ಮ್ಯಾಜಿಕ್ ಶೋ ನಡೆಸುವುದು ಮನೋರಂಜನೆಗಾಗಿ. ಖಾಲಿ ಬಾಟಲಿಯಲ್ಲಿ ನೀರು ತರಿಸುವ, ಕಿಸೆಯೊಳಗಿನ ನಾಣ್ಯವನ್ನು ಬಾಯಿಯಿಂದ ಹೊರ ತೆಗೆಯುವ, ಹಗ್ಗವನ್ನು ಹೂವಾಗಿಸುವ ಜಾದೂಗಾರರ ತಂತ್ರಗಳನ್ನು ಮೆಚ್ಚಲು ಬೇರೆ ಕಾರಣ ಬೇಕೆ? ಆದರೆ, ಭಾನುವಾರ ನಡೆಯಲಿರುವ “ಸೇವ್ ಲೈಫ್’ ಜಾದೂ ಪ್ರದರ್ಶನದ ಉದ್ದೇಶ ಮನೋರಂಜನೆಯಷ್ಟೇ ಅಲ್ಲ. ಅದರ ಹಿಂದೆ ಮಾನವೀಯ ಕಾರಣವೊಂದಿದೆ.
ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಜಾದೂಗಾರ ಸುರೇಶ್ ಬಾಬು ಅವರು ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದು, ತುರ್ತಾಗಿ ಕಿಡ್ನಿ ಬದಲಾವಣೆ ಮಾಡುವುದು ಅನಿವಾರ್ಯವಾಗಿದೆ. ಒಂದು ಕಿಡ್ನಿಯನ್ನು ಅವರ ಪತ್ನಿ ಕೊಡುವುದಕ್ಕೆ ಮುಂದಾಗಿದ್ದು, ಇದಕ್ಕೆ ಸುಮಾರು ಏಳು ಲಕ್ಷ ರೂ. ವೈದ್ಯಕೀಯ ವೆಚ್ಚವಾಗಲಿದೆ. ಆರ್ಥಿಕವಾಗಿ ಹಿಂದುಳಿದಿರುವ ಇವರ ವೆಚ್ಚವನ್ನು ಭರಿಸಲೆಂದು, ಖ್ಯಾತ ಯಕ್ಷಿಣಿಗಾರ ಉದಯ್ ಜಾದೂಗಾರ್ ಅವರ ಮುಂದಾಳತ್ವದಲ್ಲಿ ಬೆಂಗಳೂರಿನ ಜಾದೂಗಾರರೆಲ್ಲ ಸೇರಿ ಮ್ಯಾಜಿಕ್ ಶೋ, ಮಾತನಾಡುವ ಗೊಂಬೆ, ಶ್ಯಾಡೋ ಪ್ಲೇ ಕಾರ್ಯಕ್ರಮ ಏರ್ಪಡಿಸಿದ್ದಾರೆ.
ಖ್ಯಾತ ಜಾದೂಗಾರರಾದ ಕೆ. ಎಸ್. ರಮೇಶ್, ಕುದ್ರೋಳ್ಳಿ ಗಣೇಶ್, ಪ್ರಹ್ಲಾದ್ ಆಚಾರ್ಯ, ಇಂದುಶ್ರೀ, ಅಭಿಮಾನ್ ಜೋಯಿಸ್, ಯೋನ, ನಾಗೇಂದ್ರ ಪ್ರಸಾದ್, ಸತ್ಯಮೂರ್ತಿ, ರಾಜ್, ಶಂಕರ್ ಜಾದೂಗಾರ್, ಮುಂತಾದವರು ಕಾರ್ಯಕ್ರಮ ನೀಡಲಿದ್ದಾರೆ. ಜೊತೆಗೆ, ಸಂಜನಾ ಮುರುಡೇಶ್ವರ ಅವರಿಂದ ಚಿತ್ರಗೀತೆ-ಭಕ್ತಿಗೇತೆ ಗಾಯನ, ಪ್ರೀತನ್ ಹರಿಹರ ಅವರಿಂದ ನೃತ್ಯಪ್ರದರ್ಶನ ನಡೆಯಲಿದೆ.
ಯಾವಾಗ?: ಮಾರ್ಚ್ 1, ಭಾನುವಾರ ಬೆಳಗ್ಗೆ 11 ಮತ್ತು ಸಂಜೆ 6
ಎಲ್ಲಿ?: ಕುವೆಂಪು ರಂಗಮಂದಿರ, ಆವಲಹಳ್ಳಿ, ಗಿರಿನಗರ
ಟಿಕೆಟ್ ದರ: ರೂ. 200
ಮಾಹಿತಿ: 9972046434