ಸೇಡಂ: ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ಅಲ್ಟ್ರಾಟೆಕ್ ರಾಜಶ್ರೀ ಸಿಮೆಂಟ್ ಕಾರ್ಖಾನೆ ಮೋಸ ಮಾಡಿದೆ ಎಂದು ಆರೋಪಿಸಿ ಹಂಗನಹಳ್ಳಿ ಮತ್ತು ನೃಪತುಂಗ ನಗರದ ರೈತರು ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಶನಿವಾರಕ್ಕೆ ನಾಲ್ಕು ವರ್ಷ ಪೂರೈಸಿದೆ.
ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಎದುರು ಕಾರ್ಮಿಕ ಖಾತೆ ಮಾಜಿ ಸಚಿವ ಎಸ್.ಕೆ. ಕಾಂತಾ ನೇತೃತ್ವದಲ್ಲಿ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿ ನಾಲ್ಕು ವರ್ಷ ಪೂರೈಸಿದರೂ ಪರಿಹಾರ ದೊರಕುವ ಯಾವ ಮುನ್ಸೂಚನೆಯೂ ಕಾಣುತ್ತಿಲ್ಲ.
ಕೇವಲ ಚುನಾವಣೆಗಳು ಬಂದಾಗ ಧರಣಿ ಸ್ಥಳಕ್ಕೆ ಬಂದು ಸಮಜಾಯಿಷಿ ನೀಡುತ್ತಿದ್ದ ರಾಜಕಾರಣಿಗಳು ನಂತರ ಒಮ್ಮೆಯೂ ಇತ್ತ ಸುಳಿದಿಲ್ಲ. ಹಗಲು-ರಾತ್ರಿ ಎನ್ನದೆ, ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೇ ರೈತರು ಧರಣಿ ಕುಳಿತ ಸ್ಥಳ ಬಿಟ್ಟು ಕದಲುತ್ತಿಲ್ಲ.
20 ಜುಲೈ 2015 ರಂದು ಪ್ರಾರಂಭವಾದ ಧರಣಿ ಇಂದಿಗೂ ಮುಂದುವರಿದಿದೆ. ಅನೇಕ ರೈತರು ಪರಿಹಾರದ ನಿರೀಕ್ಷೆಯಲ್ಲೇ ಮೃತಪಟ್ಟಿದ್ದಾರೆ. ಇಷ್ಟಾದರೂ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳುತ್ತಿಲ್ಲ. ಕೇವಲ ನಾಮಕೆವಾಸ್ತೇ ಎನ್ನುವಂತೆ ಅಧಿಕಾರಿಗಳ ಸಭೆ ಕರೆದು ಕೈ ತೊಳೆದುಕೊಳ್ಳುತ್ತಿದೆ ಎನ್ನುವುದು ರೈತರ ದೂರಾಗಿದೆ.
ರೈತರ ದೂರು: ಆರಂಭದಲ್ಲಿ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಧರಣಿ ನಿರತರ ಸ್ಥಳಕ್ಕೆ ತೆರಳಿ ಚರ್ಚಿಸಿ, ಭರವಸೆ ನೀಡಿದ್ದರು. ತದನಂತರ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ ಪರಿಣಾಮಕಾರಿಯಾಗಿ ಧ್ವನಿ ಎತ್ತುತ್ತಿಲ್ಲ ಎನ್ನುವುದು ರೈತರ ದೂರಾಗಿದೆ.