Advertisement

ಇಂದೇ ನೋಡಿ, ದೆವ್ವದ ಸಿನಿಮಾ!

03:16 PM Sep 19, 2017 | |

ಕಾರಿರುಳ ರಾತ್ರಿ. ಗವ್ವೆನ್ನುವ ಕತ್ತಲೆಯನ್ನು ಸೀಳಿಕೊಂಡು ಒಂದು ವಿಕಾರವಾದ ಕೂಗು ಕೇಳುತ್ತೆ. ಆತ ನಿಧಾನವಾಗಿ ಆ ಒಂಟಿ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾನೆ. ಇನ್ನೇನು ಬಾಗಿಲು ತೆರೆದು ಒಳ ಹೋಗಬೇಕು… ಪಕ್ಕದಲ್ಲಿ ಕೂತವನು ಕಿಟಾರಂತ ಕಿರುಚಿಕೊಳ್ತಾನೆ. “ಥತ್‌! ಇಂಥ ಮೂವಿಗೆಲ್ಲ ಇವನ್ಯಾಕೆ ಬರ್ತಾನೆ? ಹೆದರುಪುಕ್ಕಲ’ ಎನ್ನುವುದು ಅಕ್ಕಪಕ್ಕದವರ ಕಾಮೆಂಟು. ಹಾರರ್‌ ಮೂವಿ ನೋಡುವಾಗ ನಮ್ಮಲ್ಲಿ ಅನೇಕರ ಪ್ರಾಣ ಬಾಯಿಗೇ ಬಂದುಬಿಡುತ್ತೆ. ಕಿರುಚೋಣ ಅಂದ್ರೆ ಫ್ರೆಂಡ್ಸ್‌ ಗೇಲಿ ಮಾಡ್ತಾರೆ ಅನ್ನೋ ಭಯ ಬೇರೆ. ಹಾಗಾದ್ರೆ ಈ “ಹಾರರ್‌ ಮೂವಿ ಫೋಬಿಯ’ ತೊಲಗಿಸೋದು ಹೇಗೆ?

Advertisement

– ಗುಂಪಲ್ಲಿ “ಗೋವಿಂದ’ ಎನ್ನಿ!
ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋ ಮಾತು ಕೇಳಿದ್ದೀರಲ್ವಾ? ಅದು ಇಲ್ಲಿಯೂ ಅನ್ವಯ. ಹಾರರ್‌ ಮೂವಿ ನೋಡೋಕೆ ಹೋಗುವಾಗ ಗೆಳೆಯರೂ ಜೊತೆಗಿರಲಿ. ಜನ ಹೆಚ್ಚಿದ್ದಷ್ಟೂ ಧೈರ್ಯ ಜಾಸ್ತಿ. ನಿಮ್ಮ ಹಾರ್ಟು ವೀಕಾಗಿದ್ದರೆ, ವೀಕೆಂಡ್‌ನ‌ ರಾತ್ರಿ ರೂಮಿನಲ್ಲಿ ಒಬ್ಬಂಟಿಯಾಗಿ ಹಾರರ್‌ ಫಿಲ್ಮ್ ನೋಡುವ ಸಾಹಸ ಮಾಡ್ಬೇಡಿ.

– ಪಾಪ್‌ಕಾರ್ನ್, ಚಿಪ್ಸ್‌, ಕುರ್‌ಕುರೆ! 
ಸಿನಿಮಾ ನೋಡುವಾಗ ಏನನ್ನಾದ್ರೂ ತಿನ್ನುವುದು ಒಳ್ಳೆಯದು. ಪಾಪ್‌ಕಾರ್ನ್, ಚಿಪ್ಸ್‌, ಕುರ್‌ಕುರೆ… ಯಾವುದಾದ್ರೂ ಆಯ್ತು. ಆಗ ನಿಮ್ಮ ಗಮನ ಸಿನಿಮಾದ ಮೇಲಷ್ಟೇ ಅಲ್ಲದೇ, ತಿನ್ನುವುದರ ಮೇಲೂ ಬೀಳುತ್ತೆ. ಇದರಿಂದ, ಸಿನಿಮಾ ಮತ್ತು ವಾಸ್ತವದ ನಡುವೆ ಒಂದು ಗ್ಯಾಪ್‌ ಸೃಷ್ಟಿ ಆಗುತ್ತೆ. ಇಲ್ಲದಿದ್ದರೆ, ಸಿನಿಮಾ ನೋಡ್ತಾ ನೋಡ್ತಾ ಅದನ್ನೇ ನಿಜಾ ಅಂದುಕೊಂಡು, ಭಯ ಹೆಚ್ಚಾಗಬಹುದು.

– ಸಿನಿಮಾ ನೋಡಿ, ತಕ್ಷಣವೇ ಮಲಗ್ಬೇಡಿ!
ಕೆಲವರು ಮೂವಿ ನೋಡ್ತಾ ನೋಡ್ತಾ ಹಾಗೇ ನಿದ್ದೆಗೆ ಜಾರಿಬಿಡ್ತಾರೆ. ಮೆದುಳು ಇನ್ನೂ ಸಿನಿಮಾದ ಗುಂಗಿನಲ್ಲೇ ಇರೋದ್ರಿಂದ ಕನಸಲ್ಲೂ ಮೋಹಿನಿ ಬಂದು ಕಾಡಬಹುದು. ಅದರ ಬದಲು, ಸಿನಿಮಾದ ನಂತರ ತಮಾಷೆ ಅಥವಾ ಆ್ಯನಿಮೇಟೆಡ್‌ ವಿಡಿಯೋಗಳನ್ನು ನೋಡಿ, ಮಲಗಿ. 

– 3 “ಡಿ’ ಮಂತ್ರ
ಡಿಸ್ಕಸ್‌: ಸಿನಿಮಾ ಮುಗಿದ ನಂತರ ಅದರ ಬಗ್ಗೆ ಸ್ನೇಹಿತರೊಂದಿಗೆ ಡಿಸ್ಕಸ್‌ ಮಾಡಿ. ಯಾವ ಸೀನ್‌ ಜಾಸ್ತಿ ಭಯ ಅನ್ನಿಸಿತು, ಅದಕ್ಕೇನು ಕಾರಣ ಅನ್ನೋ ಬಗ್ಗೆ ಚರ್ಚೆ ನಡೆಸಿ. 

Advertisement

ಡಿಸ್‌ಕನ್ಸ್‌ಟ್ರಕ್ಟ್: ಸಿನಿಮಾದಲ್ಲಿ ಬಳಸಿರುವ ಮ್ಯಾಜಿಕ್‌, ಲಾಜಿಕ್‌, ಟೆಕ್ನಿಕ್‌ಗಳ ಬಗ್ಗೆ ಗಮನ ಹರಿಸಿ. ಎಲ್ಲೆಲ್ಲಿ ತಪ್ಪುಗಳಾಗಿವೆ, ನಿರ್ದೇಶಕರು ನಮ್ಮನ್ನು ಎಲ್ಲೆಲ್ಲಿ ಮೂರ್ಖರನ್ನಾಗಿಸಿದ್ದಾರೆ ಅಂತಾನೂ ಚರ್ಚಿಸಿ. ಒಟ್ಟಾರೆ ಸಿನಿಮಾದ ಪೋಸ್ಟ್‌ಮಾರ್ಟಂ ಮಾಡೋದ್ರಿಂದ ನಿಮ್ಮ ಭಯ ಕಮ್ಮಿ ಆಗುತ್ತೆ. ಯಾವಾಗ ನಿಮ್ಮ ತಲೆ ಲಾಜಿಕ್‌ ಆಗಿ ಯೋಚಿಸುತ್ತೋ ಆಗ ಭಯ ಆಗೋಲ್ಲ.

ಡಿಸ್ಮಿಸ್‌: ಅಯ್ಯೋ ಬಿಟ್ಟು ಬಿಡಿ, ಅದು ಸಿನಿಮಾ ಅಷ್ಟೇ. ನಿಜ ಜೀವನದಲ್ಲಿ ನೀವೇನೂ ಹೀರೋ ಥರ ಕಾಡು- ಮೇಡು ಅಲೆಯೋಕೆ ಹೋಗೋದಿಲ್ಲ ತಾನೆ? ಮತ್ತೇಕೆ ಭಯ?  

– ಅವೆಲ್ಲ ಟೆಕ್ನಾಲಜಿ ಮಹಾತ್ಮೆ
ನಮಗೇನು ಗೊತ್ತಿರುವುದಿಲ್ಲವೋ ಆ ಬಗ್ಗೆ ನಮಗೆ ಭಯ, ಕುತೂಹಲ ಜಾಸ್ತಿ. ಒಮ್ಮೆ ನೀವು ಸಿನಿಮಾದಲ್ಲಿ ಬಳಸಿರುವ ಟೆಕ್ನಾಲಜಿಯನ್ನು ಅರ್ಥ ಮಾಡಿಕೊಂಡರೆ, “ಅಯ್ಯೋ ಇಷ್ಟೇನಾ’ ಅನ್ನಿಸಿಬಿಡುತ್ತೆ. ಆಗ ಮತ್ತೂಂದು ಹಾರರ್‌ ಮೂವಿ ನೋಡುವಾಗ ಮೊದಲಿನಷ್ಟು ಭಯ ಆಗೋದಿಲ್ಲ. ಅವೆಲ್ಲ ಕೃತಕ ಅಂತನ್ನಿಸುತ್ತೆ.

– ಹಾರರ್‌ ಮೂವಿ ಲಿಸ್ಟ್‌
ಹಾರರ್‌ ಫೋಬಿಯಾದಿಂದ ಮುಕ್ತವಾಗೋ ಚಾಲೆಂಜ್‌ ತೆಗೆದುಕೊಂಡು, ಒಂದಿಷ್ಟು ಹಾರರ್‌ ಸಿನಿಮಾಗಳ ಪಟ್ಟಿ ತಯಾರಿಸಿ. ಜಾಸ್ತಿ ಭಯವಾಗೋ ಸಿನಿಮಾನ ಮೊದಲು ನೋಡಿ, ಆಮೇಲೆ ಕಡಿಮೆ ಭಯದ ಸಿನಿಮಾ, ಆಮೇಲೆ ಇನ್ನೂ ಕಡಿಮೆಯದ್ದು… ಹೀಗೆ ಮಾಡೋದಿಂದ್ರ ನಿಮ್ಮ ಭಯ ಸಿನಿಮಾದಿಂದ ಸಿನಿಮಾಕ್ಕೆ ಕುಸಿದು, ಕೊನೆಗೊಂದು ದಿನ ನಡುರಾತ್ರಿಯಲ್ಲೇ ಎದ್ದು ಕುಳಿತು, ಹಾರರ್‌ ಸಿನಿಮಾ ನೋಡ್ತೀರ!

– ಆರದಿರಲಿ ಬೆಳಕು!
ಕತ್ತಲು ಮತ್ತು ಭಯ ಖಾಸಾ ಅಣ್ಣ- ತಮ್ಮಂದಿರು. ಇಬ್ಬರೂ ಜೊತೆ ಜೊತೆಗೇ ಬರುತ್ತಾರೆ. ಹಾಗಾಗಿ ಮ್ಯಾಟಿನಿ ಶೋನಲ್ಲೇ ಹಾರರ್‌ ಸಿನಿಮಾ ನೋಡಿದರೆ ಒಳ್ಳೆಯದು. ಸಿನಿಮಾ ಹಾಲ್‌ನಿಂದ ಹೊರಕ್ಕೆ ಬಂದಾಗ ಬೆಳಕಿದ್ದರೆ ನಿಮಗೆ ಭಯ ಆಗೋಲ್ಲ. ಕತ್ತಲೆಯಲ್ಲಿ ಸಿನಿಮಾ ನೋಡಿ ಹೊರಗೆ ಬಂದಾಗಲೂ ಗವ್ವೆನ್ನುವ ಕತ್ತಲಿದ್ದರೆ, ಸಿನಿಮಾದ ದೆವ್ವ ಮನೆಯವರೆಗೂ ಹಿಂಬಾಲಿಸುತ್ತೆ. ವೀಕೆಂಡ್‌ ರಾತ್ರಿ ಸಿನಿಮಾ ನೋಡೋ ಸಾಹಸ ಬೇಡ ಅನ್ನೋ ಸಲಹೆ ನಮ್ಮದು. ಮೂವಿ ನೋಡಿದ ಬಳಿಕ ಮಲಗುವುದಾದರೆ, ಲೈಟ್‌ ಆನ್‌ ಇರಲಿ.

– ಭಯದ ಮೂಲ ಬಲ್ಲಿರಾ?
ಸಿನಿಮಾ ನೋಡಿ ವಾರವಾದ ಮೇಲೂ ಕತ್ತಲೆಂದರೆ ಭಯವಾಗಿ, ಯಾರಧ್ದೋ ಹೆಜ್ಜೆ ಸಪ್ಪಳ ಕೇಳಿ, ಒಬ್ಬನೇ ಇರೋಕೆ ಅಂಜಿಕೆ ಆಗುತ್ತಾ? ಹಾಗಾದ್ರೆ ಇಲ್ಲೇನೋ ಸಮಸ್ಯೆ ಇದ್ದಂಗಿದೆ. ನಿಮ್ಮ ಭಯದ ಬಗ್ಗೆ ಆತ್ಮೀಯರೊಂದಿಗೆ ಮಾತಾಡಿ. ಭಯದ ಮೂಲ ಕಾರಣವನ್ನು ಅರಿತು, ಪರಿಹಾರ ಕಂಡುಕೊಳ್ಳಿ. 

– ಪಾರ್ಟಿ ಮಾಡಿ
ಒಬ್ಬನೇ ದೆವ್ವದ ಸಿನಿಮಾ ನೋಡೋಷ್ಟು ಗುಂಡಿಗೆ ಗಟ್ಟಿಯಾದ ಮೇಲೆ ಪಾರ್ಟಿ ಮಾಡಿ ಸಂಭ್ರಮಿಸಿ. ನಿಮಗೆ ನೀವೇ ಏನಾದ್ರೂ ಗಿಫ್ಟ್ ಮಾಡಿಕೊಳ್ಳಿ. ಅವತ್ತು ನೈಟ್‌ ಶೋನಲ್ಲಿ ಹಾರರ್‌ ಮೂವಿ ನೋಡಿ ಬನ್ನಿ, ಅದೂ ಒಬ್ಬಂಟಿಯಾಗಿ!

Advertisement

Udayavani is now on Telegram. Click here to join our channel and stay updated with the latest news.

Next