Advertisement

ಕ್ಯಾನ್ಸರ್‌ಗೆ ತಕ್ಷಣ ಚಿಕಿತ್ಸೆ ಪಡೆಯಿರಿ: ದಿಲೀಷ್‌ ಸಸಿ

10:50 AM Feb 07, 2022 | Team Udayavani |

ಕಲಬುರಗಿ: ಕ್ಯಾನ್ಸರ್‌ ರೋಗದ ರೋಗದ ಲಕ್ಷಣ ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ದಿಲೀಷ್‌ ಸಸಿ ಸಲಹೆ ನೀಡಿದರು.

Advertisement

ನಗರದ ಜಿಮ್ಸ್‌ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಯಾನ್ಸರ್‌ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಯಾನ್ಸರ್‌ ರೋಗಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ತರಹದ ಚಿಕಿತ್ಸೆ ನೀಡಲಾಗುತ್ತಿದೆ. ಆರಂಭದಲ್ಲಿಯೇ ಈ ರೋಗಕ್ಕೆ ಚಿಕಿತ್ಸೆ ಪಡೆದಲ್ಲಿ ಗುಣಮುಖರಾಗಬಹುದು. ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸಮಾಜಕ್ಕೆ ಕ್ಯಾನ್ಸರ್‌ ರೋಗ ದೊಡ್ಡ ಪಿಡುಗಾಗಿದೆ. ಆದ್ದರಿಂದ ಪ್ರತಿಯೊಬ್ಬರು ಜಾಗ್ರತೆ ವಹಿಸಬೇಕೆಂದು ಹೇಳಿದರು.

ಜಿಮ್ಸ್‌ ಆಸ್ಪತ್ರೆ ನಿರ್ದೇಶಕಿ ಡಾ| ಕವಿತಾ ಪಾಟೀಲ ಮಾತನಾಡಿ, ದೇಹದಲ್ಲಿನ ಇತರ ಭಾಗಗಳಲ್ಲಿನ ಅಸಹಜ ಜೀವಕೋಶಗಳು ಅನಿಯಂತ್ರಿತವಾಗಿ ವಿಭಜನೆಗೊಳ್ಳುತ್ತಾ ದೇಹದ ಅಂಗಾಂಶವನ್ನು ನಾಶ ಮಾಡುವ ರೋಗ ಕ್ಯಾನ್ಸರ್‌ ಆಗಿದೆ ಎಂದರು.

ಇತ್ತೀಚೆಗೆ ಸಾರ್ವಜನಿಕರಲ್ಲಿ ಕ್ಯಾನ್ಸರ್‌ ರೋಗ ಹೆಚ್ಚು ಕಾಣುತ್ತಿದೆ. ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಸ್ಕ್ರೀನಿಂಗ್‌ ಕ್ಯಾಂಪ್‌ ಸೌಲಭ್ಯವಿದ್ದು, ರೋಗಿಗಳು ಇದರ ಲಾಭ ಪಡೆಯಬೇಕು. ಕ್ಯಾನ್ಸರ್‌ ಜಾಗೃತಿ ಮೂಡಿಸಲು ಜಿಲ್ಲಾದ್ಯಂತ ಫೆ.10ರ ವರೆಗೆ ಜಾಥಾ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫೆ.8ರಂದು ಜಿಲ್ಲಾಸ್ಪತ್ರೆಯಲ್ಲಿ ಬೃಹತ್‌ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.

Advertisement

ಅಸಾಂಕ್ರಾಮಿಕ ರೋಗಗಳ ಜಿಲ್ಲಾ ಸಂಯೋಜಕರಾದ ಡಾ| ಪ್ರೀತಮ್‌ ತೇಲ್ಕರ್‌, ಇಂಡಿಯನ್‌ ಕ್ಯಾನ್ಸರ್‌ ಸೊಸೈಟಿ ಯೋಜನಾಧಿಕಾರಿ ಗುರುರಾಜ ಕುಲಕರ್ಣಿ ಮಾತನಾಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಭಾಗೀಯ ಪ್ರಭಾರಿ ಜಂಟಿ ನಿರ್ದೇಶಕ ಡಾ| ಶಂಕರಪ್ಪ ಮೈಲಾರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶರಣಬಸಪ್ಪ ಗಣಜಲಖೇಡ್‌, ಜಿಲ್ಲಾ ಶಸ್ತ್ರಜ್ಞ ಡಾ| ಅಂಬರಾಯ ಎಸ್‌. ರುದ್ರವಾಡಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ| ಶಿವಕುಮಾರ ದೇಶಮುಖ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸೋಮು ರಾಠೊಡ ಭಾಗವಹಿಸಿದ್ದರು.

ಜಿಮ್ಸ್‌ ಆಸ್ಪತ್ರೆಯಿಂದ ಮಿನಿ ವಿಧಾನಸೌಧದ ವರೆಗೆ ನಡೆದ ಜಾಥಾದಲ್ಲಿ ಸರ್ಕಾರಿ ಸ್ಕೂಲ್‌ ಆಫ್‌ ನರ್ಸಿಂಗ್‌ ಮತ್ತು ಕಾಲೇಜ್‌ ಆಫ್‌ ನರ್ಸಿಂಗ್‌, ಪ್ಯಾರಾ ಮೆಡಿಕಲ್‌ ಕಾಲೇಜು, ಡಾ| ಅಂಬೇಡ್ಕರ್‌ ಪದವಿ ಮಹಾವಿದ್ಯಾಲಯ, ಎಚ್‌ಕೆಇ ಸಂಸ್ಥೆಯ ಪಾಲಿಟಿಕ್ನಿಕ್‌ ಕಾಲೇಜು, ಫಾರ್ಮಾ ಕಾಲೇಜು, ಎನ್‌.ವಿ. ಪದವಿ ಮಹಾ ವಿದ್ಯಾಲಯದ ಪ್ರಾಂಶುಪಾಲರು, ಪ್ರಾಧ್ಯಾಪಕರು, ಬೋಧಕರು, ವಿದ್ಯಾರ್ಥಿಗಳು, ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ, ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆ, ಇಂಡಿಯನ್‌ ಕ್ಯಾನ್ಸರ್‌ ಸಂಘದ ಪ್ರತಿನಿಧಿ ಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next