ಕಲಬುರಗಿ: ಒಂದೇಡೆ ಮಳೆ ಕೊರತೆ ಹಾಗೂ ಇನ್ನೊಂದೆಡೆ ಮಳೆ ಜಾಸ್ತಿಯಾಗಿ ರೈತ ಸಂಕಷ್ಟಕ್ಕೆ ಒಳಗಾಗುತ್ತಿದ್ದರೆ ಮತ್ತೊಂದೆಡೆ ಬಸವನಹುಳು ಜತೆಗೆ ಚಿಗರಿ ಮತ್ತು ಕಾಡು ಹಂದಿಗಳ ಕಾಟ ಎದುರಾಗಿರುವುದು ಬೆಳೆಗಳೆಲ್ಲ ಮಣ್ಣು ಪಾಲು ಎನ್ನುವಂತಾಗಿದೆ.
ಪ್ರಸಕ್ತವಾಗಿ ಬಿತ್ತನೆ ಒಂದು ತಿಂಗಳು ಕಾಲ ತಡವಾಗಿ ಬಿತ್ತನೆಯಾಗಿದ್ದರಿಂದ ಈಗಷ್ಟೇ ಬೆಳೆಗಳು ಮೇಲೆಳುತ್ತಿದ್ದು, ಆದರೆ ಬಸವನ ಹುಳುವಿನ ಕಾಟದ ನಡುವೆ ಚಿಗರೆ ಮತ್ತು ಕಾಡು ಹಂದಿಗಳ ಕಾಟದಿಂದ ರೈತ ಬೇಸತ್ತು ಹೋಗಿದ್ದಾನೆ. ಈಗಷ್ಟೇ ಸಾಲ ಮಾಡಿ ಬೀಜ, ಗೊಬ್ಬರ ಹಾಕಿ ಬಿತ್ತನೆ ಮಾಡಿದ್ದ ರೈತನಿಗೆ ಬೆಳೆ ಇನ್ನೇನು ಮೇಲೆ ಬರುತ್ತಿದ್ದಂತೆ ಬೆಳೆಗಳನ್ನು ಹಾಳಾಗುತ್ತಿರುವುದನ್ನು ಕಂಡು ಮರಗುತ್ತಿದ್ದು, ಏನಪ್ಪಾ ಮಾಡೋದು ಎಂದು ಕೈ ಕಟ್ಟಿ ಕುಳಿತ್ತಿದ್ದಾನೆ. ಬೇಗನೆ ಬಿತ್ತನೆಯಾಗಿದ್ದರೆ ಈ ಹೊತ್ತಿಗೆ ಇವುಗಳ ಕಾಟ ಎದುರಾಗಿದ್ದರೆ ಬೆಳೆಗಳು ಮೊಣಕಾಲು ಎತ್ತರವಾಗಿರುವುದರಿಂದ ಹೆಚ್ಚಿನ ಹಾನಿ ಆಗುತ್ತಿರಲಿಲ್ಲ. ಮೊದಲೇ ಎರಡೆಲೆ ಮೇಲೆ ಬಂದಿರುವುದರಿಂದ ಆ ಎರಡು ಎಲೆ ತಿನ್ನುತ್ತಿರುವುದರಿಂದ ಬೆಳೆಯೇ ಸಂಪೂರ್ಣ ನಾಶ ಎನ್ನುವಂತಾಗಿದೆ.
ಬಸವನ ಹುಳು ಕಾಟದಿಂದ ಜಿಲ್ಲೆಯ ಕಮಲಾಪುರ ಹಾಗೂ ಆಳಂದ ತಾಲೂಕಿನಲ್ಲಿ ಸಾವಿರಾರು ರೈತರ ಪ್ರಮುಖವಾಗಿ ಸೋಯಾಬಿನ್ ಬೆಳೆ ನಾಶವಾಗಿದೆ. ಜಿಲ್ಲೆಯಲ್ಲಿ ಸೋಯಾಬಿನ್ ಬೆಳೆಯನ್ನು ರೈತ ಈಚೆಗೆಷ್ಟೇ ಬೆಳೆಯಲು ಶುರು ಮಾಡಿದ್ದಾನೆ. ಪ್ರಮುಖವಾಗಿ ತೊಗರಿ ಬದಲು ಸೋಯಾಬಿನ್ ಕಡೆಗೆ ರೈತ ವಾಲಿದ್ದು, ಈ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ.
ಅಫಜಲಪುರ, ಕಲಬುರಗಿ, ಚಿತ್ತಾಪುರ ತಾಲೂಕು ಸೇರಿ ವಿವಿಧೆಡೆ ತೊಗರಿ, ಸೋಯಾಬಿನ್, ಹೆಸರು ಹಾಗೂ ಇತರ ಬೆಳೆಗಳನ್ನು ಚಿಗರೆ ಹಾಗೂ ಹಂದಿಗಳ ಹಿಂಡು ಹೊಲಗಳಿಗೆ ದಾಳಿ ಮಾಡಿ ಬೆಳೆಗಳನ್ನೆಲ್ಲ ನಾಶ ಮಾಡುತ್ತಿವೆ. ಕಣ್ಣೆದುರೇ ಬೆಳೆಗಳು ನಾಶವಾಗುತ್ತಿರುವುದನ್ನು ಕಂಡು ಕೆಲವು ರೈತರು ಮಧ್ಯರಾತ್ರಿ ಹೊಲಕ್ಕೆ ಹೋಗಿ ಚಿಗರಿ ಹಾಗೂ ಕಾಡು ಹಂದಿಗಳನ್ನು ಬೆದರಿಸುವ ಕಾರ್ಯ ಮಾಡುತ್ತಿರುವುದನ್ನು ನೋಡಿದರೆ ಇವುಗಳ ಕಾಟ ಎಷ್ಟರ ಮಟ್ಟಿಗೆ ಎಂಬುದನ್ನು ನಿರೂಪಿಸುತ್ತದೆ. ಚಿಗರಿ ಹಾಗೂ ಹಂದಿಗಳ ಕಾಟದಿಂದ ಬಚಾವ್ ಆಗಲು ಹೊಲಗಳಲ್ಲಿ ಬೊಂಬೆಗಳನ್ನು ನಿಲ್ಲಿಸಲಾಗುತ್ತಿದೆ. ಬೊಂಬೆಗಳನ್ನು ನಿಲ್ಲಿಸಲಾಗಿದ್ದರೂ ಚಿಗರಿ ಹಾಗೂ ಹಂದಿಗಳು ಯಾವುದಕ್ಕೂ ಹೆದರದೇ ಬೆಳೆಗಳನ್ನು ಹಾಳು ಮಾಡುತ್ತಿವೆ.
ಸಮೀಕ್ಷೆಗೆ ಆಗ್ರಹ: ಬಸವನ ಹುಳುದಿಂದ ಆಗಿರುವ ಬೆಳೆ ಹಾನಿಯನ್ನು ಸಮೀಕ್ಷೆ ಮಾಡಿ ಸೂಕ್ತ ಪರಿಹಾರ ನೀಡಬೇಕೆಂದು ನಷ್ಟಕ್ಕೆ ಒಳಗಾಗಿರುವ ರೈತರು ಆಗ್ರಹಿಸಿದ್ದಾರೆ. ಬಸವನ ಹುಳು ಕಾಟ ತಪ್ಪಿಸಲು ನೀರಿಗೆ ಉಪ್ಪು ಬೆರೆಸಿ ಸಿಂಪಡಿಸಬೇಕು. ಅದಲ್ಲದೇ ಗೋಚ್ ಎಂಬ ಔಷಧಿಯನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕೆಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರ ಸಲಹೆ ನೀಡಿದ್ದಾರೆ