ಬೆಂಗಳೂರು: ಯುಟ್ಯೂಬ್‌ನಲ್ಲಿ ಕಿರುಚಿತ್ರ ನೋಡಿ ದುಬಾರಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಯುವಕನನ್ನು ಚಂದ್ರ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಚಂದ್ರಕಾಂತ್ ಅಲಿಯಾಸ್ ಗುಂಡ (23) ಬಂಧಿತ.
ಆರೋಪಿ ತನ್ನ ಸ್ನೇಹಿತ ವಿಶ್ವ ಎಂಬಾತನ ಜತೆ ಸೇರಿ ಮನೆ ಮುಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಅತೀ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಆರೋಪಿಯಿಂದ 20 ಲಕ್ಷ ರೂ. ಮೌಲ್ಯದ 32 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.
ಮಂಡ್ಯ ಮೂಲದ ಚಂದ್ರಕಾಂತ್ ಪೋಷಕರು ಕೆಲ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಕೋರಮಂಗಲದಲ್ಲಿ ವಾಸವಾಗಿದ್ದಾರೆ. ಆರೋಪಿ ಪಿಯುಸಿ ಅನುತ್ತೀರ್ಣಗೊಂಡಿದ್ದು, ಯಾವುದೇ ಕೆಲಸ ಮಾಡದೆ ಮನೆಯಲ್ಲೇ ಇರುತ್ತಿದ್ದ. ಈ ಮಧ್ಯೆ ಸ್ನೇಹಿತ ವಿಶ್ವನ ಜತೆ ಮೋಜಿನ ಜೀವನಕ್ಕಾಗಿ ಬೈಕ್ ಕಳವು ಮಾಡುತ್ತಿದ್ದ. ಈತನ ಈ ಕೃತ್ಯ ಪೋಷಕರಿಗೆ ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದರು.
ಲಾಕ್ ಮುರಿದು ಕಳ್ಳತನ: ವಾರದ ಮೂರು ದಿನಗಳು ಸ್ನೇಹಿತನ ಮನೆಗೆ ಹೋಗುತ್ತೇನೆ ಎಂದು ಮನೆಯಿಂದ ಹೋಗುತ್ತಿದ್ದ ಆರೋಪಿ, ನಗರದ ಕೆಲ ಪ್ರದೇಶಗಳನ್ನು ಸ್ನೇಹಿತ ವಿಶ್ವನ ಜತೆ ಸುತ್ತಾಡುತ್ತಿದ್ದ. ಬಳಿಕ ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್, ಪಲ್ಸರ್, ಡಿಯೋ, ಡ್ನೂಕ್ ಹಾಗೂ ಇತರೆ ದ್ವಿಚಕ್ರ ವಾಹನಗಳನ್ನು ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು.
ಒಮ್ಮೆಲೇ ನಾಲ್ಕೈದು ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳು, ಮಂಡ್ಯ, ರಾಮನಗರ ಜಿಲ್ಲೆಗಳ ಕಡೆ ಕೊಂಡೊಯ್ದು ಅಲ್ಲಿನ ಗ್ರಾಮೀಣ ಜನರಿಗೆ ಕೇವಲ 20-30 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ದಾಖಲೆಗಳನ್ನು ಕೇಳಿದಾಗ ಮತ್ತೂಮ್ಮೆ ಕೊಡುವುದಾಗಿ ತಲೆಮರೆಸಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
ಯುಟ್ಯೂಬ್ ಪ್ರೇರಣೆ: ಅರ್ಧಕ್ಕೆ ವ್ಯಾಸಂಗ ಮೊಟಕುಗೊಳಿಸಿರುವ ಆರೋಪಿಗಳು ಬೈಕ್ ಕಳವು ಮಾಡಲು ಯುಟ್ಯೂಬ್ ವೀಕ್ಷಣೆ ಮಾಡುತ್ತಿದ್ದರು ಎಂಬ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿಗಳು ಯುಟ್ಯೂಬ್‌ನಲ್ಲಿ “ಔ ಟು ಸ್ಟೀಲ್ ರಾಯಲ್ ಬೈಕ್’ ಎಂಬ ಕಿರುಚಿತ್ರ ವೀಕ್ಷಣೆ ಮಾಡಿ ಪ್ರೇರಣೆ ಪಡೆದು ಕೃತ್ಯವೆಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದರು.