Advertisement

ಮೋತಕಪಲ್ಲಿ ಬಲಭೀಮಸೇನ ಜಾತ್ರೆ

12:32 PM Dec 09, 2019 | Naveen |

„ಶಿವಕುಮಾರ ಬಿ. ನಿಡಗುಂದಾ
ಸೇಡಂ:
ಈ ದೇವಾಲಯಕ್ಕಿದೆ 1200 ವರ್ಷಗಳ ಇತಿಹಾಸ. ಈ ದೇವನಿಗೆ ಭಕ್ತಿಯಿಂದ ನಮಿಸಿದರೆ ಸರ್ವ ದುಃಖ ಪರಿಹಾರವಾಗಿ, ಸುಖ-ಶಾಂತಿ ನೆಲೆಸುತ್ತದೆ. ತೆಲಂಗಾಣ, ಮಹಾರಾಷ್ಟ್ರ , ಕರ್ನಾಟಕ ರಾಜ್ಯದ ಅನೇಕ ಭಕ್ತರಿಗೆ ಈತ ಆರಾಧ್ಯ ದೈವ. ಈ ದೇವಾಲಯಕ್ಕೆ ತಿರುಪತಿ ತಿಮ್ಮಪ್ಪನ ಮಹಾದ್ವಾರವೆಂದು ಕರೆಯಲಾಗುತ್ತದೆ.

Advertisement

ಸ್ವಯಂ ಉದ್ಭವ ಮೂರ್ತಿಯಾಗಿ ಭಕ್ತರ ಇಷ್ಟಾರ್ಥ ಪೂರೈಸುತ್ತಿರುವ ಈ ಮಹಾಬಲನಿಗೆ ತಿರುಪತಿ ತಿಮ್ಮಪ್ಪನಿಗೆ ಸಲ್ಲುವ ಎಲ್ಲ ಸೇವೆಗಳು ಯಥಾವತ್ತಾಗಿ ಸಲ್ಲುತ್ತವೆ. ತಾಲೂಕಿನ ಮೋತಕಪಲ್ಲಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಬಲಭೀಮಸೇನ ದೇವರ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಚಾಲನೆ ದೊರೆತಿದ್ದು, ಡಿ. 12ರಂದು ಮಧ್ಯರಾತ್ರಿ ಮಹಾ ರಥೋತ್ಸವ ನಡೆಯಲಿದೆ.

ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ದೇವಾಲಯದ ಜಾತ್ರಾ ಮಹೋತ್ಸವ ನಿಮಿತ್ತ ಪೂರ್ವ ತಯಾರಿ ಜೋರಾಗಿ ನಡೆದಿದೆ. ಗಡಿ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ ಹಾಗೂ ರಾಜ್ಯದ ಅನೇಕ ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸಲಿರುವ ಹಿನ್ನೆಲೆಯಲ್ಲಿ, ಸೂಕ್ತ ವ್ಯವಸ್ಥೆ ಕಲ್ಪಿಸಲು ತಾಲೂಕು ಆಡಳಿತ, ದೇವಾಲಯ ಸಮಿತಿ, ಪೂಜಾರಿಗಳ ವೃಂದ ಶ್ರಮಿಸುತ್ತಿದೆ.

ಸತತ 11 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ನಿಮಿತ್ತ ಹೊಸ್ತಿಲ ಹುಣ್ಣಿಮೆ ಮಧ್ಯರಾತ್ರಿ 12:10ಕ್ಕೆ ರಥೋತ್ಸವ ನಡೆಯುತ್ತದೆ. ಇದಾದ ನಂತರ ಶ್ರೀ ಬಲಭೀಮ ದೇವರ ಉತ್ಸವ ಮೂರ್ತಿಗೆ ಹೂವಿನ ಅಲಂಕಾರ ಮಾಡಿ, ಹೂವಿನ ತೇರು ಸೇವೆ, ಆನೆ ಮೇಲೆ ಮೆರವಣಿಗೆ ಮಾಡುವ ಗಜ ಸೇವೆ ನಡೆಸಲಾಗುತ್ತದೆ. ಜಾತ್ರೆಗೆ ಬರುವ ಭಕ್ತರಿಗಾಗಿ ಗುರುಮಠಕಲ್‌, ಯಾದಗಿರಿ, ನಾರಾಯಣಪೇಟ, ಕೊಡಂಗಲ್‌, ಮುಧೋಳ, ಸೇಡಂನಿಂದ ವಿಶೇಷ ಬಸ್‌ ಕಲ್ಪಿಸಲಾಗಿದೆ. ನೆಲೆಸಲು ಯಾತ್ರಿಕ ನಿವಾಸದ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ವರ್ಷ ಶ್ರೀ ಬಲಭೀಮಸೇನ ದೇವರ ದರ್ಶನ ಪಡೆಯುವ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ದೇವಾಲಯದ ಎದುರಿಗಿರುವ ಪುಷ್ಕರಣಿಯಲ್ಲಿ ಮಿಂದೆದ್ದು, ಆರಾಧ್ಯ ದೇವರ ದರ್ಶನ ಪಡೆಯುವ ಲಕ್ಷಾಂತರ ಭಕ್ತರ ಮನೋಕಾಮನೆಗಳು ಪೂರ್ತಿಯಾಗಿವೆ.
ಭೀಮಾಚಾರಿ,
ಅರ್ಚಕರು, ಮೋತಕಪಲ್ಲಿ

Advertisement

ಭಕ್ತರಿಗಾಗಿ ಸೌಕರ್ಯ ಕಲ್ಪಿಸುವ ಸಂಬಂಧ ತಾಲೂಕು ಆಡಳಿತ ವತಿಯಿಂದ ಸಕಲ ಸಿದ್ಧತೆ ಕಾರ್ಯ ಕೈಗೊಳ್ಳಲಾಗಿದೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗಾಗಿ ಸಾರಿಗೆ ಇಲಾಖೆ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಿದೆ.
ಬಸವರಾಜ ಬೆಣ್ಣೆಶಿರೂರ್‌,
ತಹಶೀಲ್ದಾರ್‌, ಸೇಡಂ

Advertisement

Udayavani is now on Telegram. Click here to join our channel and stay updated with the latest news.

Next