ಕೋವಿಡ್ ಒಂದನೇ ಅಲೆಗೆ ತತ್ತರಿಸಿದ ಸಿನಿಮಾ ರಂಗ ಒಟಿಟಿ ಪ್ಲಾಟ್ ಫಾರಂಗಳಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡುವ ಮೂಲಕ ಜನರಿಗೆ ಮನೋರಂಜನೆ ನೀಡತೊಡಗಿದವು. ಇದೀಗ ಕೋವಿಡ್ ಎರಡನೇ ಅಲೆ ದೇಶದೆಲ್ಲೆಡೆ ಹಬ್ಬಿದ್ದು, ಮನರಂಝನೆಯ ದೃಷ್ಟಿಯಿಂದ ಮತ್ತೊಮ್ಮೆ ಒಟಿಟಿಯೇ ಜನರಿಗೆ ಹತ್ತಿರವಾಗುತ್ತಿದೆ.
ಲಾಕ್ ಡೌನ್ ಸಮಯದಲ್ಲಿ ಅನೇಕ ಸಿನಿಮಾಗಳು ಒಟಿಟಿ ಪ್ಲಾಟ್‌ಫಾರ್ಮ್ ನಲ್ಲಿ ಬಿಡುಗಡೆಗೊಂಡಿವೆ. ಆ ಸಿನಿಮಾಗಳಲ್ಲಿ ಮಲಯಾಳಂನ “ಸಿ ಯೂ ಸೂನ್” ಸಿನಿಮಾ ಕೂಡ ಒಂದು.
ಪ್ರಯೋಗಾತ್ಮಕ ಸಿನೆಮಾಗಳಿಗೆ ಹೆಸರುವಾಸಿಯಾದ ಮಲಯಾಳಂ ಚಿತ್ರರಂಗ, ನೈಜತೆಯ ಮೂಲಕ ಜನರನ್ನು ಮನೊರಂಜಿಸುತ್ತದೆ.. ಅಂತಹ ಹೊಸ ಪ್ರಯೋಗಗಳ ಪಟ್ಟಿಗೆ ‘ಸಿ ಯೂ ಸೂನ್’ ಸಿನಿಮಾ ಕೂಡ ಸೇರುತ್ತದೆ. ಕೇವಲ ತೊಂಬತ್ತು ಎಂಟು ನಿಮಿಷಗಳ ಕಥೆಯನ್ನು ಹೊಂದಿರುವ ಈ ಸಿನಿಮಾ, ಮೇಕೆಂಗ್ ನಲ್ಲಿ ಉಳಿದೆಲ್ಲಾ ಸಿನಿಮಾಗಳಿಗಿಂತ ಕೊಂಚ ವಿಭಿನ್ನ.
ಇದನ್ನೂ ಓದಿ : ಬ್ಲ್ಯಾಕ್ ಫಂಗಸ್ 7000 ಕೋವಿಡ್ ಸೋಂಕಿತರನ್ನು ಬಲಿ ತೆಗೆದುಕೊಂಡಿದೆ : ಡಾ. ರಣದೀಪ್ ಗುಲೇರಿಯಾ
‘ಸಿ ಯೂ ಸೂನ್’ ನೈಜ ಘಟನೆ ಆಧಾರಿತ ಸಿನಿಮಾವಾಗಿದೆ. ಸಿನಿಮಾದ ನಾಯಕ ಜಿಮ್ಮಿ ಕುರಿಯನ್ ಕೇರಳ ಮೂಲದವನಾಗಿದ್ದು, ಅರಬ್ ದೇಶದ ಬ್ಯಾಂಕ್ ಒಂದರಲ್ಲಿ ಕ್ಲೈಂಟ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಈತನಿಗೆ ಫೇಸ್ ಬುಕ್ ಮೂಲಕ ಅನು ಎಂಬ ಹುಡುಗಿಯ ಪರಿಚಯವಾಗುತ್ತದೆ. ದಿನಕಳೆದಂತೆ ಇಬ್ಬರೂ ಹಾಂಗೌಟ್ ಮತ್ತು ಗೋಗಲ್ ಮೀಟ್ ನಲ್ಲಿ ಚಾಟ್ ಮತ್ತು ವಿಡಿಯೋ ಕಾಲ್ ಮಾಡುವ ಮೂಲಕ ಹತ್ತಿರವಾಗುತ್ತಾ ಒಬ್ಬರನೊಬ್ಬರು ಪ್ರೀತಿಸತೊಡಗುತ್ತಾರೆ. ಒಂದು ದಿನ ಅನು ಇದ್ದಕ್ಕಿದ್ದಂತೆ ಅನುಮಾನಸ್ಪದವಾಗಿ ಕಾಣೆಯಾಗುತ್ತಾಳೆ. ಇದರಿಂದ ಜಿಮ್ಮಿ ತೊಂದರೆಗೊಳಗಾಗುತ್ತಾನೆ. ಈ ಎಲ್ಲಾ ಗೊಂದಲಗಳಿಂದ ಜಿಮ್ಮಿಯನ್ನು ಕಾಪಾಡಲು ಆತನ ಸಹೋದರ ಕೆವಿನ್ ತೊಮಸ್ ಅನುವಿನ ಹಿನ್ನಲೆಯನ್ನು ತಿಳಿದುಕೊಳ್ಳಲು ಹೊರಡುತ್ತಾನೆ. ಆತ ಆಕೆಯ ಹಿನ್ನಲೆ ಬೆನ್ನುಹತ್ತಿದಾಗ ಆತನಿಗೆ ಭಯಾನಕ ವಿಷಯವೊಂದು ತಿಳಿಯುತ್ತದೆ. ಆಕೆ ಯಾರು ಆಕೆಯ ನಿಜವಾದ ಹೆಸರು ಏನು, ಯಾವ ಕಾರಣಕ್ಕಾಗಿ ಜಿಮ್ಮಿಯನ್ನು ಪ್ರೀತಿಸುತ್ತಾಳೆ, ಅದಲ್ಲದೇ ಇದನ್ನೆಲ್ಲಾ ಕೆವಿನ್ ಯಾವ ರೀತಿ ಕಂಡುಹಿಡಿಯುತ್ತಾನೆ ಎನ್ನುವುದೇ ಈ ಸಿನಿಮಾದ ಮುಂದುವರಿದ ಭಾಗ.
ಮಾರ್ಡನ್ ಜಗತ್ತಿನಲ್ಲಿ ಜನರು ಯಾವ ರೀತಿಯಾಗಿ ವರ್ಚುವಲ್ ಲೈಫ್ ಗೆ ಹೊಂದಿಕೊಂಡಿದ್ದಾರೆ ಎನ್ನುವುದಕ್ಕೆ ಈ ಸಿನಿಮಾ ಉತ್ತಮ ನಿದರ್ಶನ. ಈ ಸಿನಿಮಾ ಎಲ್ಲದಕ್ಕಿಂತ ವಿಭಿನ್ನ ಏಕೆಂದರೆ ಇಲ್ಲಿ ಎಲ್ಲಾ ಮಾತುಕಥೆಯು ಚಾಟಿಂಗ್ ಹಾಗೂ ವಿಡಿಯೋ ಕಾಲ್ ಮೂಲಕ ನಡೆಯುತ್ತದೆ. ಇಡೀ ಸಿನಿಮಾದಲ್ಲಿ ಎಲ್ಲಿಯೂ ಯಾರೊಬ್ಬರು ನೇರವಾಗಿ ಭೇಟಿಯಾಗಿ ಮಾತನಾಡುವುದಿಲ್ಲ, ಅಲ್ಲದೇ ನೇರವಾಗಿ ಕ್ಯಾಮರಾ ಎದುರಿಸುವುದಿಲ್ಲ, ಎಲ್ಲವೂ, ಎಲ್ಲರನ್ನು ಚಾಟ್, ವಿಡಿಯೋ ಕಾಲ್ ಮತ್ತು ಕಂಪ್ಯೂಟರ್ ಡೆಕ್ಸ್ಟಾಪ್ ಮೂಲಕ ತೋರಿಸಲಾಗಿದೆ ಎನ್ನುವುದೇ ಈ ಚಿತ್ರದ ವಿಶೇಷತೆ.
ನೈಜ ಕತೆಗಳನ್ನು ಸಿನಿಮಾ ಮೂಲಕ ಜನರಿಗೆ ತಲುಪಿಸುವಲ್ಲಿ ಹೆಸರುವಾಸಿ ನಿರ್ದೇಶಕರಾದ ಮಹೇಶ ನಾರಾಯಣ್ ಅವರ ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಬೇಕು. ಆನಂದಮ್ ಖ್ಯಾತಿಯ ರೋಷನ್ ಮಾಥೀವ್ ಪ್ರಬುದ್ಧವಾದ ನಟನೆಯ ಮೂಲಕ ಜಿಮ್ಮಿ ಕುರಿಯನ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಲಯಾಳಂನ ಹೆಸರಾಂತ ನಟ ಫಾಹದ್ ಫಾಸಿಲ್ ತನ್ನ ನೈಜ ನಟನೆಯ ಮೂಲಕ ಕೆವಿನ್ ಥೋಮಸ್ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅನು ಮೊಲ್ ಪಾತ್ರಕ್ಕೆ ದರ್ಶನ ರಾಜೇಂದ್ರ ಜೀವ ತುಂಬಿದ್ದು, ಇನ್ನುಳಿದಂತೆ ಸೈಜು ಕುರುಪ್, ಮಾಲಾ ಪಾರ್ವತಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಒಂದು ಸಿನಿಮಾವನ್ನು ಈ ರೀತಿಯಲ್ಲೂ ಜನರಿಗೆ ತಲುಪಿಸಬಹುದು ಎನ್ನುವುದಕ್ಕೆ ಈ ಸಿನಿಮಾ ಉತ್ತಮ ಉದಾಹರಣೆ. ಸೋಶಿಯಲ್ ಮಿಡಿಯಾಗಳ ಮೂಲಕ ಅಪರಿಚಿತರನ್ನು ಪರಿಚಿತರನ್ನಾಗಿಸಿಕೊಂಡು ಅದರಿಂದ ಉಂಟಾಗುವ ತೊಂದರೆಗಳನ್ನು ತೋರಿಸುವ ಸಿನಿಮಾವೇ “ಸಿ ಯು ಸೂನ್” ಆಗಿದ್ದು ಮನೋಜ್ಞವಾಗಿ ಮೂಡಿ ಬಂದಿದೆ.
ಕೀರ್ತನಾ ವಿ ಭಟ್
ಆಳ್ವಾಸ್ ಕಾಲೇಜು, ಮೂಡುಬಿದಿರೆ
ಇದನ್ನೂ ಓದಿ : ಕೋವಿಡ್ ನಿಂದ ಪಾರಾಗಲು ಊರಲ್ಲಿ ಸಂಚರಿಸಲು ಬಿಟ್ಟಿದ್ದ ದೈವ ಕುದುರೆ ಸಾವು:ಗ್ರಾಮಸ್ಥರಿಗೆ ಆಘಾತ