ದಾವಣಗೆರೆ: ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಮೀಸಲಾತಿಗಾಗಿ ಅಲ್ಪಸಂಖ್ಯಾತ ಸ್ಥಾನಮಾನ, ಅಭಿವೃದ್ಧಿ ಮಂಡಳಿ ರಚನೆ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ವೀರಶೈವ ಸಂಘರ್ಷ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ವೀರಶೈವ ಲಿಂಗಾಯತ ಸಮಾಜವನ್ನು ಎಲ್ಲಾ ಸರ್ಕಾರ ಕಡೆಗಣಿಸುತ್ತಾ ಬಂದ ಪರಿಣಾಮ ಸಮಾಜ ಹಲವಾರು ಸಾಮಾಜಿಕ ಸೌಲಭ್ಯದಿಂದ ವಂಚಿತವಾಗುತ್ತಿದೆ. ವೀರಶೈವ ಲಿಂಗಾಯತ ಸಮಾಜ ಎಂದರೆ ಮುಂದುವರೆದವರು, ಆರ್ಥಿಕವಾಗಿ ಸದೃಢರು, ಉಳ್ಳವರು ಎಂಬ ಭಾವನೆ ಇದೆ. ಆದರೆ, ಭಾವನೆಗೂ ವಾಸ್ತವಕ್ಕೂ ಭಾರೀ ವ್ಯತ್ಯಾಸ ಇದೆ. ಇಂದಿಗೂ ವೀರಶೈವ ಲಿಂಗಾಯತ ಸಮಾಜದ ಅನೇಕ ಉಪ ಪಂಗಡಗಳು ಅತ್ಯಂತ ಬಡತನದಲ್ಲಿದ್ದಾರೆ.
ಶೈಕ್ಷಣಿಕ, ಆರ್ಥಿಕ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದ್ದಾರೆ. ಒಂದು ರೀತಿಯ ಅನಾಥಪ್ರಜ್ಞೆಯಲ್ಲಿದ್ದಾರೆ. ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಮೀಸಲಾತಿಯಾಗಿರುವ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಪ್ರಾರಂಭಿಸುವ ಮೂಲಕ ಸರ್ಕಾರ ಸಮಾಜದ ನೆರವಿಗೆ ಧಾವಿಸಬೇಕು.
ಸಮಾಜದ ನೌಕರರ ಮೇಲೆ ನಡೆಯುತ್ತಿರುವ ಕಿರುಕುಳ, ದೌರ್ಜನ್ಯಕ್ಕೆ ಸರ್ಕಾರದ ಪರೋಕ್ಷ ಬೆಂಬಲ ಇದೆಯೇ ಎಂಬ ವಾತಾವರಣ ಕಂಡು ಬರುತ್ತಿದೆ. ಸರ್ಕಾರ ಕೂಡಲೇ ಕಿರುಕುಳ, ದೌರ್ಜನ್ಯ ನಿಲ್ಲಿಸುವ ಮೂಲಕ ಸಮಾಜದ ನೌಕರರ ನೆರವಿಗೆ ಬರಬೇಕು. ಆಂಗ್ಲರ ವಿರುದ್ಧ ಹೋರಾಟ ನಡೆಸಿದ ಕಿತ್ತೂರು ರಾಣಿ ಚನ್ನಮ್ಮ ಅವರನ್ನು ದೇಶದ ಮೊದಲ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ ಎಂದು ಘೋಷಿಸುವಂತೆ ರಾಜ್ಯ ಸಚಿವ ಸಂಪುಟ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿದರು.
ಕಿತ್ತೂರು ರಾಣಿ ಚನ್ನಮ್ಮನನ್ನು ಬಂಧನದಲ್ಲಿಟ್ಟಿದ್ದ ಧಾರವಾಡ ಜಿಲ್ಲಾಧಿಕಾರಿಗಳ ನಿವಾಸವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಣೆ, ಗೃಹ ಕೈಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಸಮಾಜದ ಮಹಿಳಾ ಸಂಘಗಳಿಗೆ ಧನ ಸಹಾಯ, ನೇಮಕಾತಿ ಅರ್ಜಿ ಶುಲ್ಕದಲ್ಲಿ ರಿಯಾಯತಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ರಾಜ್ಯ ಅಧ್ಯಕ್ಷ ಡಿ.ವಿ. ಪ್ರಶಾಂತ್, ಜಿ. ಶಿವಯೋಗಪ್ಪ, ಉಮೇಶ್ ಕತ್ತಿ, ಶಂಕರಗೌಡ ಬಿರಾದಾರ್, ಟಿ.ವಿ. ಗಣೇಶ್, ಶಿವನಗೌಡ ಪಾಟೀಲ್, ಎಚ್.ಎನ್. ಜಗದೀಶ್, ಚ್. ಅಜ್ಜಪ್ಪ, ದಾಕ್ಷಾಯಣಮ್ಮ, ಬಸವರಾಜ್ ಬಾವಿ, ಶ್ರೀಕಾಂತ್, ಟಿಂಕರ್ ಮಂಜಣ್ಣ, ಮಂಜುನಾಥ್ ಕತ್ತಿ ಇತರರಿದ್ದರು.