ಪಣಜಿ:ನೂತನವಾಗಿ ಅಸ್ತಿತ್ವಕ್ಕೆ ಬಂದ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಭ್ರಷ್ಟಾಚಾರದಲ್ಲಿ ಶಾಮೀಲಾದ ಕೆಲವು ಮುಖಂಡರು ಖಂಡಿತವಾಗಿಯೂ ಬಂಧನಕ್ಕೊಳಗಾಗಲಿದ್ದಾರೆ ಎಂದು ಗೋವಾ ರಾಜ್ಯಪಾಲ ಸತ್ಯಪಾಲ್ ಮಲಿಕ್ ಭವಿಷ್ಯ ನುಡಿದಿದ್ದಾರೆ.
ನಾನು ಜಮ್ಮು –ಕಾಶ್ಮೀರದ ರಾಜ್ಯಪಾಲನಾಗಿ ಕಾರ್ಯನಿರ್ವಹಿಸುವ ವೇಳೆ ಕೆಲವು ಮುಖಂಡರು ಪ್ರಜಾಪ್ರಭುತ್ವವನ್ನೇ ಅವಹೇಳನ ಮಾಡಿರುವುದಕ್ಕೆ ಸಾಕ್ಷಿಯಾಗಿದ್ದೇನೆ. ಆದರೆ ಪ್ರಜಾಪ್ರಭುತ್ವ ಅದನ್ನು ಗುಣಪಡಿಸಲಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಕೆಲವು ಮುಖಂಡರ ವಿರುದ್ಧದ ತನಿಖೆ ಪ್ರಗತಿಯ ಹಂತದಲ್ಲಿದೆ. ಹೀಗಾಗಿ ಕೆಲವರು ಜೈಲಿಗೆ ಹೋಗುವುದು ಖಚತಿ ಎಂದು ಸಂವಿಧಾನ ದಿನಾಚರಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡುವ ವೇಳೆ ಈ ವಿಷಯ ಪ್ರಸ್ತಾಪಿಸಿರುವುದಾಗಿ ವರದಿ ತಿಳಿಸಿದೆ.
ರಾಜ್ಯದ ಕೆಲವೆಡೆ ನಡೆದ ಚುನಾವಣೆಯಲ್ಲಿ ಹಲವು ಮುಖಂಡರು ಆಯ್ಕೆಯಾಗಿದ್ದಾರೆ. ಕೆಲವರು ಶ್ರೀನಗರ್, ದೆಹಲಿ, ದುಬೈ, ಲಂಡನ್ ಹಾಗೂ ಫ್ರಾನ್ಸ್ ನಲ್ಲಿ ಈಗಲೂ ಮನೆಯನ್ನು ಹೊಂದಿರುವುದಾಗಿ ಜಮ್ಮು-ಕಾಶ್ಮೀರದ ಮಾಜಿ ಗವರ್ನರ್ ಆರೋಪಿಸಿದ್ದಾರೆ.
ಆಗಸ್ಟ್ 2018ರಿಂದ 2019ರ ಅಕ್ಟೋಬರ್ ವರೆಗೆ ಜಮ್ಮು ಕಾಶ್ಮೀರದ ಗವರ್ನರ್ ಆಗಿ ಕಾರ್ಯನಿರ್ವಹಿಸಿದ್ದ ಸಂದರ್ಭದಲ್ಲಿನ ಘಟನೆಗಳನ್ನು ನೆನಪಿಸಿಕೊಂಡಿರುವ ಅವರು, ತಮ್ಮ ಆಡಳಿತಾವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದ ಬ್ಯಾಂಕ್ ಉದ್ಯೋಗ ಹಗರಣದ ಬಗ್ಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆಂದು ಎಎನ್ ಐ ವರದಿ ಮಾಡಿದೆ.