ಸೇಡಂ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠ ಈ ಭಾಗದಲ್ಲಿ ಭಕ್ತಿಯ ಕ್ರಾಂತಿ ಮಾಡಲಿದೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಪೂಜ್ಯ ಸುಬುಧೇಂದ್ರ ತೀರ್ಥರು ನುಡಿದರು.
ಪಟ್ಟಣದ ಕೋಡ್ಲಾ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರಾಘವೇಂದ್ರ ಸ್ವಾಮಿ ಮಠದ ಕಟ್ಟಡ ಕಾಮಗಾರಿ ವೀಕ್ಷಿಸಿದ ಅವರು, ಭಕ್ತರಿಗೆ ಆಶೀರ್ವಚನ ನೀಡಿದರು.
ರಾಘವೇಂದ್ರ ಸ್ವಾಮಿ ಸೇಡಂ ಜನತೆ ಮೇಲೆ ಪ್ರೀತಿ ಇಟ್ಟಿದ್ದಾರೆ. ಅದರ ಪರಿಣಾಮವಾಗಿಯೇ ಇಲ್ಲಿ ಮಠ ನಿರ್ಮಾಣವಾಗುತ್ತಿದೆ. ರಾಘವೇಂದ್ರ ಸ್ವಾಮಿಗಳ ಮಠ ಭಕ್ತರ ಶ್ರದ್ಧಾ ಕೇಂದ್ರವಾಗಬೇಕು. ಕೆಳ ಮಹಡಿ ಪೂರ್ಣಗೊಂಡ ಕೂಡಲೇ ಭಕ್ತಿ, ಧರ್ಮ ಕಾರ್ಯಗಳು ನಡೆಯಲಿ. ಎಲ್ಲ ಸಮಾಜದಲ್ಲಿ ರಾಘವೇಂದ್ರ ಸ್ವಾಮಿಗಳ ಭಕ್ತರಿದ್ದಾರೆ. ಕಲಬುರಗಿಯಲ್ಲೇ ಮಾದರಿ ಮಠ ಇದಾಗಲಿದೆ ಎಂದರು.
ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ರಾಘವೇಂದ್ರ ಸ್ವಾಮಿಗಳ ಮಠ ನಿರ್ಮಾಣ ಈ ಭಾಗದ ಜನತೆಗೆ ಅತ್ಯಂತ ಸಂತೋಷದ ವಿಷಯವಾಗಿದೆ. ಸಮಾಜದ ಮುಖಂಡರೊಂದಿಗೆ ಚರ್ಚೆ ಮಾಡಲಾಗಿದೆ. ಶಾಸಕರ ಅನುದಾನದಲ್ಲಿ ಮಠದ ಕಾಮಗಾರಿಗೆ 10 ಲಕ್ಷ ರೂ. ನೀಡಲಾಗುವುದು. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ. ನಾಲೈ್ಕದು ದಿನದಲ್ಲಿ ಅನುಮೋದನೆ ದೊರೆಯಲಿದೆ ಎಂದು ಭರವಸೆ ನೀಡಿದರು.
ಯತಿಗಳು ಕೆಲಹೊತ್ತು ಕಟ್ಟಡವನ್ನು ಸುತ್ತಾಡಿ ಕಾಮಗಾರಿ ವೀಕ್ಷಿಸಿ, ಪ್ರಶಂಶಿಸಿದರು. ಸಂತೋಷ ಕುಲಕರ್ಣಿ ಕಾರ್ಯಕ್ರಮ ನಡೆಸಿಕೊಟ್ಟರು. ಡಾ| ವಾಸುದೇವ ಅಗ್ನಿಹೋತ್ರಿ, ಡಾ| ಮುರಳೀಧರ ದೇಶಪಾಂಡೆ, ಮುಕುಂದ ದೇಶಪಾಂಡೆ, ಮನೋಹರ ದೊಂತಾ, ಶರಣು ಮೆಡಿಕಲ್, ಸುಧೀಂದ್ರ ಕುಲಕರ್ಣಿ, ವಿಜಯಕುಮಾರ ಕುಲಕರ್ಣಿ, ದತ್ತಾತ್ರೇಯ ಐನಾಪುರ, ಸುಭಾಶ ಮಹಾಡಿಕ, ಶ್ರೀನಿವಾಸ ದೇಶಪಾಂಡೆ, ಲಕ್ಷ್ಮೀನಾರಯಣ ಚಿಮ್ಮನಚೋಡ್ಕರ್, ರಾಜು ಕಟ್ಟಿ, ಓಂಪ್ರಕಾಶ ಪಾಟೀಲ, ಅನೀಲ ರನ್ನೆಟ್ಲಾ, ಮೋಹನಕುಮಾರ ರಂಜೋಳಕರ್, ಅಂಕಿತ ಜೋಶಿ, ರಾಮಚಂದ್ರ ಜೋಶಿ ಇನ್ನಿತರರು ಇದ್ದರು.