Advertisement

ಸೇಡಂ ಕ್ಷೇತ್ರದ ಅಭಿವೃದ್ದಿಗೆ ಬದ್ದ: ತೇಲ್ಕೂರ

11:38 AM May 16, 2022 | Team Udayavani |

ಕಲಬುರಗಿ: ಸೇಡಂ ಕ್ಷೇತ್ರದ ಜನರ ಆಶೀರ್ವಾದ ಹಾಗೂ ತಮ್ಮ ಪರಿಶ್ರಮದಿಂದ ಕ್ಷೇತ್ರದ ಅಭಿವೃದ್ಧಿಗೆ ಹೊಸ ಆಯಾಮ ರೂಪಿಸಿ ಮುನ್ನಡೆಯುವ ಪ್ರಯತ್ನದಲ್ಲಿ ಮೊದಲ ವರ್ಷ ಎದುರಾದದ್ದು, ಸಮ್ಮಿಶ್ರ ಸರ್ಕಾರವೆಂಬ ಸವಾಲು, ನಂತರದ ದಿನಗಳಲ್ಲಿ ಎರಡು ಬಾರಿ ನೆರೆಹಾವಳಿ, ಕೊರೊನಾ ಮೂರನೇ ಅಲೆಗೆ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬೀಳಬಹುದೆಂಬ ಯೋಚನೆ ಮೂಡಿದ್ದು ಸುಳ್ಳಲ್ಲ. ಆದರೆ ಸತತ ಪ್ರಯತ್ನದಿಂದ ಕ್ಷೇತ್ರದ ಅಭಿವೃದ್ಧಿಗೆ ಅನುದಾನವನ್ನು ತರುವಲ್ಲಿ ಯಶಸ್ವಿಯಾಗಿದ್ದೇನೆ. ಹೆಮ್ಮೆಯ ವಿಚಾರವೆಂದರೆ ಕಲ್ಯಾಣ ಕರ್ನಾಟಕ ಎಲ್ಲ ಶಾಸಕರಿಗಿಂತ ಹೆಚ್ಚಿನ ಅನುದಾನ ತರುವಲ್ಲಿಯೂ ಸಫಲನಾಗಿದ್ದೇನೆ ಎಂದು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದ್ದಾರೆ.

Advertisement

ನೆರೆ ಹಾವಳಿ ಸಂಧರ್ಭದಲ್ಲಿ ನನ್ನ ನಂಬಿದ ಜನತೆಗೆ ಕೈಲಾದ ಸಹಾಯ, ಸಹಕಾರ ನೀಡಿ, ಕೋವಿಡ್‌ ಲಾಕ್‌ಡೌನ್‌ದಲ್ಲೂ ಸಹಿತ ಹಸಿದವರಿಗೆ ತೇಲ್ಕೂರ ಪಾಟೀಲ ಫೌಂಡೇಶನ್‌ ವತಿಯಿಂದ ಆಹಾರ ಸಾಮಗ್ರಿ ನೀಡಿ ಕಷ್ಟದಲ್ಲಿರುವವರಿಗೆ ನೆರವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದು ತಿಳಿಸಿದ್ದಾರೆ.

ರದ್ದಾದ ಬೀದರ್‌-ಯಶವಂತಪುರ ರೈಲು ಮೊದಲಿನಂತೆ ಸಂಚರಿಸುವಂತೆ ಒತ್ತಡ ತಂದು ಯಶಸ್ವಿಯಾಗಿರುವುದು, ಸೇಡಂ ಪಟ್ಟಣದಲ್ಲಿ 500ಕೋಟಿ ರೂ. ವೆಚ್ಚದಲ್ಲಿ 700 ಮನೆಗಳ ನಿರ್ಮಾಣ, ಸೇಡಂ ಕ್ಷೇತ್ರದಲ್ಲಿ 12ಕೋಟಿ ರೂ. ವೆಚ್ಚದಲ್ಲಿ 100 ದೇವಾಲಯಗಳ ಅಭಿವೃದ್ಧಿ, ಅತಿವೃಷ್ಟಿ ಹಾನಿಗೆ ಹೆಚ್ಚಿನ ಪರಿಹಾರ ದೊರಕಿಸಿರುವುದು, ಇದರ ಹೊರತಾಗಿಯೂ ನನ್ನ ಮತ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬೀಳಲು ಎಡೆಮಾಡಿಕೊಡದೇ ಕುಡಿಯುವ ನೀರು, ಕೃಷಿ ಭೂಮಿಗೆ ನೀರಾವರಿ ಯೋಜನೆಗಳು, ರಸ್ತೆ, ಸೇತುವೆಗಳು, ಶಾಲೆ-ಕಾಲೇಜು ಕಟ್ಟಡಗಳು, ವಸತಿ ನಿಲಯಗಳು, ವಿದ್ಯುತ್‌ ಸಂಪರ್ಕ ಹೀಗೆ 500 ಕೋಟಿ ರೂ.ಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳನ್ನು ತರುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ವಿವರಿಸಿದ್ದಾರೆ.

ಕ್ಷೇತ್ರದ ಶಾಸಕನಾಗಿ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿರುವುದನ್ನು ಗುರುತಿಸಿ ಪಕ್ಷದ ರಾಜ್ಯದ ವಕ್ತಾರ ಹಾಗೂ ವಿಭಾಗೀಯ ಪ್ರಭಾರಿಯನ್ನಾಗಿ ನಿಯೋಜಿಸಲಾಗಿದೆ. ಹೀಗಾಗಿ ಪಕ್ಷದ ಸಂಘಟನೆ ಜತೆಗೆ 371(ಜೆ) ವಿಧಿ ಲೋಪದೋಷ ನಿವಾರಣೆಗೆ ಒತ್ತಡ ತಂದಿರುವುದು ಸೇರಿದಂತೆ ಹಲವಾರು ನಿಟ್ಟಿನಲ್ಲಿ ಶ್ರಮಿಸಿರುವುದು ತಮ್ಮೆಲ್ಲರಿಗೂ ಗೊತ್ತಿರುವ ವಿಷಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next