Advertisement

ಸಿಗದ ಹತ್ತಿ ಬೀಜ: ತಪ್ಪದ ರೈತರ ಪರದಾಟ

12:16 PM Jun 25, 2022 | Team Udayavani |

ಜೇವರ್ಗಿ: ಅತಿವೃಷ್ಟಿ, ಅನಾವೃಷ್ಟಿಯಿಂದ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ತಾಲೂಕಿನ ರೈತರಿಗೆ ಮುಂಗಾರು ಹಂಗಾಮಿನಲ್ಲಿ ಬಿತ್ತಲು ಹತ್ತಿ ಬೀಜ ದೊರಕದೇ ಪರದಾಡುವಂತೆ ಆಗಿದೆ.

Advertisement

ಕಳೆದ ಒಂದು ವಾರದಿಂದ ಜೇವರ್ಗಿ, ಯಡ್ರಾಮಿ ತಾಲೂಕಿನಾದ್ಯಂತ ರೈತರು, ಮಹಿಳೆಯರು ಹತ್ತಿ ಬೀಜಕ್ಕಾಗಿ ಸಾಕಷ್ಟು ಅಲೆದಾಡುತ್ತಿದ್ದರೂ ಬೀಜ ದೊರೆಯದೇ ಹತಾಶರಾಗಿದ್ದಾರೆ. ತಾಲೂಕಿನಲ್ಲಿ ಕೆಲವು ಕಡೆ ಉತ್ತಮ ಮಳೆ ಆಗಿದ್ದು, ಕೆಲವೆಡೆ ಪಂಪ್‌ಸೆಟ್‌ಗಳನ್ನು ಅವಲಂಬಿಸಿ ಕೃಷಿ ಚಟುವಟಿಕೆ ಮಾಡಲಾಗುತ್ತಿದೆ. ಕಳೆದ ವರ್ಷ ಹತ್ತಿಗೆ ಸಿಕ್ಕ ಉತ್ತಮ ಬೆಲೆ ರೈತರಲ್ಲಿ ಒಂದಿಷ್ಟು ಆಶಾಭಾವನೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ರೈತರು ಹತ್ತಿ ಬಿತ್ತನೆಗೆ ಮುಂದಾಗಿದ್ದಾರೆ. ಪಟ್ಟಣದ ಕೆಲವು ಅಗ್ರೋ ಕೇಂದ್ರಗಳಲ್ಲಿ ಹತ್ತಿ ಬೀಜ ಇದ್ದರೂ ಕಾಳಸಂತೆಯಲ್ಲಿ ಬೇಕಾಬಿಟ್ಟಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಹತ್ತಿ ದರ ಏರಿಕೆಯಾಗಿರುವುದರಿಂದ ರೈತರು ಹತ್ತಿ ಬೆಳೆಯಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ವ್ಯಾಪಾರಿಗಳು ರೈತರಿಗೆ ದಾಸ್ತಾನು ತೋರಿಸದೇ ಕಾಳ ಸಂತೆಯಲ್ಲಿ ಮನಸ್ಸಿಗೆ ಬಂದ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.

ಹೀಗಾಗಿ ಅಗ್ರೋ ಕೇಂದ್ರಗಳಿಗೆ ರೈತರು ಅಲೆದಾಡಿದರೂ ಬೀಜ ಸಿಗುತ್ತಿಲ್ಲ. ಕಾಳಸಂತೆಯಲ್ಲಿ ಮೂರು ಪಟ್ಟು ಹೆಚ್ಚಿನ ದರಕ್ಕೆ ಸಿಗುತ್ತಿದೆ. ಕೆಲವು ವ್ಯಾಪಾರಿಗಳು ತರಿಸಿದ ಬೀಜಗಳನ್ನು ಆಗ್ರೋ ಕೇಂದ್ರಗಳಲ್ಲಿ ಇಡದೇ ತಮ್ಮ ಗೋದಾಮುಗಳಲ್ಲಿ ಸಂಗ್ರಹಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಪ್ರಸಕ್ತ ವರ್ಷ ಜೇವರ್ಗಿ, ಯಡ್ರಾಮಿ ತಾಲೂಕಿನಲ್ಲಿ 1,22,311 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ತೊಗರಿ 66,050 ಹೆಕ್ಟೇರ್‌ ಮತ್ತು ಹತ್ತಿ 47,725 ಹೆಕ್ಟೇರ್‌ ಪ್ರದೇಶಲ್ಲಿ ಬಿತ್ತನೆ ಮಾಡಲಾಗುತ್ತಿದೆ.

ನಿಗದಿತ ಮಾರುಕಟ್ಟೆ ಬೆಲೆಗೆ ಬೀಜ, ರಸಗೊಬ್ಬರ ಮಾರಾಟ ಮಾಡುವಂತೆ ಕೃಷಿ ಇಲಾಖೆ ಅಧಿಕಾರಿಗಳು ಅಗ್ರೋ ಮಾಲೀಕರಿಗೆ ಆದೇಶ ನೀಡಿದರೂ, ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಹತ್ತಿ ಬೀಜ ಮಾರಾಟ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

Advertisement

ತಾಲೂಕಿನಲ್ಲಿ ರೈತರು ಮುಂಗಾರು ಬಿತ್ತನೆಗೆ ತಯಾರಿ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಾಗದಂತೆ ಕೃಷಿ ಅಧಿಕಾರಿಗಳು ನೋಡಿಕೊಳ್ಳಬೇಕು. ಕೆಲವು ಕಡೆ ನಕಲಿ ಹತ್ತಿ ಬೀಜ ಮಾರಾಟ ಮಾಡಲಾಗುತ್ತಿದೆ. ಅಂತವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಿ ಅವರ ಪರವಾನಗಿ ರದ್ದು ಮಾಡಬೇಕು. -ಶಿವಲಿಂಗ ಹಳ್ಳಿ ಸೊನ್ನ, ಕರವೇ ಹೋರಾಟಗಾರ

ಪಟ್ಟಣದಲ್ಲಿರುವ ಅಗ್ರೋ ಕೇಂದ್ರಗಳಿಗೆ ಪ್ರತಿನಿತ್ಯ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದ್ದು, ಈಗಾಗಲೇ ಅಗ್ರೋ ಕೇಂದ್ರಗಳಲ್ಲಿರುವ ಹತ್ತಿ ಬೀಜವನ್ನು ರೈತರು ಖರೀದಿ ಮಾಡುತ್ತಿಲ್ಲ. ರೈತರು ಕೇಳುತ್ತಿರುವ ಕೆಲ ಕಂಪನಿಯ ಹತ್ತಿ ಬೀಜ ಲಭ್ಯವಿಲ್ಲದ ಕಾರಣ ಗೊಂದಲ ಉಂಟಾಗಿದೆ. ನಕಲಿ ಬೀಜ ಮಾರಾಟ ತಡೆಗೆ ತಂಡ ರಚಿಸಿ ಪರಿಶೀಲನೆ ನಡೆಸಲಾಗುತ್ತಿದೆ. -ಶಿವಲಿಂಗಪ್ಪ ಅವಂಟಿ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ

-ವಿಜಯಕುಮಾರ ಎಸ್‌.ಕಲ್ಲಾ

Advertisement

Udayavani is now on Telegram. Click here to join our channel and stay updated with the latest news.

Next