ಮುಂಡರಗಿ: ಕಳೆದ ಹದಿಮೂರು ವರ್ಷಗಳಿಂದ ಸುಜಲಾನ್ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿದರೂ ನ್ಯಾಯವಾಗಿ ಬರಬೇಕಿದ್ದ ಸೌಲಭ್ಯಗಳು ಸಿಕ್ಕಿಲ್ಲ. ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದಲೂ ವಜಾ ಮಾಡಲಾಗುತ್ತಿದೆ. ಇದರಿಂದ ಭದ್ರತಾ ಸಿಬ್ಬಂದಿಯವರಿಗೆ ಅನ್ಯಾಯವಾಗಿದೆ ಎಂದು ಹೋರಾಟಗಾರ ರವಿಕಾಂತ ಅಂಗಡಿ ದೂರಿದರು.
ತಾಲೂಕಿನ ಬಾಗೇವಾಡಿ ಸುಜಲಾನ್ ಗ್ರೀಡ್‌ನಿಂದ ಮುಂಡರಗಿ ತಹಶೀಲ್ದಾರ್ ಕಾರ್ಯಾಲಯದವರೆಗೆ ಭದ್ರತಾ ಸಿಬ್ಬಂದಿ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು. ಗಾಳಿಯಂತ್ರ ಮಾಡುವಾಗ ಕಪ್ಪತ್ತಗುಡ್ಡದಲ್ಲಿ ರಸ್ತೆ ನಿರ್ಮಿಸಲಾಯಿತು. ನೂರಾರು ಕಿಮೀ ರಸ್ತೆಯ ನಿರ್ಮಾಣದಲ್ಲಿ ತೆಗೆಯಲಾದ ಅದಿರನ್ನು ಎಲ್ಲಿಗೆ ಸಾಗಿಸಲಾಯಿತು. ಜೊತೆಗೆ ಕಪ್ಪತ್ತಗುಡ್ಡದಲ್ಲಿ ನಾಶವಾದ ಗಿಡಗಳಿಗೆ ಬದಲಾಗಿ ಎಷ್ಟು ಗಿಡಗಳನ್ನು ಹಚ್ಚಲಾಯಿತು. ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಭದ್ರತಾ ಸಿಬ್ಬಂದಿ ಸಮಸ್ಯೆಯನ್ನು ಮೂರು ದಿನಗಳವರೆಗೆ ಬಗೆಹರಿಸದೇ ಇದ್ದರೆ ಹೋರಾಟದ ರೂಪರೇಷೆ ಬದಲಾಯಿಸಲಾಗುವುದು ಎಂದರು.
ನೂರಅಹ್ಮದ ಮಕಾನದಾರ ಮಾತನಾಡಿ, ಭದ್ರತಾ ಸಿಬ್ಬಂದಿಯು ಕನಿಷ್ಠ ವೇತನದಲ್ಲಿ ಕೆಲಸ ಮಾಡಿದ್ದಾರೆ. ನ್ಯಾಯಯುತವಾಗಿ ಸಿಗಬೇಕಿರುವ ಸೌಲಭ್ಯಗಳು ನೀಡದೇ ಅನ್ಯಾಯ ಮಾಡಲಾಗಿದೆ. ಕಾಲ್ನಡಿ ಜಾಥಾ ತಹಶೀಲ್ದಾರ್ ಕಾರ್ಯಾಲಯಕ್ಕೆ ತಲುಪಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು.
ಜಾಥಾ ಬಾಗೇವಾಡಿಯಿಂದ ಪ್ರಾರಂಭವಾಗಿ ವೀರಪಾಪುರ ತಾಂಡಾ, ಕಲಕೇರಿ, ಬೂದಿಹಾಳ ಗ್ರಾಮಗಳಲ್ಲಿ ಸಂಚರಿಸಿ ಆಗಿರುವ ಅನ್ಯಾಯದ ಬಗ್ಗೆ ಜನರ ಮುಂದೆ ಭಾಷಣ, ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಎಸ್.ಕೆ. ನದಾಫ್, ಎನ್.ಟಿ. ಪೂಜಾರ, ಎಂ.ವಿ. ಮಕಾಂದಾರ, ವೆಂಕಪ್ಪ ಯಕ್ಲಾಸಪುರ, ಬೆನಕರಾಜ ಪೂಜಾರ, ಐ.ಡಿ. ಖತೀಬ, ಕೆ.ಆರ್. ದೇವರಮನಿ, ಆರ್.ಕೆ. ದೆವರಮನಿ, ಎಂ.ಡಿ. ಮಕಾನದಾರ, ಹನುಮಂತ ಮೇಟಿ, ರವಿ ಮಡಿವಾಳರ, ವೀರಯ್ಯ ಹಿರೇಮಠ, ದೇವಪ್ಪ ನವಲಿ, ರವಿ ಜೆವಿ, ವೀರಣ್ಣ ರಾವಟೂರು, ರಾಮಣ್ಣ ಸೊರಟೂರು, ಕಾಶಪ್ಪ ಯಲವಣ್ಣವರ, ಪ್ರಕಾಶ ದಂಡೀನ್, ರಮೇಶ ದಂಡೀನ್, ಮಲ್ಲಪ್ಪ ನೆಗಳೂರು, ಮಾರುತಿ ಬೇವಿನಕಟ್ಟಿ, ಎಂ.ಜಿ. ಗೌರಿ, ನೂರೇಶ ಬಂಜಾರ ಸೇರಿದಂತೆ ಭದ್ರತಾ ಸಿಬ್ಬಂದಿಯ ಕುಟುಂಬ ವರ್ಗದವರು ಕೂಡಾ ಪಾಲ್ಗೊಂಡಿದ್ದಾರೆ. ಕಾಲ್ನಡಿಗೆ ಜಾಥಾವು ಮುಂಡರಗಿ ತಹಶೀಲ್ದಾರ್ ಕಾರ್ಯಾಲಯಕ್ಕೆ ತಲುಪಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.