Advertisement

ಬೆಲ್‌ಬಾಟಮ್‌ನ ದಿವಾಕರನ ನೋಡಿ …

03:40 PM Mar 08, 2018 | |

ಕಳೆದ ತಿಂಗಳು ಜಯತೀರ್ಥ “ಬೆಲ್‌ ಬಾಟಮ್‌’ ಎಂಬ ಸಿನಿಮಾಕ್ಕೆ ಮುಹೂರ್ತ ಮಾಡಿದ್ದರು. ರಿಷಭ್‌ ಶೆಟ್ಟಿ ನಾಯಕರಾಗಿರುವ ಮೊದಲ ಸಿನಿಮಾವಿದು. ಈಗ “ಬೆಲ್‌ ಬಾಟಮ್‌’ ತಂಡ ಚಿತ್ರೀಕರಣದಲ್ಲಿ ಬಿಝಿ. ಮೊದಲ ಹಂತದ ಚಿತ್ರೀಕರಣವನ್ನು ಜೋಗ ಸುತ್ತಮುತ್ತ ಮುಗಿಸಿರುವ ಚಿತ್ರತಂಡ ಈಗ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಿದೆ. ಕುಸುಮಾ ಎಂಬ ಪಾತ್ರದಲ್ಲಿ ನಾಯಕಿ ಹರಿಪ್ರಿಯಾ ಪಕ್ಕಾ ಹೋಮ್ಲಿ ಗೆಟಪ್‌ನಲ್ಲಿ ಹಾಗೂ ಪತ್ತೇದಾರಿ ಲುಕ್‌ನಲ್ಲಿ ನಾಯಕ ರಿಷಭ್‌ ಕಾಣಿಸಿಕೊಂಡಿರುವ ಫೋಟೋಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

Advertisement

“ಬೆಲ್‌ ಬಾಟಮ್‌’ ಒಂದು ಪತ್ತೇದಾರಿ ಸಿನಿಮಾವಾಗಿದ್ದು, ಡಿಟೆಕ್ಟಿವ್‌ ದಿವಾಕರನ ಪಾತ್ರದಲ್ಲಿ ರಿಷಭ್‌ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, “ಬೆಲ್‌ ಬಾಟಮ್‌’ ಚಿತ್ರ 80ರ ದಶಕದಲ್ಲಿ ನಡೆಯುವ ಕಥೆಯನ್ನು ಹೊಂದಿದ್ದು, ಮೊಬೈಲ್‌-ಟಿವಿ-ಸಿಸಿಟಿವಿ ಇಲ್ಲದ ಕಾಲಘಟ್ಟ, ಪೊಲೀಸರ ತನಿಖೆ, ಪತ್ತೇದಾರಿ ತಂತ್ರಗಳು …. ಇವೆಲ್ಲಾ ಇಟ್ಟುಕೊಂಡು ಚಿತ್ರ ಮಾಡಲಾಗುತ್ತಿದೆ. ಹಾಗಾಗಿ, ಅಂದಿನ ಪರಿಸರವನ್ನು ಕಟ್ಟಿಕೊಡಲು ಚಿತ್ರತಂಡ ಬನವಾಸಿ, ಜೋಗ, ಶಿವಮೊಗ್ಗ, ಉಡುಪಿ, ಹಿರಿಯಡ್ಕ, ಹೆಬ್ರಿ ಸುತ್ತಮುತ್ತ ಚಿತ್ರೀಕರಣ ನಡೆಸುತ್ತಿದೆ.

ನಿರ್ದೇಶಕ ಶಿವಮಣಿ ಇಲ್ಲೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ವಿಶೇಷವೆಂದರೆ, ಚಿತ್ರದಲ್ಲಿ ಒಬ್ಬೊಬ್ಬರದ್ದು ಒಂದೊಂದು ವಿಭಿನ್ನ ಹೆಸರುಗಳು. ಜೋಡಿ ನಂಜಪ್ಪ, ಗೂಬೆ ಖಾನ್‌, ಸಗಣಿ ಪಿಂಟೋ, ರೇಡಿಯೋ ರಾಜ, ಮರಕುಟುಕ … ಹೀಗೆ ಒಂದೊಂದು ಪಾತ್ರಕ್ಕೂ ಒಂದೊಂದು ವಿಭಿನ್ನ ಹೆಸರಿಡಲಾಗಿದೆ. ಈ ಚಿತ್ರವನ್ನು ಗೋಲ್ಡನ್‌ ಹಾರ್ಸ್‌ ಸಿನಿಮಾಸ್‌ನಡಿ ಸಂತೋಷ್‌ ಕುಮಾರ್‌ ಎನ್ನುವವರು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣವಿದೆ. 

Advertisement

Udayavani is now on Telegram. Click here to join our channel and stay updated with the latest news.

Next