Advertisement

ಕಾವ್ಯಗಳು ಆತ್ಮವಿಶ್ವಾಸ ಮೂಡಿಸಲಿ : ಡಾ|ಹಂಪನಾ

04:10 AM Jun 09, 2018 | Team Udayavani |

ಉಡುಪಿ: ಕಾವ್ಯಗಳು ಸೋತು ಹೋಗಿರುವ ಜೀವಗಳಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕೇ ವಿನಾ ಹತಾಶರನ್ನಾಗಿಸಬಾರದು. ಮನಸ್ಸು- ಮನುಷ್ಯರನ್ನು ಒಂದುಗೂಡಿಸುವ ಸೇತುವೆ ಕಾವ್ಯವಾಗಬೇಕು ಎಂದು ಹಿರಿಯ ವಿದ್ವಾಂಸ ಡಾ| ಹಂಪ ನಾಗರಾಜಯ್ಯ ಹೇಳಿದರು. ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ಜರಗಿದ ಸಮಾರಂಭದಲ್ಲಿ ಮಣಿಪಾಲ ಮಾಹೆಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ವತಿಯಿಂದ ನೀಡಲಾದ ‘ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

Advertisement

ಸೇಡಿಯಾಪು ಪ್ರಶಸ್ತಿ ಶಿಖರ ಪ್ರಾಯವಾದುದು. ಅದು ನನಗೆ ಸಂದಿರುವುದು ಸಂತಸ ತಂದಿದೆ ಎಂದು ಅವರು ತಿಳಿಸಿದರು. ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ನ ಆಡಳಿತಾಧಿಕಾರಿ ಡಾ| ಎಚ್‌. ಶಾಂತಾರಾಮ್‌ ಮುಖ್ಯ ಅತಿಥಿಯಾಗಿದ್ದರು. ಹಿರಿಯ ಲೇಖಕ ಪ್ರೊ| ತಾಳ್ತಜೆ ವಸಂತ ಕುಮಾರ್‌ ಅಭಿನಂದನ ಮಾತುಗಳನ್ನಾಡಿದರು. ಹಿರಿಯ ವಿದ್ವಾಂಸ ಪ್ರೊ| ಕೆ.ಪಿ. ರಾವ್‌ ‘ಸೇಡಿಯಾಪು ಕಥಾ ಸಾಹಿತ್ಯ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪ್ರಶಸ್ತಿ ಸಮಿತಿಯ ಡಾ| ಎಸ್‌.ಜೆ. ಭಟ್‌ ಉಪಸ್ಥಿತರಿದ್ದರು. 
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ| ವರದೇಶ ಹಿರೇಗಂಗೆ ಸ್ವಾಗತಿಸಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಪುತ್ತಿ ವಸಂತ ಕುಮಾರ್‌ ಕಾರ್ಯಕ್ರಮ ನಿರ್ವಹಿಸಿದರು. ಸುಷ್ಮಿತಾ ಎ. ವಂದಿಸಿದರು.

ಬಳಕೆ ನಿಲ್ಲಲಿ
ಎಲ್ಲರಿಗೂ ಅವರವರ ಧರ್ಮದ ಪ್ರಕಾರ ಪ್ರಾರ್ಥಿಸುವ ಹಕ್ಕಿದೆ. ಆದರೆ ದೇವಾಲಯ- ಪ್ರಾರ್ಥನಾಲಯಗಳಲ್ಲಿ ಧ್ವನಿವರ್ಧಕ ಬಳಕೆ ನಿಲ್ಲಿಸಬೇಕು. ದೇಶದಲ್ಲಿ ಇದ್ದ ಮೇಲೆ ಎಲ್ಲರೂ ರಾಷ್ಟ್ರಗೀತೆ ಹಾಡಲೇಬೇಕು. ಹಿಂದೂ ದೇಶ ಎಂದಿಗೂ ಹೋಳಾಗಬಾರದು. ವಂದೇ ಮಾತರಂ ಮೊಳಗುತ್ತಿರಲಿ; ಸಮನ್ವಯದ ಹಣತೆ ನಿತ್ಯ ಬೆಳಗುತ್ತಿರಲಿ ಎಂದು ಡಾ| ಹಂಪನಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next