ಲಕ್ಷ್ಮೇಶ್ವರ: ತಾಲೂಕಿನ ಗೊಜನೂರು ಗ್ರಾಮದ ಗುಡ್ಡದಲ್ಲಿರುವ ಗಾಳಿ ವಿದ್ಯುತ್ ಕಂಪನಿಯೊಂದರಲ್ಲಿ ಭದ್ರತಾ ರಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ 7 ಜನ ಸಿಬ್ಬಂದಿ ಕಳೆದ 8 ತಿಂಗಳ ಬಾಕಿ ಸಂಬಳ ನೀಡಬೇಕೆಂದು ಆಗ್ರಹಿಸಿ ಗುರುವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಕಳೆದ 6-7 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಭದ್ರತಾ ರಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಸೋಮಣ್ಣ ಮುಶಪ್ಪನವರ, ರಮೇಶ ಸತ್ಯನಾಯ್ಕರ್, ಆನಂದ ಬಳಿಗಾರ, ಪ್ರದೀಪ ಬತ್ತಿಯವರ, ಶಿವಾನಂದ ಹೊಟ್ಟಿ, ಮಹೇಶ ಶಿರಹಟ್ಟಿ, ಮಹೇಶ ಪರಸಣ್ಣವರ ಎನ್ನುವ 7 ಜನ ಭದ್ರತಾ ರಕ್ಷಕರು ಧರಣಿ ನಡೆಸುತ್ತಿದ್ದಾರೆ.
ಕಾರಣವೇನು?: ಗೊಜನೂರು ಗುಡ್ಡದ ವಿದ್ಯುತ್ ಕಂಪನಿಯವರು ಘಟಕ ನಿರ್ವಹಣೆಗಾಗಿ ವರ್ಷದ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸಿಕೊಂಡಿದ್ದಾರೆ. ಆಂಧ್ರ ಮೂಲದ ಗುತ್ತಿಗೆದಾರ ಕಂಪನಿಯವರು ಕಳೆದ 8 ತಿಂಗಳಿಂದ ಇಲ್ಲಿ ಕಾರ್ಯನಿರ್ವಹಿಸುವ 7 ಜನ ಭದ್ರತಾ ಸಿಬ್ಬಂದಿಗೆ ಸಂಬಳವನ್ನೇ ಪಾವತಿಸಿಲ್ಲ. ಇದರಿಂದ, ಪ್ರತಿ ತಿಂಗಳು ಬರುವ ಸಂಬಳದ ಮೇಲೆಯೇ ಕುಟುಂಬ ನಿರ್ವಹಣೆ ಮಾಡುವ ಸಿಬ್ಬಂದಿ ಸಂಬಳಕ್ಕಾಗಿ ಪರಿತಪಿಸುತ್ತಿದ್ದಾರೆ.
ಅಲ್ಲದೇ, ಸಂಬಳಕ್ಕಾಗಿ ಗುತ್ತಿಗೆ ಏಜೆನ್ಸಿ ಮತ್ತು ಕಂಪನಿಯವರಲ್ಲಿ ಅಂಗಲಾಚುತ್ತಿದ್ದಾರೆ. ಈ ನಡುವೆ ಕಳೆದ ಫೆಬ್ರವರಿಯಲ್ಲಿಯೇ ಗುತ್ತಿಗೆದಾರ ಏಜೆನ್ಸಿಯವರೊಂದಿಗಿನ ಕಂಪನಿಯವರ ಒಡಂಬಡಿಕೆ ಅವಧಿ ಮುಗಿದಿದೆ ಎನ್ನಲಾಗುತ್ತಿದೆ.
ಇದರಿಂದ ಏನೂ ತಿಳಿಯಲಾರದ ಸ್ಥಿತಿಯಲ್ಲಿರುವ ಸಿಬ್ಬಂದಿ 2 ದಿನಗಳಿಂದ ಧರಣಿ ನಡೆಸಿದ್ದಾರೆ. ಈ ಕುರಿತು ಪವರ್ ಕಂಪನಿಯವರನ್ನು ಸಂಪರ್ಕಿಸಲಾಗಿ, ಒಡಂಬಡಿಕೆಯಂತೆ ಗುತ್ತಿಗೆದಾರರಿಗೆ ನಾವು ವರ್ಷದ ಆರಂಭದಲ್ಲಿಯೇ ಸಂಪೂರ್ಣ ಗುತ್ತಿಗೆ ಹಣ ಪಾವತಿಸಿದ್ದೇವೆ. ಸಿಬ್ಬಂದಿ ಸಂಬಳಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಇನ್ನು ಗುತ್ತಿಗೆದಾರ ಏಜೆನ್ಸಿಯರ್ಯಾರೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬುದು ಧರಣಿ ನಿರತರ ಆರೋಪ. ಪ್ರತಿಭಟನಾ ಸ್ಥಳಕ್ಕೆ ಪಿಎಸ್‌ಐ ಪ್ರಕಾಶ ಡಿ. ಭೇಟಿ ನೀಡಿ ಮಾಹಿತಿ ಪಡೆದರು.
ಪ್ರತಿ ತಿಂಗಳ ಸಂಬಳದ ಮೇಲೆಯೆ ಕುಟುಂಬ ನಡೆಸುವ ನಮಗೆ 8 ತಿಂಗಳಿಂದ ಸಂಬಳವಿಲ್ಲದ್ದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಪಗಾರ ಬರುತ್ತದೆಂದು ಅಲ್ಲಲ್ಲಿ ಮಾಡಿದ ಸಾಲ ತೀರಿಸಲಾಗದೇ ತೊಂದರೆಗೆ ಸಿಲುಕಿದ್ದೇವೆ. ಇದೀಗ ಸಂಬಳವೂ ಇಲ್ಲ, ಕೆಲಸವೂ ಇಲ್ಲದೇ ಪರಿಸ್ಥಿತಿ ಚಿಂತಾಜನಕವಾಗಿದೆ. ಕಂಪನಿಯವರು ಮತ್ತು ಗುತ್ತಿಗೆದಾರರು ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಯುಗಾದಿ ಹಬ್ಬದ ಮರುದಿನದಿಂದ ಕುಟುಂಬ ಸಮೇತರಾಗಿ ಪ್ರತಿಭಟನೆ ನಡೆಸುತ್ತೇವೆ. –
ಸೋಮಣ್ಣ ಮುಶಪ್ಪನವರ, ಭದ್ರತಾ ಸಿಬ್ಬಂದಿ