Advertisement

ಬೀಜಗಳಿಂದ ಖಾದ್ಯ ವೈವಿಧ್ಯ

10:14 PM Apr 18, 2019 | mahesh |

ಕಾಂಡ, ಬೇರು, ತೊಗಟೆ, ಹೂ, ಕಾಯಿ, ಹಣ್ಣು , ಎಲೆ, ಸಿಪ್ಪೆ ಎಲ್ಲವನ್ನೂ ಬಳಸಿ ಅಡುಗೆ ಮಾಡುವುದು ನಮ್ಮ ಭಾರತೀಯ ಅಡುಗೆ ಪರಂಪರೆಯ ವಿಶೇಷತೆ. ಊಹೆಗೂ ನಿಲುಕದ ವೈವಿಧ್ಯತೆಯನ್ನು ಇಂದಿಗೂ ಕಾಣಬಹುದಾಗಿದೆ. ಇಲ್ಲಿ ಬೀಜಗಳಿಂದ ಕೆಲವು ಅಡುಗೆ ತಯಾರಿ ಬಗ್ಗೆ ತಿಳಿಸಲಾಗಿದೆ.

Advertisement

ಹಲಸಿನ ಬೀಜದ ಚಟ್ನಿ
ಬೇಕಾಗುವ ಸಾಮಗ್ರಿ: ಹಲಸಿನ ಬೀಜ- 1 ಕಪ್‌, ಒಣಮೆಣಸು 5, ಹುಳಿ, ಉಪ್ಪು , ಜೀರಿಗೆ 1 ಚಮಚ, ಮೆಂತೆ 1/2 ಚಮಚ, ಒಗ್ಗರಣೆಗೆ ಬೆಳ್ಳುಳ್ಳಿ , ಸಾಸಿವೆ, ಮೆಣಸು, ಎಣ್ಣೆ, ಕರಿಬೇವು.
ತಯಾರಿಸುವ ವಿಧಾನ: ಹಲಸಿನ ಬೀಜದ ಸಿಪ್ಪೆ ತೆಗೆದು ಒಣ ಮೆಣಸು, ಉಪ್ಪು , ಹುಳಿ ಹಾಕಿ ಬೇಯಿಸಿ (ಕುಕ್ಕರಲ್ಲೂ ನೀರು ಹಾಕಿ ಬೇಯಿಸಬಹುದು). ಮೆಂತೆ, ಜೀರಿಗೆಯನ್ನು ಎಣ್ಣೆ ಹಾಕದೆ ಹುರಿದು ಬೇಯಿಸಿದ ನೀರಿನೊಂದಿಗೆ ತರಿ ತರಿಯಾಗಿ ರುಬ್ಬಿ. ಕೊನೆ ಹಂತದಲ್ಲಿ ಬೇಯಿಸಿದ ಬೀಜ ಸೇರಿಸಿ ರುಬ್ಬಿ ಬೆಳ್ಳುಳ್ಳಿ ಹಾಗೂ ಇಂಗಿನಿಂದ ಕರಿಬೇವು ಹಾಕಿ ಒಗ್ಗರಣೆ ಕೊಡಿ. ತುಪ್ಪ , ಅನ್ನದೊಂದಿಗೆ ಕಲಸಲು, ತಿಂಡಿಯೊಡನೆಯೂ ಸವಿಯಬಹುದು.

ಹಲಸಿನ ಬೀಜದ ಸಿಹಿಉಂಡೆ
ಬೇಕಾಗುವ ಸಾಮಗ್ರಿ: ಹಲಸಿನ ಬೀಜ- 2 ಕಪ್‌, 1/2 ಚಮಚ ಉಪ್ಪು , 2 ಕಪ್‌ ಬೆಲ್ಲ, ಒಂದು ಕಪ್‌ ತೆಂಗಿನ ತುರಿ.

ತಯಾರಿಸುವ ವಿಧಾನ: ಹಲಸಿನ ಬೀಜವನ್ನು ನೀರು ಹಾಕಿ ಚೆನ್ನಾಗಿ ಬೇಯಿಸಿ. ಅನಂತರ ನೀರು ಸೋಸಿ ಬೀಜ, ತೆಂಗಿನತುರಿ, ಉಪ್ಪು , ಬೆಲ್ಲ ಹಾಕಿ ನುಣ್ಣಗೆ ರುಬ್ಬಿ. ರುಬ್ಬುವಾಗ ಹಲಸಿನ ಬೀಜ ಬಿಸಿಯಾಗಿದ್ದರೆ ಬೇಗ ನುಣ್ಣಗಾಗುವುದು. ರುಬ್ಬಿದ ಹಿಟ್ಟನ್ನು ಉಂಡೆ ಮಾಡಿ ಹಾಗೇ ತಿನ್ನಬಹುದು. ವಡೆಯಂತೆ ತಟ್ಟಿ (ಇದಕ್ಕೆ ತೆಂಗಿನ ತುರಿ ಸೇರಿಸುವುದು ಬೇಡ). ನೀರುದೋಸೆ ಹಿಟ್ಟಲ್ಲಿ ಮುಳುಗಿಸಿ ಕಾವಲಿಗೆಯಲ್ಲಿ ಹಾಕಿ ಎರಡೂ ಬದಿ ಕೆಂಬಣ್ಣ ಬರುವ ತನಕ ಬೇಯಿಸಿದರೆ ತುಪ್ಪದೊಂದಿಗೆ ರುಚಿಯಾಗಿ ಸವಿಯಬಹುದು. ಮಳೆಗಾಲದಲ್ಲಿ ತಿನ್ನಲು ಹೇಳಿಮಾಡಿಸಿದ ತಿಂಡಿ. ಹಲಸಿನ ಬೀಜದ ಕೆಂಪು ಸಿಪ್ಪೆಯನ್ನು ಬಟ್ಟೆ ಒಗೆಯುವ ದೊರಗು ಜಾಗದಲ್ಲಿ ತಿಕ್ಕಿ ಬಿಳಿಮಾಡಿ ಬೇಯಿಸಿದರೆ ಇನ್ನೂ ರುಚಿ ಜಾಸ್ತಿ.

ಹಾಗಲ ಬೀಜದ ಚಟ್ನಿಪುಡಿ
ಬೇಕಾಗುವ ಸಾಮಗ್ರಿ: ನಾಲ್ಕು ಚಮಚ ಒಣಗಿಸಿದ ಹಾಗಲ ಬೀಜ, ಕೆಂಪುಮೆಣಸು 6, 1/2 ಕಪ್‌ ಕಡ್ಲೆಬೇಳೆ, 1/2 ಕಪ್‌ ಉದ್ದಿನಬೇಳೆ, 1/2 ಕಪ್‌ ಒಣ ಕೊಬ್ಬರಿ ಪುಡಿ, 1 ಹಿಡಿ ಕರಿಬೇವು, ಬೆಳ್ಳುಳ್ಳಿ ಬೀಜ 10ರಿಂದ 15 ಎಸಳು, ಉಪ್ಪು , ಹುಳಿ, ಬೆಲ್ಲ, ಎಣ್ಣೆ.

Advertisement

ತಯಾರಿಸುವ ವಿಧಾನ: ಹಾಗಲ ಬೀಜ ಹೊರತುಪಡಿಸಿ, ಎಲ್ಲವನ್ನೂ ಎಣ್ಣೆ ಹಾಕಿ ಹುರಿಯಿರಿ. ಹುರಿದ ಎಲ್ಲಾ ಸಾಮಾನು ಸೇರಿಸಿ ಹಾಗಲಬೀಜ, ಉಪ್ಪು , ಹುಳಿ, ಬೆಲ್ಲದೊಂದಿಗೆ ಪುಡಿಮಾಡಿ ಸವಿಯಬಹುದು. ಮಧುಮೇಹಿಗಳಿಗೆ ಹೇಳಿಮಾಡಿಸಿದ ವ್ಯಂಜನ.

ಕಾಟುಮಾವಿನ ಗೊರಟಿನ ತಂಬುಳಿ
ಬೇಕಾಗುವ ಸಾಮಗ್ರಿ: ಕಾಟುಮಾವಿನ ಗೊರಟು 1, ತೆಂಗಿನ ತುರಿ- 1 ಕಪ್‌, ಜೀರಿಗೆ- 1 ಚಮಚ, ಉಪ್ಪು , ಮಜ್ಜಿಗೆ- 1 ಕಪ್‌, ಒಗ್ಗರಣೆಗೆ ಸಾಸಿವೆ, ಕರಿಬೇವು, ಒಣಮೆಣಸು, ಎಣ್ಣೆ.

ತಯಾರಿಸುವ ವಿಧಾನ: ಮಾವಿನ ಗೊರಟನ್ನು ಸುಟ್ಟು ಬೊಂಡು ತೆಗೆದು, ತೆಂಗಿನತುರಿ, ಜೀರಿಗೆ, ಉಪ್ಪಿನೊಂದಿಗೆ ನುಣ್ಣಗೆ ರುಬ್ಬಿ ಮಜ್ಜಿಗೆ ಸೇರಿಸಿ ಒಗ್ಗರಣೆ ಕೊಟ್ಟರೆ ತುಂಬುಳಿ ರೆಡಿ. ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿ ಗೊರಟೂ ಆಗುತ್ತದೆ.

ಸೌತೆಬೀಜದ ಸಾರು
ಬೇಕಾಗುವ ಸಾಮಗ್ರಿ: ಸೌತೆಬೀಜ- 1 ಕಪ್‌, ಮಜ್ಜಿಗೆ- 1 ಕಪ್‌, ಜೀರಿಗೆ- 1 ಚಮಚ, ತುಪ್ಪ- 2 ಚಮಚ, ಕರಿಬೇವು, ಕರಿಮೆಣಸು- 4.

ತಯಾರಿಸುವ ವಿಧಾನ: ಸೌತೆ ಬೀಜವನ್ನು ನುಣ್ಣಗೆ ರುಬ್ಬಿ ಸೋಸಿ ಹಾಲು ತೆಗೆಯಿರಿ. ಬೀಜದ ಹಾಲಿಗೆ ಮಜ್ಜಿಗೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಒಂದು ಕುದಿ ಕುದಿಸಿ. ಕುದಿಯುತ್ತಿರುವಾಗ ಕರಿಮೆಣಸು ಜಜ್ಜಿ ಸೇರಿಸಿ. ಇಳಿಸಿದ ನಂತರ ತುಪ್ಪದಲ್ಲಿ ಕರಿಬೇವು, ಜೀರಿಗೆ ಒಗ್ಗರಣೆ ಕೊಟ್ಟರೆ ತಂಬುಳಿ ರೆಡಿ. ಸೌತೆಕಾಯಿ ಬೀಜ ಒಣಗಿಸಿಟ್ಟರೆ ಬೇಕೆಂದಾಗ ದಿಢೀರ್‌ ಆಗಿ ತಯಾರಿಸಬಹುದು.

ಪಿ. ಪಾರ್ವತಿ ಐ. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next