಕವಾಗಿ ಅಲ್ಲ) ನ್ಯಾಯ ಒದಗಿಸುವ ಸರಳ ವಿಧಾನಗಳಿದ್ದುದರಿಂದಲೂ, ತಪ್ಪು ಮಾಡಿದವರಿಗೆ ಬಹಳ ಬೇಗ ಶಿಕ್ಷೆಯಾಗುವುದರಿಂದಲೂ ಸಾಮಾನ್ಯ ಜನರು ನೆಮ್ಮದಿಯ ಬದುಕು ಮಾಡಲು ಯಾವ ಅಡ್ಡಿ-ಆತಂಕಗಳನ್ನೆದುರಿಸುವ ಅಗತ್ಯವಿಲ್ಲ. ಒಂದು ಕಾಲದಲ್ಲಿ ಕ್ರೂರವಾದ ವರ್ಣದ್ವೇಷ, ಜನಾಂಗ ದ್ವೇಷ ತುಂಬಿದ್ದ ಆ ದೇಶದಲ್ಲಿ ಅಬ್ರಾಹಾಮ್ ಲಿಂಕನ್ ಅಧ್ಯಕ್ಷರಾದ ಮೇಲೆ ಅಂತಹ ಸಮಸ್ಯೆಗಳ ಹುಟ್ಟಡಗಿಸಿ, ಈಗ ಇಲ್ಲ ಎನ್ನಿಸುವಷ್ಟರ ಮಟ್ಟಿಗೆ ಪರಿಸ್ಥಿತಿ ತಿಳಿಯಾಗಿದೆ.
ಅಮೆರಿಕ ಅಭಿವೃದ್ಧಿಗೊಳ್ಳಲು, ಬಲಾಡ್ಯವಾಗಲು, ಅವಕಾಶಗಳ ಮಹಾಪೂರವನ್ನೊದಗಿಸಲು ಸಾಧ್ಯವಾದುದು ಅಲ್ಲಿಯ ಜನರ ಹುಟ್ಟುನೆಲದ ಮೇಲಿನ ಪ್ರೀತಿ. ಆ ಪ್ರೀತಿ ಅವರಲ್ಲಿ ಪಾಮಾಣಿಕತೆಯನ್ನು ಉದ್ದೀಪಿಸಿತು. ನಮ್ಮಲ್ಲಿ ಇಂಥ ದೇಶಪ್ರೇಮವನ್ನು ನಾವು ಕಾಣುತ್ತಿದ್ದೇವೆಯೇ? ಸೈನಿಕರ ಮೇಲೆ ಕಲ್ಲೊಗೆಯುವ, ಶತ್ರುದೇಶವನ್ನು ಹೊಗಳುವ, ನಮ್ಮ ಅನ್ನದ ಬಟ್ಟಲಿನಲ್ಲಿಯೇ ಉಗುಳುವ ಒಂದು ಪೀಳಿಗೆಯನ್ನು ಹುಟ್ಟು ಹಾಕುತ್ತಿದ್ದೇವೆಯೆ?
ಗೋಪಾಲಕೃಷ್ಣ ಪೈ