Advertisement

ಚರಂಡಿ ಶುದ್ಧೀಕರಣ ಘಟಕ ಸ್ಥಾಪನೆ ವಿರೋಧಿಸಿ ಪ್ರತಿಭಟನೆ

11:51 AM Feb 20, 2020 | Naveen |

ಸೇಡಂ: ಉದ್ದೇಶಿತ ಒಳಚರಂಡಿ ಶುದ್ಧೀಕರಣ ಘಟಕ ಸ್ಥಾಪನೆ ವಿರೋಧಿಸಿ ರೈತರು ತಮ್ಮ ಎತ್ತಿನ ಬಂಡಿ ಹಾಗೂ ಟ್ರಾಕ್ಟರ್‌ಗಳನ್ನು ರಸ್ತೆಗಿಳಿಸಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ ನೂರಾರು ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಸಹಾಯಕ ಆಯುಕ್ತರ ಕಚೇರಿ ಎದುರು ಕೆಲಹೊತ್ತು ರಸ್ತೆ ತಡೆ ನಡೆಸಿದರು. ಸರ್ಕಾರದ ವತಿಯಿಂದ ಪಟ್ಟಣದ ತರ್ನಳ್ಳಿ ರಸ್ತೆಗೆ ಹೊಂದಿಕೊಂಡು ನಿರ್ಮಿಸಲು ಉದ್ದೇಶಿಸಿರುವ ಒಳಚರಂಡಿ ನೀರು ಶುದ್ಧೀಕರಣ ಘಟಕ ಅವೈಜ್ಞಾನಿಕವಾಗಿದೆ. ಇದರಿಂದ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗುತ್ತದೆ. ಕೂಡಲೇ ಈ ಯೋಜನೆ ಕೈಬಿಟ್ಟು ಬೇರೆಡೆ ಸ್ಥಳಾಂತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಒಳಚರಂಡಿ ಶುದ್ಧೀಕರಣ ಘಟಕ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳದ ಸುತ್ತಲೂ ಅನೇಕ ರೈತರ ಫಲವತ್ತಾದ ಜಮೀನುಗಳಿವೆ. ಘಟಕ ಸ್ಥಾಪನೆಯಿಂದ ಸುತ್ತಲಿನ ವಾತಾವರಣದಲ್ಲಿ ಅಂತಜಲ ಮಾಲಿನ್ಯ ಉಂಟಾಗುವ ಸಾಧ್ಯತೆಗಳಿವೆ. ಅಲ್ಲದೇ ನೂರಾರು ಜನರು ವಾಸಿಸುವುದರಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಂಭವಗಳು ಜಾಸ್ತಿಯಿದೆ. ಸಾರ್ವಜನಿಕರ ಮೇಲೆ ಹಾಗೂ ರೈತರ ಜಮೀನುಗಳ ಮೇಲೆ ದುಷ್ಪರಿಣಾಮ ಬೀರುವ ಯೋಜನೆಯನ್ನು ಕೂಡಲೇ ಬೇರೆಡೆ ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ಮತ್ತಷ್ಟು ಉಗ್ರ ಹೋರಾಟಕ್ಕೆ ರೈತರು ಸಜ್ಜಾಗಲಿದ್ದಾರೆ ಎಂದು ಸಹಾಯಕ ಆಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಮುಖಂಡರಾದ ಶಾಂತಕುಮಾರ ಚನ್ನಕ್ಕಿ, ದೇವಣ್ಣ ಚನ್ನಕ್ಕಿ, ಜಗದೀಶ ಪಾಟೀಲ ತರ್ನಳ್ಳಿ, ಅಂಬಣ್ಣ ತಳವಾರ, ಶಶಿಕುಮಾರ ಗುತ್ತೇದಾರ ಕಟ್ಟಿಮನಿ, ಸಾಬಣ್ಣ ಪೂಜಾರಿ, ಸಾಬಣ್ಣ ಚನ್ನಕ್ಕಿ, ಶಿವಶರಣ ಅನ್ನಾರ, ಜೈಜಗದೀಶ ಕಲಕಂಬ, ಕಾಶಿನಾಥ ಜಮಾದಾರ, ಶೇಖರ ಪೂಜಾರಿ, ನಾಗರಾಜ ಪೂಜಾರಿ, ದೊಡ್ಡ ಚಂದ್ರಪ್ಪ ತಳವಾರ, ಉದಯಕುಮಾರ ಸುಣಗಾರ, ಸಂಗಮೇಶ ಪಾಟೀಲ ತರ್ನಳ್ಳಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next