Advertisement

ಕೋವಿಡ್ ಕರಿನೆರಳಲ್ಲೂ ಬೀಜ ಪೂರೈಕೆ

03:48 PM Oct 16, 2020 | Suhan S |

ಧಾರವಾಡ: ದೇಶದಲ್ಲಿಯೇ ಉತ್ತಮ ಗುಣಮಟ್ಟದ ಬೀಜೋತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಈ ವರ್ಷ ಕೋವಿಡ್ ಕರಿನೆರಳಲ್ಲಿಯೇ ಸದ್ದಿಲ್ಲದೇ ರೈತರಿಗೆ ಯಶಸ್ವಿಯಾಗಿ ಹಿಂಗಾರಿ ಬೀಜ ಪೂರೈಕೆ ಮಾಡಿ ಸೈ ಎನಿಸಿಕೊಂಡಿದೆ.

Advertisement

ಕೇಂದ್ರ, ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಬೇರೆ ಬೇರೆ ಯೋಜನೆಗಳ ಮೂಲಕ ರಾಜ್ಯ ಮಾತ್ರವಲ್ಲ ದೇಶದ ಇತರ ಭಾಗಗಳಿಗೂ ಸುಧಾರಿತ ಮತ್ತು ಅಧಿಕಇಳುವರಿ ಬೀಜ ಪೂರೈಕೆ ಜವಾಬ್ದಾರಿ ಇದೆ. ಲಾಕ್‌ಡೌನ್‌ ಮತ್ತು ಕೋವಿಡ್ ಕಾಲಘಟ್ಟ ಬೀಜೋತ್ಪಾದನೆ, ಬೀಜ ಸಂರಕ್ಷಣೆ ಮತ್ತು ಸಮಯಕ್ಕೆ ಸರಿಯಾಗಿ ಅವುಗಳ ಪೂರೈಕೆ ಧಾರವಾಡ ಕೃಷಿ ವಿವಿಗೆ ದೊಡ್ಡ ಸವಾಲಾಗಿತ್ತು.ಆದರೆ, ರಾಷ್ಟ್ರೀಯ ಬೀಜ ಯೋಜನೆ ಮೂಲಕ ಅಂತಾರಾಜ್ಯ ಬೀಜ ನಿಗಮಗಳು, ಖಾಸಗಿ ಕಂಪನಿಗಳು ಮತ್ತು ಸ್ಥಳೀಯವಾಗಿ ರೈತರಿಗೆ ಪೂರೈಕೆ ಮಾಡುವ ತಳಿವರ್ಧಕ ಬೀಜವನ್ನು ವಿಕೇಂದ್ರೀಕರಣ ವ್ಯವಸ್ಥೆ ಮೂಲಕ ವಿವಿ ಪೂರೈಕೆ ಮಾಡಿದೆ. ಕೃಷಿ ವಿಜ್ಞಾನ ಕೇಂದ್ರಗಳು, ಖಾಸಗಿ ಕಂಪನಿಗಳು ಹಾಗೂ ನೇರವಾಗಿ ನಂಬಿಕಸ್ಥ ರೈತ ಸಹಕಾರಿಗಳ ಮೂಲಕವೇ ಹಿಂಗಾರಿ ಬೀಜಗಳನ್ನು ಕೃಷಿ ವಿವಿ ಪೂರೈಕೆ ಮಾಡಿದೆ.

ಎಷ್ಟೇಷ್ಟು ಬೀಜ ಪೂರೈಕೆ?: ಪ್ರತಿ ಬಾರಿ ಕೃಷಿಮೇಳದಲ್ಲಿಯೇ ಅಂದಾಜು 2500-3500 ಕ್ವಿಂಟಲ್‌ವರೆಗೂ ಬೀಜಗಳ ಪೂರೈಕೆ ಮಾಡುತ್ತಿದ್ದ ಕೃಷಿ ವಿವಿ ಕೊರೊನಾ ಹಿನ್ನೆಲೆಯಲ್ಲಿ ಕೊಂಚ ಸಂಕಷ್ಟಕ್ಕೆ ಸಿಲುಕಿದ್ದು ಸತ್ಯವೇ. ಆದರೆ ರೈತರಿಗೆ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಈಗಾಗಲೇ 2500 ಕ್ವಿಂಟಲ್‌ನಷ್ಟು ಕಡಲೆ, ಜೋಳ ಮತ್ತು ಕುಸುಬಿ ಬೀಜ ರೈತರ ಕೈ ಸೇರುವಂತೆ ಮಾಡಿದೆ.

ಈ ಪೈಕಿ ಅತಿ ಹೆಚ್ಚು ಅಂದರೆ 1500 ಕ್ವಿಂಟಲ್‌ ಕಡಲೆ, 600 ಕ್ವಿಂಟಲ್‌ ಗೋಧಿ, 350 ಕ್ವಿಂಟಲ್‌ ಜೋಳ, ಹಾಗೂ 100ಕ್ಕೂ ಅಧಿಕ ಕ್ವಿಂಟಲ್‌ನಷ್ಟು ಕುಸುಬಿ ಬೀಜವನ್ನು ಕೃಷಿವಿವಿ ಮಾರಾಟಕ್ಕೆ ಪೂರೈಕೆ ಮಾಡಿದೆ. ಕೃಷಿ ವಿವಿಯಿಂದ 50 ಕಿಮೀ ವ್ಯಾಪ್ತಿಯಲ್ಲಿ ಪ್ರತಿವರ್ಷದ ಹಿಂಗಾರಿ ಬೀಜ ಅತಿ ಹೆಚ್ಚು ಮಾರಾಟವಾಗುತ್ತದೆ. ಆದರೆ ಕೋವಿಡ್ ದಿಂದ ಕೃಷಿ ವಿವಿಗೆ ನೇರವಾಗಿ ಬಂದು ಖರೀದಿಸುವುದು ರೈತರಿಗೆ ಕಷ್ಟವಾಗಿತ್ತು. ಇದನ್ನು ಅರಿತ ಕೃಷಿ ವಿವಿ ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ವಿವಿಯಿಂದ ಮಾನ್ಯತೆ ಪಡೆದ ಖಾಸಗಿ ಬೀಜ ಪೂರೈಕೆ ಸಂಘ ಸಂಸ್ಥೆಗಳು, ಸಹಕಾರ ಮಂಡಳಿಗಳನ್ನು ಸಂಪರ್ಕಮಾಡಿ ಅಲ್ಲಿಗೆ ಹಿಂಗಾರಿ ಬೀಜಗಳ ಪೂರೈಕೆ ಮಾಡಿದೆ. ಅಲ್ಲದೇ ಧಾರವಾಡ ಹೊರತುಪಡಿಸಿ ಉತ್ತರ ಕನ್ನಡ, ಗದಗ, ಹಾವೇರಿ, ದಾವಣಗೆರೆ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್‌, ಕಲಬುರಗಿವರೆಗೂ ಸ್ಥಳೀಯ ಸಂಸ್ಥೆಗಳ ಮೂಲಕವೇ ಬೀಜ ರೈತರ ಕೈ ಸೇರುವಂತೆ ಕೃಷಿ ವಿವಿ ನೋಡಿಕೊಂಡಿದೆ ಎಂದು ಕೃಷಿ ವಿವಿ ಬೀಜ ಪೂರೈಕೆ ಘಟಕದ ಡಾ|ಜಿತೇಂದ್ರ ಕುಮಾರ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಸ್ಥಳೀಯ ಬೀಜೋತ್ಪಾದನೆಗೆ ಒತ್ತು: ರೈತರೇ ಸ್ವತಂತ್ರವಾಗಿ ಒಂದಿಷ್ಟು ಬೀಜೋತ್ಪಾದನೆ ಮಾಡುವ ನಿಟ್ಟಿನಲ್ಲಿ ಪ್ರೋತ್ಸಾಹದಾಯಕ ಯೋಜನೆಯೊಂದನ್ನು ಕೃಷಿ ವಿವಿ ಈ ವರ್ಷ ಆರಂಭಿಸಿದೆ. ಇದರ ಭಾಗವಾಗಿಯೇ ಇದೀಗ ನವಲಗುಂದದ ಕಲ್ಮೇಶ್ವರ ಫಾರ್ಮರ್ಪ್ರೊಡ್ಯುಸರ್‌ ಕಂಪನಿ ಮೂಲಕ ರೈತರಿಂದ ರೈತರಿಗಾಗಿ ಬೀಜೋತ್ಪಾದನೆ ಮಾಡಿ ಸ್ಥಳೀಯವಾಗಿಯೇ

Advertisement

ಮಾರಾಟ ಮಾಡಲಾಗುತ್ತಿದೆ. ಕಳಪೆ ಬೀಜಗಳ ಹಾವಳಿ ತಪ್ಪಿಸಲು ಮತ್ತು ತಮ್ಮ ಹವಾಗುಣಕ್ಕೆ ಉತ್ತಮ ಫಸಲು ನೀಡುವ ಗುಣಮಟ್ಟದ ಬೀಜವನ್ನು ಸ್ವತಃ ರೈತರೇ ಬೆಳೆದು ಸ್ಥಳೀಯವಾಗಿ ಅಗತ್ಯವಿರುವಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇದರ ಪ್ರಾಯೋಗಿಕ ಪರೀಕ್ಷೆಯೂ ಪೂರ್ಣಗೊಂಡಿದ್ದು, ಈ ವರ್ಷದ ಹಿಂಗಾರಿ ಬೆಳೆಯಾದ ಜೋಳ, ಕಡಲೆಯನ್ನು ಬೆಳೆಯಲಾಗಿದೆ. ಗದಗ ಮತ್ತು ಶಿವಮೊಗ್ಗ ಜಿಲ್ಲೆಯ ರೈತರು ಕೂಡ ಈ ಯೋಜನೆ ಅನ್ವಯ ಸ್ಥಳೀಯವಾಗಿ ಲಭ್ಯವಿರುವ ಉತ್ತಮ ಬೀಜಗಳ ಉತ್ಪಾದನೆ ಮಾಡಿ ಅವುಗಳನ್ನು ಮಾರಾಟ ಮಾಡಲು ಸಜ್ಜಾಗಿದ್ದಾರೆ.

ಆದರೆ ಈ ಬೀಜಗಳ ಪರೀಕ್ಷೆ ಮತ್ತು ದೃಢೀಕರಣವನ್ನು ಕೃಷಿ ವಿವಿಯ ಕೃಷಿ ವಿಜ್ಞಾನಿಗಳೇ ಕೊಡಲಿದ್ದಾರೆ. ಈಗಾಗಲೇ ಕೃಷಿ ವಿಶ್ವವಿದ್ಯಾಲಯಕ್ಕೆ ಉತ್ತಮ ಗುಣಮಟ್ಟದ ಬೀಜ ಪೂರೈಕೆಗೆ 600ಕ್ಕೂ ಅಧಿಕ ರೈತರು ನೋಂದಾಯಿಸಿಕೊಂಡಿದ್ದಾರೆ.

ಬೀಜ ದರ ನಿಗದಿ ವಿಳಂಬ : ಈ ಮಧ್ಯೆ ಕೋವಿಡ್ ಹಾವಳಿಯಿಂದಾಗಿ ಅಧಿಕಾರಿಗಳ ಕ್ವಾರಂಟೈನ್‌ ಮತ್ತು ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯ ದಿಂದ ಬೀಜ ದರ ನಿಗದಿ ವಿಳಂಬವಾಗಿ ಹೋಗಿದೆ. ಪ್ರತಿ ಸೆಪ್ಟೆಂಬರ್‌ ತಿಂಗಳ ಮಧ್ಯದಲ್ಲಿಯೇ ಬೀಜ ದರ ಸಭೆ ನಡೆದು ಸರ್ಕಾರ ಬೀಜ ದರ ನಿಗದಿ ಮಾಡುತ್ತಿತ್ತು. ಆದರೆ ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಬೀಜ ದರ ನಿಗದಿ ಸಭೆ ಅಕ್ಟೋಬರ್‌ ಎರಡನೇ ವಾರದಲ್ಲಿ ನಡೆದಿದ್ದು, ಬೀಜ ಪೂರೈಕೆಗೆ ಮತ್ತಷ್ಟು ವಿಘ್ನಗಳನ್ನು ತಂದೊಡ್ಡಿದೆ. ಕೃಷಿ ವಿವಿ ಬೀಜಗಳ ಶೀಘ್ರ ವಿಲೇವಾರಿ ಮಾಡಿದೆಯಾದರೂ ಖಾಸಗಿ ಕಂಪನಿಗಳು ಬೀಜ ಪೂರೈಕೆಯನ್ನು ಇನ್ನಷ್ಟು ತಡ ಮಾಡುವ ಸಾಧ್ಯತೆ ಇದೆ.

ಈ ಮಧ್ಯೆ ಕೋವಿಡ್ ಹಾವಳಿಯಿಂದಾಗಿ ಅಧಿಕಾರಿಗಳ ಕ್ವಾರಂಟೈನ್‌ ಮತ್ತು ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯ ದಿಂದ ಬೀಜ ದರ ನಿಗದಿ ವಿಳಂಬವಾಗಿ ಹೋಗಿದೆ. ಪ್ರತಿ ಸೆಪ್ಟೆಂಬರ್‌ ತಿಂಗಳ ಮಧ್ಯದಲ್ಲಿಯೇ ಬೀಜ ದರ ಸಭೆ ನಡೆದು ಸರ್ಕಾರ ಬೀಜ ದರ ನಿಗದಿ ಮಾಡುತ್ತಿತ್ತು. ಆದರೆ ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಬೀಜ ದರ ನಿಗದಿ ಸಭೆ ಅಕ್ಟೋಬರ್‌ ಎರಡನೇ ವಾರದಲ್ಲಿ ನಡೆದಿದ್ದು, ಬೀಜ ಪೂರೈಕೆಗೆ ಮತ್ತಷ್ಟು ವಿಘ್ನಗಳನ್ನು ತಂದೊಡ್ಡಿದೆ. ಕೃಷಿ ವಿವಿ ಬೀಜಗಳ ಶೀಘ್ರ ವಿಲೇವಾರಿ ಮಾಡಿದೆಯಾದರೂ ಖಾಸಗಿ ಕಂಪನಿಗಳು ಬೀಜ ಪೂರೈಕೆಯನ್ನು ಇನ್ನಷ್ಟು ತಡ ಮಾಡುವ ಸಾಧ್ಯತೆ ಇದೆ.

ಕೃಷಿ ಮೇಳದಲ್ಲಿಯೇ ಅತೀ ಹೆಚ್ಚು ಬೀಜ ಮಾರಾಟವಾಗುತ್ತಿತ್ತು. ಕೋವಿಡ್ ಹಿನ್ನೆಲೆಯಲ್ಲಿಯಲ್ಲಿ ಕೃಷಿ ಮೇಳ ರದ್ದಾಗಿದೆ. ಹೀಗಾಗಿ ಸ್ಥಳೀಯ ಸಂಘ-ಸಂಸ್ಥೆಗಳ ಮೂಲಕ ಮತ್ತು ನೇರವಾಗಿ ರೈತರಿಗೆ ಉತ್ತಮ ಗುಣಮಟ್ಟದ ಹಿಂಗಾರಿ ಬೆಳೆಗಳ ಬಿತ್ತನೆಬೀಜಗಳನ್ನು ಕೃಷಿ ವಿವಿ ಹೊಸ ಮಾರ್ಗದ ಮೂಲಕ ಪೂರೈಕೆ ಮಾಡಿದೆ.  -ಡಾ|ಎಂ.ಬಿ.ಚೆಟ್ಟಿ, ಧಾರವಾಡ ಕೃಷಿ ವಿವಿ

 

-ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next