Advertisement

ಸೀಡ್‌ ಬ್ಯಾಂಕ್‌ ದೇಸೀ ತಳಿಗಳೇ ಶ್ರೇಷ್ಠ

06:29 PM Oct 20, 2019 | Sriram |

ಕೃಷಿ ಮೇಲಿನ ಪ್ರೀತಿಯಿಂದ ಓದನ್ನು ಅರ್ಧಕ್ಕೇ ನಿಲ್ಲಿಸಿದ ಪರಮೇಶ್ವರನ್‌ ಇಂದು ಪೂರ್ಣ ಪ್ರಮಾಣದ ಕೃಷಿಕ. ಅಷ್ಟೇ ಅಲ್ಲ, ಅವರು ಸೀಡ್‌ ಬ್ಯಾಂಕ್‌ ಸ್ಥಾಪನೆ ಮಾಡಿರುವುದಲ್ಲದೆ, ಸ್ಥಳೀಯ ರೈತರಿಗೆ ಈ ಕುರಿತು ಕಾರ್ಯಾಗಾರಗಳನ್ನೂ ಹಮ್ಮಿಕೊಳ್ಳುತ್ತಿದ್ದಾರೆ.

Advertisement

ತಮಿಳುನಾಡಿನ ಡಿಂಡಿಗಲ್‌ ಜಿಲ್ಲೆಯ ಕುಟ್ಟಿಯ ಗೌಂಡನ್ಪುರ್ಡು ಗ್ರಾಮದಲ್ಲಿದೆ ಆಧಿಯಾಗೈ ಪರಮೇಶ್ವರನ್‌ ಅವರ ಆರು ಎಕರೆ ಫಾರ್ಮ್. ಅಲ್ಲಿ ನಿರಂತರವಾದ ನೀರಿನಾಸರೆಯಿಲ್ಲ. ಆದರ ಪರಮೇಶ್ವರನ್‌ಗೆ ತನ್ನ ಬೆಳೆಗಳು ಉಳಿದು ಬೆಳೆಯುತ್ತವೆಂಬ ವಿಶ್ವಾಸ. ಯಾಕೆಂದರೆ ಅವೆಲ್ಲವೂ ಒಣಪ್ರದೇಶಕ್ಕೆ ಸೂಕ್ತವಾದ ದೇಸಿ ಬೀಜಗಳಿಂದ ಬೆಳೆಸಿದವುಗಳು. ಹೆತ್ತವರು ಗೇಣಿಗೆ ಪಡೆದ ಒಣಜಮೀನಿನಲ್ಲಿ ದುಡಿಯುತ್ತಾ ಬದುಕಿದ್ದನ್ನು ಗಮನಿಸುತ್ತಲೇ ಬೆಳೆದವರು ಪರಮೇಶ್ವರನ್‌.

ಓದು ಬಿಟ್ಟು ಕೃಷಿಯತ್ತ…
ಬಾಲ್ಯದಿಂದಲೇ ಪರಮೇಶ್ವರನ್‌ ಅವರಿಗೆ ಕೃಷಿಯತ್ತ ಒಲವು. ಇಂಜಿನಿಯರಿಂಗ್‌ ಶಿಕ್ಷಣಕ್ಕಾಗಿ ಕಾಲೇಜು ಸೇರಿದಾಗಲೂ ಅದು ಮುಂದುವರಿದಿತ್ತು. ಆದರೆ ವಾಯುಯಾನ ಇಂಜಿನಿಯರಿಂಗ್‌ ಶಿಕ್ಷಣವನ್ನು ನಾಲ್ಕನೆಯ ವರ್ಷದಲ್ಲಿ ತೊರೆದು ತನ್ನ ಹಳ್ಳಿಗೆ ಮರಳಿ, ಪೂರ್ಣಾವಧಿ ಸಾವಯವ ಕೃಷಿಕರಾದರು! ಇದರಿಂದಾಗಿ ಅವರ ಹೆತ್ತವರಿಗೆ ತೀವ್ರ ಅಸಮಾಧಾನ. “ಎಲ್ಲಾ ಪೋಷಕರಂತೆ ನನ್ನ ಹೆತ್ತವರಿಗೂ ಶುರುವಿನಲ್ಲಿ ನಿರಾಶೆಯಾಗಿತ್ತು. ಆದರೆ ಈಗ, ನನ್ನ ನಿರ್ಧಾರದ ಬಗ್ಗೆ ಅವರಿಗೆ ಸಂತೋಷ ಹಾಗೂ ಹೆಮ್ಮೆ. ಜೊತೆಗೆ, ನನ್ನ ಪತ್ನಿ ಕಾಯಲ್‌, ಆಧಾರ ಸ್ತಂಭದಂತೆ ನನಗೆ ಬೆಂಬಲ ನೀಡಿದಳು’ ಎನ್ನುತ್ತಾರೆ ಪರಮೇಶ್ವರನ್‌.

2014ರಲ್ಲಿ, ಲೀಸ್‌ಗೆ ಪಡೆದ ಆರು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಆರಂಭಿಸಿದ್ದರು ಪರಮೇಶ್ವರನ್‌. ಇವರಿಗೆ ಸ್ಫೂರ್ತಿ, ಪರಿಸರ ಹೋರಾಟಗಾರ ಹಾಗೂ ಸಾವಯವ ಕೃಷಿಕ ಜಿ. ನಮ್ಮಾಳ್ವಾರ್‌. ಕರೂರಿನ ವನಗಂನಲ್ಲಿ ನಮ್ಮಾಳ್ವಾರ್‌ ನಡೆಸಿದ ಕಾರ್ಯಾಗಾರಕ್ಕೆ ಹಾಜರಾಗಿ, ಅವರ ಕೆಲವು ಕೃಷಿ ತತ್ವಗಳನ್ನು ಕಲಿತರು. ಅದು ಬಿ.ಟಿ- ಬದನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದ ಕಾಲ. ಯುವಕ ಪರಮೇಶ್ವರನ್‌ ತಮಿಳುನಾಡಿನ ಮೂಲೆಮೂಲೆಯ ಹಳ್ಳಿಗಳಲ್ಲಿ ಸಂಚರಿಸಿದರು. ಹಿರಿಯ ರೈತರನ್ನು, ಪರಿಣತರನ್ನು ಭೇಟಿ ಮಾಡಿ, ದೇಸಿ ತಳಿಗಳ ವಿವರ ದಾಖಲಿಸಿದರು. ಈ ಸಂವಾದಗಳು ಅವರ ಕಣ್ಣು ತೆರೆಸಿದವು.

ಈಗ ಪರಮೇಶ್ವರನ್‌ ಅವರ ಬೀಜಬ್ಯಾಂಕಿನಲ್ಲಿ ಬದನೆ ಮತ್ತು ಸೋರೆಕಾಯಿಯ ತಲಾ 30 ತಳಿಗಳು, ಬೆಂಡೆಯ 13 ತಳಿಗಳು, ಜೋಳದ 10 ತಳಿಗಳು, ಲವಂಗ ,ಬೀನ್ಸ್‌ ರೆಕ್ಕೆ ಬೀನ್ಸ್‌ ಮತ್ತು ಕತ್ತಿ ಬೀನ್ಸಿನ ಅಪರೂಪದ ತಳಿಗಳನ್ನು ರಕ್ಷಿಸಲಾಗಿದೆ. ಅವರು ಸಂಗ್ರಹಿಸಿದ ಹಲವಾರು ತಳಿಗಳನ್ನು ರೈತರು ಮನೆಬಳಕೆಗಾಗಿ ಬೆಳೆಯುತ್ತಿದ್ದರು. ಇನ್ನು ಅನೇಕ ತಳಿಗಳನ್ನು ದೇಶದ ಹಲವೆಡೆಗಳ ಬೀಜ ರಕ್ಷಕರಿಂದ ಮತ್ತು ಬೀಜ ಉತ್ಸವಗಳಿಂದ ಸಂಗ್ರಹಿಸಿದ್ದಾರೆ. ಈ ದೇಸಿ ತಳಿಗಳನ್ನು ಸಣ್ಣ ಜಾಗದಲ್ಲಿ ಮನೆ ಬಳಕೆಗಾಗಿ ಬೆಳೆಯಲು ರೈತರನ್ನು ಪೋ›ತ್ಸಾಹಿಸುತ್ತಿದ್ದಾರೆ ಪರಮೇಶ್ವರನ್‌.

Advertisement

ಕನಿಷ್ಟ ಕೀಟ ಬಾಧೆ
ಅವರ ಆರು ಎಕರೆ ಜಮೀನಿನಲ್ಲಿ ಮೂರು ಎಕರೆಯಲ್ಲಿ ನೆಲಗಡಲೆ ಕೃಷಿ. ಉಳಿದ ಮೂರುಎಕರೆ ತರಕಾರಿ ಕೃಷಿಗೆ ಮೀಸಲು. ಅವೆಲ್ಲ ದೇಸಿ ತಳಿ ತರಕಾರಿ ಗಿಡಗಳಿಗೆ ಯಾವುದೇ ಗೊಬ್ಬರ ಹಾಕುತ್ತಿಲ್ಲ ಪರಮೇಶ್ವರನ್‌. ಒಣ ಪ್ರದೇಶದಲ್ಲಿ ತಾನು ಬೆಳೆಯುತ್ತಿರುವ ದೇಸಿ ತಳಿಗಳು ಉತ್ತಮ ಫ‌ಸಲು ನೀಡಲು ಆಗೊಮ್ಮೆ ಈಗೊಮ್ಮೆ ಮಳೆ ಬಂದರೆ ಸಾಕೆನ್ನುತ್ತಾರೆ ಅವರು. ಮೆಣಸು, ಬದನೆ, ಬೆಂಡೆ, ಟೊಮೆಟೊ, ಸೋರೆಕಾಯಿ, ಪಡವಲಕಾಯಿ, ಲವಂಗ ಬೀನ್ಸ್‌, ಕತ್ತಿ ಬೀನ್ಸ್‌, ರೆಕ್ಕೆ ಬೀನ್ಸ್‌- ಇವೆಲ್ಲ ತರಕಾರಿಗಳನ್ನು ಜೊತೆಜೊತೆಯಾಗಿ ಬೆಳೆಸುವ ಕಾರಣ ಕೀಟಗಳ ಬಾಧೆ ಕನಿಷ್ಠ; ಹೀಗೆ ಬಹುಬೆಳೆ ಕೃಷಿ ಮಾಡಿದರೆ ಕೀಟ ನಿಯಂತ್ರಣಕ್ಕಾಗಿ ವೆಚ್ಚ ಮಾಡಬೇಕಾಗಿಲ್ಲ ಎನ್ನುತ್ತಾರೆ.

ಸೀಡ್‌ ಬ್ಯಾಂಕ್‌
ಭಾರತೀಯ ತಳಿವೈವಿಧ್ಯವನ್ನು ಉಳಿಸಲಿಕ್ಕಾಗಿ “ಆಧಿಯಾಗೈ’ (ತಮಿಳಿನಲ್ಲಿ ಇದರರ್ಥ ಅರಳುವುದು ಎಂದು) ಬೀಜ ಬ್ಯಾಂಕ್‌ ಶುರು ಮಾಡಿದರು. ಕಳೆದ ಐದು ವರ್ಷಗಳಲ್ಲಿ ಪರಮೇಶ್ವರನ್‌ ಸಂಗ್ರಹಿಸಿರುವ 300ಕ್ಕಿಂತ ಅಧಿಕ ತರಕಾರಿಗಳು ಮತ್ತು ಹಣ್ಣುಗಳ ಬೀಜಗಳನ್ನು ಅಲ್ಲಿ ರಕ್ಷಿಸಲಾಗಿದೆ. ಇವನ್ನು ಸುತ್ತಮುತ್ತಲಿನ ರೈತರಿಗೂ, ನಗರಗಳ ಆಸಕ್ತ ಯುವಕರಿಗೂ ಹಂಚುತ್ತಿದ್ದಾರೆ. ತಮಿಳುನಾಡಿನಲ್ಲಿ ನೂರಕ್ಕಿಂತ ಜಾಸ್ತಿ ಬದನೆ ತಳಿಗಳ ಹೆಸರು ತಿಳಿದಾಗ ನನಗೆ ಆಶ್ಚರ್ಯವಾಯಿತು. ಬೆಂಡೆಯಲ್ಲಿಯೂ ಹಲವಾರು ತಳಿಗಳಿವೆ. ಮೂರು ವರುಷ ಇಳುವರಿ ನೀಡುವ ತಳಿಗಳೂ ಇವೆ. ಕೊಂಗು ಪ್ರದೇಶದಲ್ಲಿ ಅಪರೂಪದ ಗುಲಾಬಿ ಬಣ್ಣದ ಬೆಂಡೆ ತಳಿಯೂ ಇದೆ ಎನ್ನುವ ಪರಮೇಶ್ವರನ್‌ ಅದನ್ನು ಸಂರಕ್ಷಿಸಲು ಸನ್ನದ್ಧರಾಗಿದ್ದಾರೆ.

ಹೈಬ್ರಿಡ್‌ ಬೀಜಗಳು ಮಾರುಕಟ್ಟೆಗೆ ಬಂದಾಗಿನಿಂದ ರೈತರಿಗೆ ದೇಸಿ ಬೀಜಗಳು ಸಿಗುತ್ತಿಲ್ಲ. ಹೈಬ್ರಿಡ್‌ ಬೀಜಕ್ಕಾಗಿ ರೈತರು ತಮ್ಮ ಒಟ್ಟು ಕೃಷಿ ವೆಚ್ಚದ ಶೇ.20ರಷ್ಟು ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ದೇಸಿ ತಳಿಗಳ ಸಂರಕ್ಷಣೆ ತುರ್ತಾಗಿ ಆಗಬೇಕಾದ ಕೆಲಸ.
– ಪರಮೇಶ್ವರನ್‌, ಕೃಷಿಕ

-ಅಡ್ಡೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next