ಸೇಡಂ: ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದೆ. ಆದರೆ ತಾಕಿನೆಲ್ಲೆಡೆ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆದಿದ್ದು, ತಾಲೂಕಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಇತ್ತ ಕೋವಿಡ್ ತಡೆಗಾಗಿ ಸಹಾಯಕ ಆಯುಕ್ತರು, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಟೊಂಕಕಟ್ಟಿ ನಿಂತಿದ್ದರೆ, ಇನ್ನೊಂದೆಡೆ ಅದನ್ನೇ ಬಂಡವಾಳ ಮಾಡಿಕೊಂಡ ಮರಳುಗಳ್ಳರು ರಾಜಾರೋಷವಾಗಿ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಮರಳುಗಾರಿಕೆ ಶುರುವಿಟ್ಟುಕೊಂಡಿದ್ದಾರೆ. ಬೆಳಗ್ಗಿನಿಂದ ನದಿ ಪಾತ್ರಗಳಲ್ಲಿ ಮರಳು ಶೇಖರಿಸಿ, ಸಂಜೆ ನದಿಗಳಿಗೆ ಇಳಿಯುವ ಹತ್ತಾರು ಜನ ಮರಳುಗಳ್ಳರ ಗ್ಯಾಂಗ್ ಯಾರ ಹಂಗಿಲ್ಲದೆ ಹತ್ತಾರು ಟ್ರ್ಯಾಕ್ಟರ್ ಗಳ ಮೂಲಕ ಮರಳು ಸಾಗಿಸುತ್ತಿದೆ.
ತಾಲೂಕಿನ ಮಳಖೇಡ, ಮುಧೋಳ, ಕುಕ್ಕುಂದಾ, ತೇಲ್ಕೂರ, ಹಾಬಾಳ ಹಾಗೂ ಕುರಕುಂಟಾದಲ್ಲಿ ಮರಳುಗಾರಿಕೆ ಜೋರಾಗಿದೆ. ಸರ್ಕಾರ ಅಕ್ರಮ ಮರಳುಗಾರಿಕೆ ಮೇಲೆ ನಿರ್ಬಂಧ ಹೇರಿದ್ದು, ಟ್ರ್ಯಾಕ್ಟರ್‌ಗಳಲ್ಲಿ ಮರಳು ಸಾಗಿಸುವುದನ್ನು ತಡೆಹಿಡಿದಿದೆ. ಆದರೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಸರ್ಕಾರದ ಯಾವ ಆದೇಶಕ್ಕೂ ಕಾಸಿನ ಕಿಮ್ಮತ್ತಿಲ್ಲ. ಬದಲಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಮರಳನ್ನು ಮರಳುಗಳ್ಳರು ಲೂಟಿ ಮಾಡಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ.
ಮಳಖೇಡ ಗ್ರಾಮದ ಕಾಗಿಣಾ ನದಿಯಿಂದ ಪ್ರತಿನಿತ್ಯ ಹತ್ತಾರು ಟ್ರ್ಯಾಕ್ಟರ್‌ಗಳ ಮರಳು ಸಾಗಿಸಲಾಗುತ್ತಿದೆ. ಅದಕ್ಕಾಗಿಯೇ ಕೃಷಿ ಜಮೀನುಗಳ ಮೂಲಕ ಹತ್ತಾರು ಕಳ್ಳ ದಾರಿಗಳನ್ನೂ ಸಹ ಮಾಡಲಾಗಿದೆ. ಅಧಿಕಾರಿಗಳ ನಡೆ ವೀಕ್ಷಿಸಲು ರಸ್ತೆಯುದ್ದಕ್ಕೂ ಬೆರಳೆಣಿಕೆಯಷ್ಟು ಜನ ಬಿಡಾರ ಹೂಡಿರುವುದು ಕಂಡು ಬಂದಿದೆ.
ನಾವೆಲ್ಲಾ ಕೋವಿಡ್ ತಡೆಗೆ ಹಗಲಿರುಳು ಕೆಲಸ ಮಾಡುತ್ತಿದ್ದೇವೆ. ಆದರೆ ಮರಳುಗಳ್ಳರು ಇದನ್ನೇ ಬಂಡವಾಳ ಮಾಡಿಕೊಂಡಂತಿದೆ. ಈಗಾಗಲೇ ವಿಷಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಗಮನಕ್ಕೆ ತರಲಾಗಿದೆ. ಮುಂದೆ ಅವರೇ ಅದರ ಬಗ್ಗೆ ನಿಗಾವಹಿಸಿ ಕ್ರಮ ಜರುಗಿಸಲಿದ್ದಾರೆ.
ಬಸವರಾಜ ಬೆಣ್ಣೆಶಿರೂರ
ತಹಶೀಲ್ದಾರ್, ಸೇಡಂ
ಶಿವಕುಮಾರ ಬಿ. ನಿಡಗುಂದಾ