ಬೆಂಗಳೂರು: ಆನೆಗೊಂದಿಯ ನವ ವೃಂದಾವನ ಪ್ರದೇಶಕ್ಕೆ ಭದ್ರತೆ ಕಲ್ಪಿಸುವ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ವಿಚಾರಗಳ ಬಗ್ಗೆ ಉತ್ತರಾದಿ ಮಠದವರು, ರಾಘವೇಂದ್ರ ಸ್ವಾಮಿ ಮಠದ ವರ ಗಮನಕ್ಕೆ ತರಬೇಕೆಂದು ತಿಳಿಸಿದೆ.
ವ್ಯಾಸರಾಜರ ವೃಂದಾವನವನ್ನು ದುಷ್ಕರ್ಮಿಗಳು ಇತ್ತೀಚೆಗಷ್ಟೇ ಧ್ವಂಸಗೊಳಿಸಿದ್ದರ ಹಿನ್ನೆಲೆಯಲ್ಲಿ ಉತ್ತರಾದಿ ಮಠದವರು ಈ ಪ್ರದೇಶಕ್ಕೆ ಸಿಸಿ ಕ್ಯಾಮೆರಾ, ಲೈಟ್ ಅಳವಡಿಸುವ ಮತ್ತು ಸುತ್ತಲೂ ಬೇಲಿ ಹಾಕುವ ಕಾಮಗಾರಿಗೆ ಮುಂದಾಗಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮಂತ್ರಾಲಯ ಮತ್ತು ಉತ್ತರಾದಿ ಮಠದವರ ನಡುವೆ ತಕರಾರು ಉಂಟಾಗಿತ್ತು.
ಈ ಕುರಿತ ಮಧ್ಯಂತರ ತಕರಾರು ಅರ್ಜಿಯನ್ನು ಸೋಮವಾರ ಇತ್ಯರ್ಥಗೊಳಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಭದ್ರತೆ ಕಲ್ಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಮಠಗಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ. ಪ್ರಮುಖವಾಗಿ ನವವೃಂದಾವನಕ್ಕೆ ಭದ್ರತೆ ಸಲುವಾಗಿ ಅಳವಡಿಸುವ ಬೇಲಿ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಾದಿಮಠದವರು, ಯಾವ ರೀತಿಯ ಭದ್ರತೆ ಕಾಮಗಾರಿ ಎಂಬುದನ್ನು ರಾಘವೇಂದ್ರ ಮಠದವರಿಗೆ ತಿಳಿಸಿದ ನಂತರ ಕೆಲಸ ಆರಂಭಿಸಬೇಕು.
ನವವೃಂದಾವನ ಪ್ರದೇಶಕ್ಕೆ ಎರಡು ಗೇಟುಗಳು ಅಳವಡಿಕೆ ಕುರಿತು ಮಂತ್ರಾಲಯ ಮಠದವರ ಜತೆ ಚರ್ಚಿಸಬೇಕು. ಎರಡೂ ಗೇಟುಗಳ ಒಂದೊಂದು ಕೀಲಿ ಮತ್ತು ಕೀಲಿಕೈಗಳನ್ನು ಇಬ್ಬರೂ ಹೊಂದಿರಬೇಕು. ಎಲ್ಲ ಧಾಮಿಕ ಕ್ರಿಯಾ ಪದ್ಧತಿ ಹಾಗೂ ಅನುಷ್ಠಾನಗಳನ್ನು ಸಹಮತದಿಂದ ಸುಸೂತ್ರವಾಗಿ ನಡೆಸಿಕೊಂಡು ಹೋಗಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮಧ್ಯಂತರ ಆದೇಶವನ್ನು ಆಧರಿಸಿ ಇಬ್ಬರೂ ನ್ಯಾಯಾಲಯದ ಮೊರೆ ಹೋಗುವಂತಿಲ್ಲ. ಮೂಲ ಅರ್ಜಿಯ ವಿಚಾರಣೆ ಮುಂದುವರಿಯಲಿದೆ ಎಂದು ನ್ಯಾಯಪೀಠ ತಿಳಿಸಿದೆ.