Advertisement

ಇವರೇ ನೋಡಿ ಡಿಜಿಟಲ್‌ ಯುವ ಜನರು

07:46 PM Aug 16, 2020 | Karthik A |

ಇದೊಂದು ಹೊಸಯುಗ, ಮಾಹಿತಿ ಯುಗ, ಬೆರಳ ತುದಿಯಲ್ಲಿ ಪ್ರಪಂಚವೇ ಸುತ್ತುತ್ತಿರುವ ತಂತ್ರಜ್ಞಾನ ಕ್ರಾಂತಿಯ ಯುಗ.

Advertisement

ಯುವಕರು ಮುದುಕರೆನ್ನದೇ ಎಲ್ಲರನ್ನೂ ತನ್ನ ತಾಳಕ್ಕೆ ಕುಣಿಸುತ್ತಿದೆ ಇಂದಿನ ಡಿಜಿಟಲ್‌ ಯುಗ.

ನೋಡ ನೋಡುತ್ತಿರುವಂತೇ ಮಾಹಿತಿ ತಂತ್ರಜ್ಞಾನ ಅಗತ್ಯದ ವಿಷಯವಾಯಿತು.

ನಮಗೆ ಬೇಕಾಗಿಲ್ಲ ನಾವು ಕಲಿಯುವುದಿಲ್ಲ ಎನ್ನುವವರೆಲ್ಲರನ್ನೂ ಬಡಿದೆಬ್ಬಿಸಿ ಮುಖ್ಯವಾಹಿನಿಯಲ್ಲಿ ತೊಡಗಬೇಕಾದರೆ ನೀವೂ ಟೆಕ್‌ ಆಗಬೇಕೆಂಬ ಆಜ್ಞೆಯಾದಂತಾಯಿತು.

ಇಂದು ಈ ಮಾಧ್ಯಮವೊಂದು ಹೊಸ ಹಾದಿಯನ್ನೇ ತೋರಿಸಿದೆ. ನಾವಿಂದು ಅಭಿವ್ಯಕ್ತಿ ಸ್ವಾತಂತ್ರ್ಯದ ತುತ್ತ ತುದಿಯಲ್ಲಿದ್ದೇವೆ. ಮಾಹಿತಿಯ ಮಹಾಪೂರ‌ವೇ ಹರಿಯುತ್ತಿದೆ. ಯುವಜನರಂತೂ ಈ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗುವರೋ ಎಂದು ಹಳೆಯ ತಲೆಮಾರಿನ ಹಿರಿ ಯರಿಗೆ ಅನ್ನಿಸುತ್ತಿದೆ. ಆದರೆ ಯುವ ಜನರ ಉತ್ಸಾಹ, ಹೊಸ ವಿಚಾರಗಳನ್ನು ಕಲಿಯುವ ಸಾಮರ್ಥ್ಯದಿಂದ ಡಿಜಿಟಲ್‌ ಮಾಧ್ಯಮದ ಬಳಕೆ ಸಾರ್ವತ್ರಿಕವಾಗಿದೆ.

Advertisement

ಚಿತ್ರ ವೀಡಿಯೋ, ಬರಹದ ರೂಪದ ಮಾಹಿತಿಯನ್ನು ತಯಾರಿಸುವುದು, ಹಂಚುವುದು, ಸಂರಕ್ಷಿಸುವುದು ಎಲ್ಲವೂ ಈಗ ಸುಲಭ. ದಿನಕ್ಕೊಂದು ಹೊಸ ಐಡಿಯಾದ ಹೊಸ ಹೊಸ ಆ್ಯಪ್‌(ಅಪ್ಲಿಕೇಶನ್‌)ಗಳು ಪ್ಲೇ ಸ್ಟೋರ್‌ ಮತ್ತು ಆ್ಯಪ್‌ ಸ್ಟೋರ್‌ಗಳಿಗೆ ಲಗ್ಗೆ ಇಡುತ್ತಿವೆ. ಈ ಆ್ಯಪ್‌ಗ್ಳ ಲೋಕವೇ ಅದ್ಭುತ. ಭಾಷೆ, ವಿಷಯ, ಯಾವುದೇ ಕೌಶಲವರ್ಧನೆಗೆ ಪೂರಕ ಆ್ಯಪ್‌ಗ್ಳಿವೆ. ಗೇಮಿಂಗ್‌ನ ಅತ್ಯಂತ ಕುತೂಹಲಕಾರಿ ಲೋಕವೊಂದು ನೆಟ್‌ನಲ್ಲಿದೆ. ಯುವಜನರನ್ನು ಬೇರೆಯೇ ಪ್ರಪಂಚಕ್ಕೆ ಕೊಂಡೊಯ್ಯಬಲ್ಲ ಮನರಂಜನೀಯ ಆ್ಯಪ್ ಗಳಿವೆ.

ಇಂದಿನ ಉದ್ಯೋಗ ಕ್ರಮದಲ್ಲಿ ಡಿಜಿಟಲ್‌ ಲೋಕದಲ್ಲೇ ಇರುವುದು ಅನಿವಾರ್ಯವಾಗಿದೆ. ತನ್ನ ಪಿಜಿಯಿಂದ ಕ್ಯಾಬ್‌ ಬುಕ್‌ ಮಾಡಿ, ಅದರಲ್ಲಿ ಆಫೀಸಿಗೆ ಪ್ರಯಾಣಿಸುವಾಗ ಲ್ಯಾಪ್‌ಟಾಪ್‌ನಲ್ಲಿ ಮೇಲ್‌ಗ‌ಳಿಗೆ ಉತ್ತರ ನೀಡುತ್ತಾ ಆಫೀಸಿಗೆ ತಲುಪುವುದು. ಅನಂತರ ತನ್ನ ಆಫೀಸ್‌ ಕೆಲಸವನ್ನು ಮುಂದುವರಿಸಿ ಮಧ್ಯಾಹ್ನದ ಊಟವನ್ನು ಕೂಡ ಮೊಬೈಲ್‌ ಮೂಲಕ ಬುಕ್‌ ಮಾಡುತ್ತಾರೆ. ಸಂಜೆ ವರೆಗೆ ಮತ್ತೆ ಲ್ಯಾಪ್‌ಟಾಪ್‌ನಲ್ಲೇ ಕೆಲಸ. ಕ್ಯಾಬ್‌ನಲ್ಲೇ ಮನೆಗೆ ವಾಪಸ್‌. ವಾರದ ತರಕಾರಿಯನ್ನು ಮನೆಗೆ ತಂದುಕೊಡುವ ವ್ಯವಸ್ಥೆ ಸಹ ಡಿಜಿಟಲ್‌ ಮೂಲಕ ಆರ್ಡರ್‌ ಮಾಡುತ್ತಾರೆ. ಊರಿನಲ್ಲಿರುವ ತಂದೆ ತಾಯಿಗೆ ಝೂಮ್‌ ಮೂಲಕ ಕಾಲ್‌ ಮಾಡಿ ಇಲ್ಲವೇ ವಾಟ್ಸಾಪ್‌ ವೀಡಿಯೋ ಕಾಲ್‌ ಮಾಡಿ ಮಾತನಾಡುತ್ತಾರೆೆ.

ಇಂದು ಹಲವು ಯುವಜನರ ಜೀವನ ಶೈಲಿ ಇದೇ ರೀತಿಯಾಗಿದೆ. ಜೀವನವೇ ಡಿಜಿಟಲ್‌ವುಯವಾಗಿದೆ.
“ಸೋಶಿಯಲ್‌ ಮೀಡಿಯಾ ಆ್ಯಕ್ಟಿವಿಸಂ’ ಎಂಬ ಹೊಸ ಪದ ಕೇಳಿದ್ದೀರಲ್ಲ. ಇದು ಒಂದು ಸಾಮಾಜಿಕ ಕಳಕಳಿಯನ್ನು ತೋರಿಸಲು ಸಾಧ್ಯವಾಗುವ ಚಟುವಟಿಕೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವಿದು. ಗ್ರಾಹಕರ ಹಕ್ಕುಗಳ ವಿಷಯದ ಬಗ್ಗೆ ಕಾಲೇಜು ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ವೀಡಿಯೋ ಮುಖಾಂತರ ಮಾಹಿತಿ ನೀಡುತ್ತಾರೆ. ಇವರ ಫೇಸ್‌ ಬುಕ್‌ ಪೇಜ್‌ ಹಾಗೂ ವಾಟ್ಸಾಪ್‌ ಗುಂಪಿದೆ. ಹೀಗೆ ವಿವಿಧ ಆಸಕ್ತಿಯ ವಾಟ್ಸಾಪ್‌ ಹಾಗೂ ಟೆಲಿಗ್ರಾಂ ಗುಂಪುಗಳಿವೆ. ಯುವಜನರೇ ಹೆಚ್ಚಿರುವ ಸ್ವತ್ಛ ಭಾರತ್‌ ಗುಂಪುಗಳು ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಿವೆ.

ಡಿಜಿಟಲ್‌ ಮಾಧ್ಯಮ ಬಳಸುವ ವಿಷಯದಲ್ಲಿ ಹಿಂದೆ ಬೀಳುವ ಅಥವಾ ಅನಾಸಕ್ತಿ ತೋರುವ ಮಾತೇ ಇಲ್ಲ. ಸರಕಾರಿ ಯೋಜನೆಗಳಿಗೆ ಆನ್‌ಲೈನ್‌ ಮುಖಾಂತರವೇ ಅರ್ಜಿ ಸಲ್ಲಿಸುವ ಸವಲತ್ತುಗಳನ್ನು ಈಗ ಕೇಂದ್ರ ಸರಕಾರ, ಎಲ್ಲ ರಾಜ್ಯ ಸರಕಾರಗಳು ಹಾಗೂ ಗ್ರಾಮ ಪಂಚಾಯತ್‌ಗಳೂ ನೀಡುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಸದವಕಾಶವನ್ನು ಕಳೆದುಕೊಳ್ಳಬಾರದು ಎಂದಾದರೆ, ಆನ್‌ಲೈನ್‌ ಮೂಲಕ ಸರಕಾರಿ ಕೆಲಸವನ್ನು ಮಾಡಿಸಿಕೊಳ್ಳುವುದನ್ನು ನಾವು ಕಲಿಯಬೇಕಾಗಿದೆ.

ಹಿರಿಯರು ಕಿರಿಯರೆನ್ನದೇ “ಡಿಜಿಟಲ್‌ ಮನೋವೃತ್ತಿ’ ಹೊಂದುತ್ತಿರುವುದು ಧನಾತ್ಮಕ ಬೆಳವಣಿಗೆಯಾಗಿದೆ. ಆದರೆ ಈ ದಿಸೆಯಲ್ಲಿ ಇನ್ನೂ ನಾವು ಹೆಚ್ಚಿನ ದೂರ ಕ್ರಮಿಸುವುದು ಬಾಕಿ ಇದೆ. ಯುವ ಜನರು ಸ್ಕ್ರೀನ್‌ ಲೈಫ್ನಲ್ಲಿ ಕಳೆದು ಹೋಗದೆ ಡಿಜಿಟಲ್‌ ಯುಗದಲ್ಲಿ ಸಂತಸದ ಸಮಯವನ್ನು ಅನುಭವಿಸುವುದರ ಜತೆಗೆ ಹಿರಿಯರಿಗೆ ಡಿಜಿಟಲ್‌ ಸಾಧನಗಳನ್ನು ಬಳಸುವಲ್ಲಿ ಸಹಾಯಮಾಡಿ ಅವರನ್ನೂ ಅಭಿವೃದ್ಧಿಯಲ್ಲಿ ಭಾಗೀದಾರರಾಗಿ ಮಾಡಬೇಕಾಗಿದೆ.

ಸ್ಮಿತಾ ಶೆಣೈ, ಉಪನ್ಯಾಸಕರು, ಬೆಸೆಂಟ್‌ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next