Advertisement
ತಾಳೆ ನಡುವೆ ಕೊರಲೆಇವರದು ಒಂದೂ ಕಾಲು ಎಕರೆ ಜಮೀನು. ಮೂವತ್ತು ಅಡಿಗೊಂದರಂತೆ ತಾಳೆ ಮರಗಳಿವೆ. ಎಲ್ಲವೂ ಎರಡು ವರ್ಷದ ಮರಗಳು. ಅಲ್ಲಲ್ಲಿ ನಿಂಬೆ ಗಿಡಗಳು, ದಾಲಿcನ್ನಿ ಗಿಡಗಳು. ಕಳೆದ ಮುಂಗಾರಿನಲ್ಲಿ ಕೊರಲೆ ಕೃಷಿ ಮಾಡಿದ್ದ ಅವರಿಗೆ ಆಘಾತವೊಂದು ಎದುರಾಗಿತ್ತು. ತಾಳೆ ತೋಟದ ಮಧ್ಯೆ ಒಂದು ಎಕರೆಯಲ್ಲಿ ಕೊರಲೆ ಬಿತ್ತಿದ್ದರು. ಉತ್ತಮ ಇಳುವರಿಯನ್ನೇ ಹೊತ್ತು ನಿಂತಿತ್ತು. ಆದರೆ ಕಟಾವಿನ ವೇಳೆ ಎಡಬಿಡದೇ ಸುರಿದ ಮಳೆ ಇವರಿಗೆ ನಷ್ಟ ತಂದೊಡ್ಡಿತ್ತು. ಮೂರು ಅಡಿಗಳಿಗೂ ಎತ್ತರವಾಗಿ ಬೆಳೆದಿದ್ದ ಗಿಡಗಳು ನೆಲ ಕಚ್ಚಿದ್ದವು. ಕಾಳುಗಳು ಭೂಮಿ ಪಾಲಾಗಿದ್ದವು. ಕೊಯ್ಲು ಮಾಡುವಂತಿಲ್ಲ. ಮಳೆ ದಿನ ಬಿಟ್ಟು ದಿನ ಸುರಿಯುತ್ತಿದೆ. ಎಲ್ಲವೂ ಕೆಟ್ಟು ಹೋಯಿತು ಎಂದು ನಿರಾಶರಾಗಿದ್ದರು. ಮಳೆ ನಿಂತ ಮೇಲೆ ಸಿಕ್ಕಷ್ಟು ಸಿಗಲಿ ಎಂದು ಕೊಯ್ಲಿಗೆ ಆಳುಗಳನ್ನು ಹಚ್ಚಿದರು. ಕೆಸರಿನ ಮಧ್ಯೆ ಜಾಗ್ರತೆಯಿಂದ ಕೊಯ್ಲು ಮುಗಿಸಿದಾಗ ಎಂಟು ಕ್ವಿಂಟಾಲ್ ಇಳುವರಿ ಸಿಕ್ಕಿತು. ಒಂದು ವೇಳೆ ಮಳೆಯಾಗದೇ ಇದ್ದರೆ ಹನ್ನೆರಡು ಕ್ವಿಂಟಾಲ್ ಇಳುವರಿ ಸಿಗುತ್ತಿತ್ತು. ಆಸರೆಯಾಗಬೇಕಾದ ಮಳೆ ಅಕಾಲದಲ್ಲಿ ಸುರಿದು ಬೆಳೆ ನಷ್ಟವಾಯಿತಲ್ಲ ಎಂದು ಕೊರಗಿ ಹಲವರಲ್ಲಿ ತಮ್ಮ ನೋವು ಹಂಚಿಕೊಂಡಿದ್ದರು. ಆದರೂ ಎಂಟು ಕ್ವಿಂಟಾಲ್‌ಗಳಷ್ಟು ಇಳುವರಿ ಸಿಕ್ಕಿದ್ದು ಅದೃಷ್ಟವೆಂದೇ ಭಾವಿಸಿದ್ದರು.
ಬೆಳೆ ಕೊಯ್ಲು ಮುಗಿದ ನಂತರ ಸಪ್ಟೆಂಬರ್ ಮೊದಲ ವಾರದಲ್ಲಿ ಮುಂದಿನ ಬೆಳೆಗೆ ಅನುಕೂಲವಾಗಲೆಂದು ಭೂಮಿಯನ್ನು ರೋಟೋವೇಟರ್ ಸಹಾಯದಿಂದ ಉಳುಮೆ ಮಾಡಿಸಿದ್ದರು. ಹುಲ್ಲುಗಳನ್ನೆಲ್ಲ ಆರಿಸಿ ತೆಗೆದು ಭೂಮಿಯನ್ನು ಸ್ವತ್ಛಗೊಳಿಸಿದರು. ಉಳುಮೆ ಕೆಲಸ ಮುಗಿಸಿ ವಾರದ ನಂತರ ಪುನಃ ಆ ಹೊಲಕ್ಕೆ ತೆರಳಿದ ಮಂಜಪ್ಪ ಅವರಿಗೆ ಅಚ್ಚರಿ! ಮಳೆಯ ಕಾರಣದಿಂದ ಗದ್ದೆ ಪಾಲಾಗಿದ್ದ ಕೊರಲೆ ಬೀಜಗಳು ಮಣ್ಣಿನ ತೇವದಿಂದಲೇ ಮೊಳಕೆಯೊಡೆದು ನಿಂತಿದ್ದವು. ಒಂದು ಇಂಚಿನಷ್ಟು ಎತ್ತರ ಬೆಳೆಸಿದ್ದವು. ತಡಮಾಡದೇ ಗದ್ದೆಗೆ ನೀರು ಹಾಯಿಸಿದರು. ಕೆಲವೇ ದಿನಗಳಲ್ಲಿ ಗಿಡಗಳು ಒತ್ತೂತ್ತಾಗಿ ಬೆಳೆದು ನಿಂತವು. ಅತೀ ಸಮೀಪದಲ್ಲಿ ಒಂದಕ್ಕೊಂದು ತಾಗಿಕೊಂಡಂತೆ ಬೆಳೆದು ನಿಂತ ಕೊರಲೆ ಗಿಡಗಳ ಮಧ್ಯೆ ಕಳೆಗಳು ಬೆಳೆದು ನಿಲ್ಲಲು ಸೋತಿದ್ದವು. ಕಳೆ ರಹಿತವಾಗಿ ಕೊರಲೆ ಕೃಷಿ ಕಂಗೊಳಿಸುತ್ತಿತ್ತು. ಅಲ್ಲಲ್ಲಿ ತೆಳ್ಳಗೆ ಕಂಡುಬಂದ ಕಳೆಯನ್ನು ಕೈ ಯಲ್ಲಿಯೇ ಕಿತ್ತೂಗೆದರು. ಸಾಲಿನಲ್ಲಿ ನಾಟಿ ಮಾಡಿದಾಗ ಹೊಡೆಯುತ್ತಿದ್ದ ಕುಂಟೆಯನ್ನು ಈ ಬಾರಿ ಹೊಡೆದಿರಲಿಲ್ಲ. ಬೀಜ ಬಿತ್ತದಿದ್ದರೂ, ಗೊಬ್ಬರ ಬಳಸದಿದ್ದರೂ, ಅಶಿಸ್ತಿನಿಂದ ಬೆಳೆದ ಕೊರಲೆ ಕೃಷಿಯಿಂದ ಮಂಜಪ್ಪ ಹತ್ತು ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ಹಿಂಗಾರಿನಲ್ಲಿ ಭೂಮಿಯನ್ನು ಖಾಲಿ ಬಿಡಬೇಕೆಂದು ನಿರ್ಧರಿಸಿದ್ದ ಇವರಿಗೆ ಅಕಾಲಿಕವಾಗಿ ಭೂಮಿಯಲ್ಲಿ ಬಿದ್ದ ಕೊರಲೆ ಬೀಜವೇ ವರದಾನವಾಗಿ ಪರಿಣಮಿಸಿತ್ತು. ‘ಸಿರಿಧಾನ್ಯದ ತಾಕತ್ತು ಅಂದ್ರೆ ಇದೇ ನೋಡ್ರೀ’ ಎನ್ನುತ್ತಾ ಬಿಗುಮಾನದಿಂದ ನುಡಿದರು ಮಂಜಪ್ಪ. ಸಂಪರ್ಕಿಸಲು: 9731326558
Related Articles
Advertisement