ಸೇಡಂ: ಚರಂಡಿ ಕಾಮಗಾರಿ ಕೈಗೆತ್ತಿಕೊಂಡ ನಿರ್ಮಿತಿ ಕೇಂದ್ರದವರು ಭೂಮಿ ಅಗೆದು 15 ದಿನಗಳಾದರೂ ಹಿಂದಿರುಗಿ ನೋಡಿಲ್ಲ. ಇದರಿಂದ ನಿರ್ಮಾಣ ಕಾರ್ಯವನ್ನೇ ನಿರ್ಮಿತಿ ಕೇಂದ್ರದವರು ಮರೆತರೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.
ಪಟ್ಟಣದ ಕೆಇಬಿ ಕಾಲೋನಿಯಲ್ಲಿ 42 ಲಕ್ಷ ರೂ. ವೆಚ್ಚದ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದನ್ನು ನಿರ್ಮಿತಿ ಕೇಂದ್ರದವರಿಗೆ ವಹಿಸಲಾಗಿದೆ. 15 ದಿನಗಳ ಹಿಂದೆ ಕಾಮಗಾರಿ ಪ್ರಾರಂಭಿಸಿದ ಕೇಂದ್ರದ ಗುತ್ತಿಗೆದಾರರು ಜೆಸಿಬಿಯಿಂದ ಸುಮಾರು ಐದಾರು ಫೀಟ್ ನೆಲ ಅಗೆದು ಹಾಗೆಯೇ ಬಿಟ್ಟಿದ್ದಾರೆ. ಮತ್ತೆ ಈ ಕಡೆ ತಲೆ ಹಾಕಿಲ್ಲ.
ಪರಿಣಾಮ ಅಕ್ಕ ಪಕ್ಕದ ಮನೆಯವರು ಚರಂಡಿ ತಗ್ಗು ದಾಟಿಕೊಂಡು ಮನೆಗೆ ಸೇರಬೇಕಾದರೆ ಹರಸಾಹಸ ಪಡುವಂತಾಗಿದೆ. ಇನ್ನೊಂದೆಡೆ ಮಳೆಗಾಲ ಆರಂಭವಾಗಲಿದ್ದು, ಭೂಮಿ ಅಗೆದ ಸ್ಥಳದಲ್ಲಿರುವ ವಿದ್ಯುತ್ ಕಂಬಗಳು ಸ್ಥಿರತೆ ಕಳೆದುಕೊಂಡ ಲಕ್ಷಣಗಳು ಕಂಡುಬರುತ್ತಿವೆ. ಇದರಿಂದ ಬರುವ ದಿನಗಳಲ್ಲಿ ಕಂಬಗಳು ನೆಲಕ್ಕುರುಳಿ ಆತಂಕ ಸೃಷ್ಟಿಸುವ ಸಾಧ್ಯತೆ ಇದೆ. ಆದ್ದರಿಂದ ಬಡಾವಣೆ ನಿವಾಸಿಗಳು ಗಾಬರಿಯಾಗಿದ್ದಾರೆ. ಕೂಡಲೇ ಕಾಮಗಾರಿ ಪ್ರಾರಂಭ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪುರಸಭೆ ಅಧಿಕಾರಿಗಳು ಮತ್ತು ಮೇಲಧಿಕಾರಿಗಳ ಗಮನಕ್ಕೂ ಸಮಸ್ಯೆ ಬಗ್ಗೆ ತಿಳಿಸಲಾಗಿದೆ. ಆದರೆ ಯಾರೂ ಕಾಳಜಿವಹಿಸುತ್ತಿಲ್ಲ. ಹಾರಿಕೆ ಉತ್ತರ ನೀಡಿ ಮುಂದೆ ಕಳಿಸುತ್ತಿದ್ದಾರೆ.
•
ನಾಗಕುಮಾರ ಎಳ್ಳಿ,
ಪುರಸಭೆ ಸದಸ್ಯ
ತಾಲೂಕಿನ ಇಂಜೇಪಲ್ಲಿ ಗ್ರಾಮದಲ್ಲೂ ವಿದ್ಯುತ್ ಕಂಬಗಳು ಬೀಳುವ ಹಂತಕ್ಕೆ ತಲುಪಿವೆ. ಕೆಇಬಿ ಕಾಲೋನಿಯಲ್ಲೂ ಇದೇ ಪರಿಸ್ಥಿತಿ ಇದೆ. ಈ ಕುರಿತು ಕೆ.ಇ.ಬಿ. (ಜೆಸ್ಕಾಂ ಉಪ ವಿಭಾಗ) ಅಧಿಕಾರಿಗಳಿಗೆ ಸೂಚಿಸಿದರೆ ಕ್ರಮ ಕೈಗೊಳ್ಳುತ್ತಿಲ್ಲ. ಕೆಇಬಿಯವರು ಪ್ರಯೋಜಕ್ಕೆ ಬಾರದವರು. ಕಾಮಗಾರಿಯನ್ನು ನಿರ್ಮಿತಿ ಕೇಂದ್ರದವರು ಕೈಗೆತ್ತಿಕೊಂಡಿದ್ದು, ಈ ಕುರಿತು ಜಿಲ್ಲಾಧಿಕಾರಿಗಳೇ ಉತ್ತರಿಸಬೇಕು. ಅದು ನಮಗೆ ಸಂಬಂಧ ಪಡುವುದಿಲ್ಲ.
•
ವೀರಮಲ್ಲಪ್ಪ ಪೂಜಾರ,
ಉಪ ವಿಭಾಗಾಧಿಕಾರಿ, ಸೇಡಂ