Advertisement
ಮಂಗಳೂರು ಸೇರಿದಂತೆ ನಗರಗಳಲ್ಲಿ ತಾರಸಿ ಕೃಷಿ ಪ್ರಸ್ತುತ ದಿನಗಳಲ್ಲಿ ಒಂದು ಟ್ರೆಂಡ್ ಆಗಿ ಬೆಳೆಯುತ್ತಿದೆ. ಮನೆಯಂಗಳದ ಪುಟ್ಟ ಜಾಗ, ಮನೆಯ ತಾರಸಿಗಳೆ ತರಕಾರಿ ತೋಟವಾಗಿ, ಹೂವಿನ ಉದ್ಯಾನವಾಗಿ ಕಂಗೊಳಿಸ ತೊಡಗಿವೆ. ತಾರಸಿ ಕೃಷಿ ಬರೇ ಒಂದು ಹವ್ಯಾಸವಾಗಿ ಉಳಿದಿಲ್ಲ. ಅದರಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿರುವ ಮಾದರಿಗಳು, ಯಶೋಗಾಥೆಗಳು ನಮ್ಮ ಮುಂದಿವೆ. ತಾಪಮಾನ ಏರುತ್ತಿರುವ ಇಂದಿನ ಕಾಲಘಟ್ಟದಲ್ಲಿ ನಗರದಲ್ಲಿ ಹಸಿರು ವಾತಾವರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪರಿಸರಾತ್ಮಕವಾಗಿಯೂ ತಾರಸಿ ಕೃಷಿ ಪ್ರಾಮುಖ್ಯ ವನ್ನು ಪಡೆದುಕೊಂಡಿದೆ.
ಸೀಡ್ ವೆಂಡಿಂಗ್ ಮೆಶಿನ್ ಹಣ ಹಾಕಿದರೆ ತರಕಾರಿ ಬೀಜಗಳ ಪ್ಯಾಕೆಟ್ ದೊರೆಯುವ ವ್ಯವಸ್ಥೆ. ನಗರ ಪ್ರದೇಶಗಳಲ್ಲಿ ಗುಣಮಟ್ಟದ ತರಕಾರಿ ಹಾಗೂ ಹೂವಿನ ಬೀಜಗಳು ಗ್ರಾಹಕರಿಗೆ ಲಭ್ಯವಾಗುತ್ತಿಲ್ಲ. ಲಭ್ಯವಾದರೂ ಗುಣಮಟ್ಟದ ಸಮಸ್ಯೆ ಇದೆ ಎಂಬ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಸ್ವತಃ ತಾನು ಅಭಿವೃದ್ಧಿಪಡಿಸಿದ ಗುಣಮಟ್ಟದ ಬೀಜಗಳನ್ನು ಸುಲಭವಾಗಿ ಮತ್ತು ಅತ್ಯಂತ ಅಗ್ಗದ ದರದಲ್ಲಿ ತಲುಪಿಸುವ ಉದ್ದೇಶದಿಂದ ಸೀಡ್ ವೆಂಡಿಂಗ್ ಮೆಶಿನ್ ವ್ಯವಸ್ಥೆ ರೂಪಿಸಿದೆ. ಇದನ್ನು ಜನಸಂದಣಿ ಹೆಚ್ಚು ಇರುವ ಹಾಗೂ ತರಕಾರಿ ವಹಿವಾಟು ಹೆಚ್ಚಿರುವ ಸ್ಥಳಗಳಲ್ಲಿ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಅಳವಡಿಸಲು ಸಂಸ್ಥೆ ನಿರ್ಧರಿಸಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಲಾಲ್‌ಬಾಗ್, ಬಸ್‌ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ 10 ಕಡೆಗಳಲ್ಲಿ ಇದನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
Related Articles
ಮಂಗಳೂರಿನಲ್ಲಿ ಟೆರೇಸ್ ಕೃಷಿಯ ಟ್ರೆಂಡ್ ಬೆಳೆಯುತ್ತಿದೆ. ಟೆರೇಸ್‌ನ ಪುಟ್ಟ ತೋಟ ವೈವಿಧ್ಯಮಯ ಕೃಷಿಗಳ ದೊಡ್ಡ ಪ್ರಯೋಗಶಾಲೆಗಳಾಗುತ್ತಿವೆ. ವಿರಾಮದ ಸಮಯವನ್ನು ಆರೋಗ್ಯಪೂರ್ಣವಾಗಿ ಕಳೆಯಲು ಕೂಡ ಇದನ್ನು ಒಂದು ಮಾದರಿಯಾಗಿ ಕಂಡುಕೊಳ್ಳಲಾಗುತ್ತಿದೆ. ಕಸದಿಂದ ರಸ ಪಡೆಯುವುದರ ಜತೆಗೆ ಮನೆಗಳ ಮೇಲ್ಛಾವಣಿಗಳನ್ನು ತಂಪಾಗಿಡಲೂ ಇದು ಸಹಕಾರಿಯಾಗಿದೆ. ಟೆರೇಸ್ ಕೃಷಿಗೆ ಅವರು ಮನೆಯಲ್ಲಿ ಉತ್ಪತಿಯಾಗುವ ತಾಜ್ಯಗಳನ್ನೇ ಗೊಬ್ಬರವಾಗಿ ಬಳಸುತ್ತಾರೆ. ಇದರಿಂದ ತ್ಯಾಜ್ಯ ನಿರ್ವಹಣೆಯ ಸಮಸ್ಯೆಗೂ ಒಂದಷ್ಟು ಪರಿಹಾರ ಸಿಗುತ್ತದೆ.
Advertisement
ಸುಮಾರು 600 ಚದರ ಅಡಿಯಿಂದ 2,500 ಚದರ ಅಡಿಗಳವರೆಗಿನ ವಿಸ್ತೀರ್ಣದ ಟೆರೇಸ್‌ನಲ್ಲಿ ತರಕಾರಿ, ಹಣ್ಣಿನ ಗಿಡಗಳು ಬೆಳೆಸಲಾಗುತ್ತಿದೆ. ಟೆರೇಸ್ ಕೃಷಿ ಮಾಡಲು ಸಿದ್ಧರಾಗುವ ಸಂದರ್ಭದಲ್ಲಿ ಎದುರಾಗುವ ಪ್ರಮುಖ ಸವಾಲು ಎಂದರೆ ಗುಣಮಟ್ಟದ ತರಕಾರಿ ಬೀಜಗಳನ್ನು ಸಕಾಲದಲ್ಲಿ ಪಡೆಯುವುದು. ತೋಟಗಾರಿಕಾ ಕೇಂದ್ರಗಳಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಬೇಕಾದ ರೀತಿಯಲ್ಲಿ ತರಕಾರಿ ಬೀಜಗಳು ಲಭ್ಯತೆ ಇರುವುದಿಲ್ಲ. ತರಕಾರಿ ಬೀಜಗಳನ್ನು ಹುಡುಕಿಕೊಂಡು ಹೋಗಬೇಕಾದ ಪ್ರಮೇಯಗಳು. ಹಳ್ಳಿಗಳಲ್ಲಿಯೂ ತರಕಾರಿ ಬೆಳೆಸುವ ಆಸಕ್ತಿ ಮಾಯವಾಗುತ್ತಿದೆ. ಸೂಕ್ತ ತರಕಾರಿ ಬೀಜಗಳು, ಗಿಡಗಳು ಲಭ್ಯವಾಗದಿದ್ದರೆ ಟೆರೇಸ್ ಕೃಷಿಯ ಆಸಕ್ತಿಯು ಕುಂದುತ್ತದೆ. ಲಭ್ಯವಿದ್ದರೂ ಕೆಲವು ಬಾರಿ ದುಬಾರಿ ದರಗಳನ್ನು ತೆರಬೇಕಾಗುತ್ತದೆ. ಸಾಮಾನ್ಯವಾಗಿ ಮಂಗಳೂರಿನ ಟೆರೇಸ್ ಗಳಲ್ಲಿ ಕಂಡುಬರುವ ತರಕಾರಿಗಳಾದ ತೊಂಡೆ, ಬೆಂಡೆ, ಬದನೆ, ಟೊಮೇಟೊ, ಕುಂಬಳಕಾಯಿ, ಚೀನಿಕಾಯಿ, ಪಡುವಲ ಕಾಯಿ, ಹಾಗಲಕಾಯಿ, ಮೆಣಸು, ಬಸಳೆ, ಸೋರೆಕಾಯಿ ಸೇರಿದಂತೆ ವಿವಿಧ ತರಕಾರಿ ಗಿಡಗಳನ್ನು ಬೆಳೆಸಲಾಗುತ್ತಿದೆ.
ಮಂಗಳೂರಿನಲ್ಲಿ ಜನಸಂದಣಿಯ ಕೆಲವು ಪ್ರದೇಶಗಳಲ್ಲಿ ಸೀಡ್ ವೆಂಡಿಂಗ್ ಮೆಶಿನ್‌ಗಳನ್ನು ಸ್ಥಾಪಿಸಿದರೆ ನಗರ ತೋಟ ಅದರಲ್ಲೂ ಟೆರೇಸ್ ಕೃಷಿ ಆಸಕ್ತರಿಗೆ ಉತ್ತೇಜನ ಉತ್ತೇಜನಕಾರಿಯಾಗಲಿದೆ. ತೋಟಗಾರಿಕಾ ಸಂಶೋಧನಾ ಕೇಂದ್ರವು ಅಭಿವೃದ್ಧಿಪಡಿಸಿರುವ ತರಕಾರಿ ಬೀಜಗಳೇ ಇಲ್ಲಿ ಲಭ್ಯವಾಗುವುದರಿಂದ ಗುಣಮಟ್ಟದ ಬೀಜಗಳು ತೊರೆಯುವ ಸಾಧ್ಯತೆಗಳಿವೆ. ಕಡಿಮೆ ದರದಲ್ಲಿ ವಿವಿಧ ರೀತಿಯ ತರಕಾರಿ ಬೀಜಗಳನ್ನು ಒಂದೇ ಕಡೆಯಲ್ಲಿ ಪಡೆಯುವ ಅವಕಾಶವೂ ಇರುತ್ತದೆ. ಇದಲ್ಲದೆ ಸಂಶೋಧನಾ ಕೇಂದ್ರವೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸೀಡ್ ವೆಂಡಿಂಗ್ ಮೆಶಿನ್‌ಗಳನ್ನು ಅಳವಡಿಸಲು ಉತ್ಸುಕವಾಗಿದೆ.
36 ಪ್ರಕಾರದ 24 ತರಕಾರಿ ಬೀಜ ಪ್ಯಾಕೆಟ್ಗಳುಸೀಡ್ ವೆಂಡಿಂಗ್ ಮೆಶಿನ್‌ನಲ್ಲಿ ಸುಮಾರು 36 ಪ್ರಕಾರದ 24 ತರಕಾರಿ ಬೀಜಗಳ, ಹೂವಿನ ಬೀಜಗಳ ಪ್ಯಾಕೆಟ್‌ಗಳಿರುತ್ತವೆ. ಸದ್ಯಕ್ಕೆ ಪ್ರತಿ ಪ್ಯಾಕೆಟ್‌ಗೆ 20 ರೂ. ದರ ನಿಗದಿ ಪಡಿಸಲು ತೋಟಗಾರಿಕಾ ಸಂಶೋಧನಾ ಸಂಸ್ಥೆ ನಿರ್ಧರಿಸಿದೆ. ಸ್ಕ್ರೀನ್ ಮೇಲೆ ಡಿಜಿಟಲ್ ಗುಂಡಿಗಳಿರುತ್ತವೆ. ಸಾರ್ವಜನಿಕರು ನಿಗದಿಪಡಿಸಿದ ಹಣವನ್ನು ಮೆಶಿನ್‌ನೊಳಗೆ ಹಾಕಿದ ಬಳಿಕ ಸ್ಕ್ರೀನ್ ಮೇಲೆ ಇರುವ ಡಿಜಿಟಲ್ ಗುಂಡಿಗಳ ಮೂಲಕ ಯಾವ ತರಕಾರಿ ಬೀಜ ಬೇಕು ಎಂಬುದನ್ನು ಸೂಚಿಸಬೇಕು. ವ್ಯಕ್ತಿಯು ಸೂಚಿಸಿದ ತರಕಾರಿ ಬೀಜದ ಪ್ಯಾಕೆಟ್ ಹೊರಬರುತ್ತದೆ. ಸೀಡ್ ವೆಂಡಿಂಗ್ ಮೆಶಿನ್‌ನ ಬೆಲೆ ಸುಮಾರು ಎರಡೂವರೆ ಲಕ್ಷ ರೂ. ಆಗುತ್ತದೆ. ಬೆಂಗಳೂರಿನಲ್ಲಿ ಇದನ್ನು ಅಳವಡಿಸಲು ತೋಟಗಾರಿಕಾ ಇಲಾಖೆಯ ನೆರವು ಕೇಳಲು ನಿರ್ಧರಿಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲೂ ಸೀಡ್ ವೆಂಡಿಂಗ್ ಮೆಶಿನ್‌ಗಳನ್ನು ಅಳವಡಿಸಲು ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ ಚಿಂತನೆ ನಡೆಸಿದೆ. ಕೇಶವ ಕುಂದರ್