Advertisement

ಉತ್ತಮ ಸಂದೇಶದ ಸಿನೆಮಾ ನೋಡಿ: ಜಿಲ್ಲಾಧಿಕಾರಿ ರಮೇಶ್‌

12:36 PM Feb 04, 2017 | |

ದಾವಣಗೆರೆ: ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ, ಸದಭಿರುಚಿಯ ಚಿತ್ರಗಳನ್ನು ಪ್ರತಿಯೊಬ್ಬರೂ ವೀಕ್ಷಿಸಿ, ಅದರಲ್ಲಿನ ಉತ್ತಮ ಅಂಶಗಳನ್ನು ತಮ್ಮ ಜೀವನದಲ್ಲೂ ರೂಢಿಸಿಕೊಳ್ಳಲು ಮುಂದಾಗಬೇಕು ಎಂದು  ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಹೇಳಿದ್ದಾರೆ. 

Advertisement

ನಗರದ ಮೋತಿ ಚಿತ್ರಮಂದಿರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿರುವ ಉಚಿತ ಚಲನ ಚಿತ್ರೋತ್ಸವ ಸಪ್ತಾಹಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿಯುಳ್ಳ, ಸದಭಿರುಚಿಯ ಚಲನಚಿತ್ರಗಳನ್ನು ಪ್ರತಿಯೊಬ್ಬರೂ ವೀಕ್ಷಿಸಬೇಕು ಎಂದರು. 

ಚಲನಚಿತ್ರಗಳು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಅವುಗಳಲ್ಲಿ ಅನೇಕ ಉತ್ತಮ ಸಂಗತಿಗಳು ಕಾಣಸಿಗುತ್ತವೆ. ಜನರು ಮನರಂಜನೆಗೆ ಆದ್ಯತೆ ನೀಡುತ್ತಿರುವುದರಿಂದ ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ಗಳಿಸಿದ ಉತ್ತಮ ಅಂಶಗಳನ್ನು ಸಾರುವಂತಹ ಚಿತ್ರಗಳು ಪ್ರೇಕ್ಷಕರನ್ನು ತಲುಪುವುದಿಲ್ಲ.

ರಾಜ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ಎಲ್ಲರೂ ವೀಕ್ಷಿಸಬೇಕೆಂಬ ಉದ್ದೇಶದಿಂದಲೇ ಉಚಿತ ಚಿತ್ರೋತ್ಸವ ಸಪ್ತಾಹ ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು. ಹಿರಿಯ ಪತ್ರಕರ್ತ ಬಿ.ಎನ್‌. ಮಲ್ಲೇಶ್‌ ಮಾತನಾಡಿ, ಇಂದಿನ ದಿನಗಳಲ್ಲಿ ಸಿನಿಮಾಗಳೆಂದರೇ ಕೇವಲ ಮನರಂಜನೆಗೆ ಮಾತ್ರವೇ ಸೀಮಿತ ಎಂಬಂತಾಗಿದೆ. 

ಇದರ ಮಧ್ಯೆ ಪ್ರಶಸ್ತಿ ಪಡೆದ, ಸಮಾಜಕ್ಕೆ ಸಂದೇಶ ನೀಡುವ ಸಿನಿಮಾಗಳನ್ನು ಜನರು ನೋಡದಂತಹ ಸ್ಥಿತಿ ಇದೆ. ಅಲ್ಲದೆ, ಪ್ರಶಸ್ತಿ ಪಡೆದ  ಚಿತ್ರಗಳು ಸಿನಿಮಾ ಮಂದಿರಗಳಲ್ಲಿ ನೋಡಲು ಸಿಗುವುದಿಲ್ಲ. ಇತ್ತಿಚೇಗೆ ತೆರೆ ಕಂಡ ತಿಥಿ ಚಿತ್ರ ಇದಕ್ಕೆ ಉದಾಹರಣೆ. ಈ ಚಿತ್ರ ಬೆಂಗಳೂರು ಬಿಟ್ಟು ಬೇರೆಲ್ಲೂ ಪ್ರದರ್ಶನ ಕಾಣಲಿಲ್ಲ.

Advertisement

ಪ್ರಶಸ್ತಿ ಪಡೆದ ಚಿತ್ರಗಳನ್ನು ಜನ ನೋಡುವಂತಾಗಬೇಕು ಎಂದು ಅವರು ತಿಳಿಸಿದರು. ಹಾಯ್‌ ಚಲನಚಿತ್ರ ನಟ ದೇವ್‌ ಯಶ್‌ ರಾಜ್‌ ಮಾತನಾಡಿ, ವಾಣಿಜ್ಯ ಸಿನಿಮಾಗಳಿಗಿಂತ ಸಾಮಾಜಿಕ ಕಳಕಳಿಯುಳ್ಳ ಸಿನಿಮಾಗಳಿಗೆ  ಪ್ರೇಕ್ಷಕ ಹೆಚ್ಚು ಮನ್ನಣೆ ನೀಡಬೇಕು. ಇಂತಹ ಚಿತ್ರಗಳಲ್ಲಿ ನಮ್ಮ ಜೀವನದ ಬದಲಾವಣೆಗೆ ಕಾರಣವಾಗುವಂತಹ ಅಂಶಗಳು ಹೆಚ್ಚಿರುತ್ತವೆ ಎಂದರು. 

ಮೋತಿ ಚಿತ್ರಮಂದಿರದ ಮಾಲೀಕ ಲಲಿತ್‌ ಜೈನ್‌, ಶಶಿಕಾಂತ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಅಶೋಕ್‌ ಕುಮಾರ್‌, ಇತರರು ವೇದಿಕೆಯಲ್ಲಿದ್ದರು. ಪಸ್ತಾಹ ಉದ್ಘಾಟನೆ ನಂತರ ಪುನೀತ್‌ ರಾಜಕುಮಾರ್‌ ಅಭಿನಯದ ಮೈತ್ರಿ ಚಿತ್ರ ಪ್ರದರ್ಶನಗೊಂಡಿತು. ಫೆ. 4ರಂದು ಶಿವಯೋಗಿ ಶ್ರೀ ಪುಟ್ಟಯ್ಯಜ್ಜ, ಫೆ.5ಕ್ಕೆ ತಿಥಿ, ಫೆ.6ಕ್ಕೆ ಕೃಷ್ಣಲೀಲಾ, ಫೆ.7ಕ್ಕೆ ರಂಗಿತರಂಗ, ಫೆ.8ಕ್ಕೆ ತಿಥಿ ಹಾಗೂ ಫೆ. 9ಕ್ಕೆ ಮೈತ್ರಿ ಸಿನಿಮಾ ಪ್ರದರ್ಶನಗೊಳ್ಳಲಿದೆ.   

Advertisement

Udayavani is now on Telegram. Click here to join our channel and stay updated with the latest news.

Next