Advertisement

ಬಿಜೆಪಿಯಿಂದ ರಾಜಕೀಯ ಭಯೋತ್ಪಾದನೆ

10:52 AM Sep 13, 2019 | Naveen |

ಸೇಡಂ: ವಿರೋಧ ಪಕ್ಷಗಳನ್ನು ಸದೆಬಡೆಯಬೇಕು, ಹೆದರಿಸಬೇಕು ಮತ್ತು ಬೆದರಿಸಬೇಕು ಎನ್ನುವ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ರಾಜಕೀಯ ಭಯೋತ್ಪಾದನೆಗೆ ಇಳಿದಿದೆ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದ ಬಸ್‌ ನಿಲ್ದಾಣದ ಬಳಿ ಪ್ರವಾಹ ಮತ್ತು ಬರಗಾಲ ನಿರ್ವಹಿಸುವಲ್ಲಿ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸೇಡಂ, ಮುಧೋಳ ಬ್ಲಾಕ್‌ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಫೋನ್‌ ಟ್ಯಾಪಿಂಗ್‌ ಮತ್ತು ಸಿಬಿಐ ಅಸ್ತ್ರ ಬಳಸುವ ಮೂಲಕ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಇದನ್ನು ನಿಲ್ಲಿಸಿ, ಪ್ರವಾಹದಲ್ಲಿ ಸಿಲುಕಿದ ಕುಟುಂಬದ ಕಣ್ಣೀರೊರೆಸುವ ಕೆಲಸ ಮಾಡಬೇಕಾಗಿದೆ ಎಂದರು.

ಪ್ರವಾಹದಲ್ಲಿ ಸಿಲುಕಿ ರಾಜ್ಯದ ಜನತೆ ಪರದಾಡುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡುತ್ತಿಲ್ಲ. ವಾಮ ಮಾರ್ಗದಿಂದ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ಜನರ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಸಂಪುಟ ರಚಿಸುವಲ್ಲಿ ತೋರಿದ ವಿಳಂಬದಿಂದ ಅಧಿಕಾರಿಗಳು ಕೈಚೆಲ್ಲಿ ಕೂತಿದ್ದರು. ಇದರಿಂದ ಪ್ರವಾಹ ಸಂತ್ರಸ್ತರ ಮತ್ತಷ್ಟು ಸಂಕಷ್ಟ ಎದುರಾಗಿತ್ತು. ಕೂಡಲೇ ದ್ವೇಷದ ರಾಜಕಾರಣ ಬಿಟ್ಟು, ಪ್ರವಾಹ ಪೀಡಿತ ಜನರಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಇನ್ನೂವರೆಗೂ ಹೆಸರು ಮತ್ತು ಉದ್ದು ಖರೀದಿ ಕೇಂದ್ರ ಸ್ಥಾಪಿಸಿಲ್ಲ. ಕೇಂದ್ರ ಸರ್ಕಾರ ಸೂಚಿಸಿದ ಬೆಂಬಲ ಬೆಲೆ ರೈತರಿಗೆ ದೊರೆಯುತ್ತಿಲ್ಲ. ಬದಲಿಗೆ ಪ್ರತಿ ಕ್ವಿಂಟಾಲ್ಗೆ ಎರಡು ಸಾವಿರ ರೂ. ನಷ್ಟದಲ್ಲಿ ರೈತರು ತಮ್ಮ ಬೆಳೆ ಮಾರಾಟ ಮಾಡಿಕೊಳ್ಳುವ ದುಸ್ಥಿತಿ ಒದಗಿಬಂದಿದೆ.

Advertisement

ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಿಂದ ಪ್ರತಿಭಟನಾ ರ್ಯಾಲಿ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ನಂತರ ಸ್ಥಳಕ್ಕಾಗಮಿಸಿದ ಸಹಾಯಕ ಆಯುಕ್ತ ರಮೇಶ ಕೋಲಾರ ಅವರಿಗೆ ಮನವಿ ಸಲ್ಲಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಾಗೇಶ್ವರರಾವ್‌ ಮಾಲಿಪಾಟೀಲ, ಸತೀಶರೆಡ್ಡಿ ಪಾಟೀಲ, ಶಂಭುರೆಡ್ಡಿ ಮದ್ನಿ, ಮುಕ್ರಂಖಾನ್‌, ಜಿ.ಪಂ ಸದಸ್ಯ ದಾಮೋದರೆಡ್ಡಿ, ಸುದರ್ಶನರೆಡ್ಡಿ, ವೀರಾರೆಡ್ಡಿ ಹೂವಿನಬಾವಿ, ರುದ್ರು ಪಿಲ್ಲಿ, ಸಿದ್ಧು ಬಾನಾರ, ಜೈಭೀಮ ಊಡಗಿ, ನಾಗಕುಮಾರ ಎಳ್ಳಿ, ರವಿಕುಮಾರ ಬಿಬ್ಬಳ್ಳಿ, ಶಂಭುಲಿಂಗ ನಾಟೀಕಾರ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next