Advertisement

ಭದ್ರತಾ ಸುತ್ತಾಟ: ಹೆಚ್ಚುವರಿ 50 ವಾಹನಗಳಿಗೆ ಪೊಲೀಸ್‌ ಇಲಾಖೆ ಬೇಡಿಕೆ

10:52 PM Dec 22, 2019 | mahesh |

ಮಹಾನಗರ: ಕೆಲವು ದಿನಗಳಿಂದ ನಗರದೆಲ್ಲೆಡೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದ್ದು, ಈ ನಿಟ್ಟಿನಲ್ಲಿ ನಗರದಲ್ಲಿ ಭದ್ರತೆ ಪರಿಶೀಲನೆಗೆಂದು ಪೊಲೀಸ್‌ ಅಧಿಕಾರಿಗಳು ಸಂಚರಿಸಲು ಹೆಚ್ಚುವರಿಯಾಗಿ 50 ವಾಹನಗಳನ್ನು ಒದಗಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

Advertisement

ಈ ಬಗ್ಗೆ ಈಗಾಗಲೇ ಮಂಗಳೂರು ಸಾರಿಗೆ ಇಲಾಖೆಗೆ ಜಿಲ್ಲಾಡಳಿತ ಸೂಚನೆ ನೀಡಿದ್ದು, ಕೆಲವು ದಿನಗಳ ಮಟ್ಟಿಗೆ 50 ವಾಹನಗಳನ್ನು ನೀಡುವಂತೆ ಕೇಳಿಕೊಂಡಿದೆ. ಕಾರು, ಟಾಟಾ ಸುಮೋ, ಬೊಲೇರೊ ಸಹಿತ ವಿವಿಧ ಮಾದರಿ ಟೂರಿಸ್ಟ್‌ ಕಾರುಗಳನ್ನು ನೀಡುವಂತೆ ಜಿಲ್ಲಾಡಳಿತ ಕಚೇರಿಯಿಂದ ಸಾರಿಗೆ ಇಲಾಖೆಗೆ ಈಗಾಗಲೇ ಮನವಿ ಬಂದಿದ್ದು, ವಾಹನ ನಿಯೋಜನೆ ಮಾಡುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಸನ್ನದ್ಧವಾಗುತ್ತಿದೆ.

ರವಿವಾರ ಮಧ್ಯಾಹ್ನ ವೇಳೆಗೆ ಸುಮಾರು 20ಕ್ಕೂ ಮಿಕ್ಕಿ ವಾಹನಗಳನ್ನು ಸಾರಿಗೆ ಇಲಾಖೆಯು ಜಿಲ್ಲಾಡಳಿತಕ್ಕೆ ನೀಡಿದೆ. ಸುಮಾರು 30 ವಾಹನಗಳ ಮಾಲಕರಿಗೆ ಸಾರಿಗೆ ಇಲಾಖೆಯು ಈಗಾಗಲೇ ಸೂಚನೆ ನೀಡಿದೆ. “ನಗರದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸುವ ನಿಟ್ಟಿನಲ್ಲಿ ತತ್‌ಕ್ಷಣದಲ್ಲಿ ಸ್ಪಂದಿಸಿ ಬೇಡಿಕೆಗೆ ಅನುಗುಣವಾಗಿ ಪೊಲೀಸ್‌ ಇಲಾಖೆಗೆ ವಾಹನಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಬೇಕಿದೆ’ ಎನ್ನುತ್ತಾರೆ ಸಾರಿಗೆ ಅಧಿಕಾರಿಗಳು.

ಚುನಾವಣ ಕರ್ತವ್ಯ: ಇನ್ನೂ ಸಿಕ್ಕಿಲ್ಲ ಹಣ
ಸಾರಿಗೆ ಇಲಾಖೆ ಅಧಿಕಾರಿಗಳ ಈ ನಿರ್ಧಾರಕ್ಕೆ ಮ್ಯಾಕ್ಸಿಕ್ಯಾಬ್‌ ಮತ್ತು ಟ್ಯಾಕ್ಸಿಮೆನ್‌ ಅಸೋಸಿಯೇಶನ್‌ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಮ್ಯಾಕ್ಸಿಕ್ಯಾಬ್‌, ಕಾರು, ಟೆಂಪೋ ಟ್ರಾವೆಲರ್‌ ಸಹಿತ ಸುಮಾರು 360 ವಾಹನಗಳನ್ನು ಚುನಾವಣ ಉದ್ದೇಶಕ್ಕೆ ಬಳಸಿಕೊಳ್ಳಲಾಗಿತ್ತು. ಬಳಸಿಕೊಂಡ ವಾಹನಗಳ ಮಾಲಕರಿಗೆ ಶೇ.25ರಷ್ಟು ಹಣ ನೀಡಲು ಬಾಕಿ ಇದೆ.

“ಲೋಕಸಭಾ ಚುನಾವಣೆ ವೇಳೆ ಬಳಸಿಕೊಂಡ ವಾಹನಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ್‌ ಕಚೇರಿ, ಪೊಲೀಸ್‌ ಇಲಾಖೆಯಿಂದ ಸಂಪೂರ್ಣ ಹಣ ಪಾವತಿಯಾಗಿದೆ. ಆದರೆ ಪಾಲಿಕೆ, ತಾಲೂಕು ಕಚೇರಿಯಿಂದ ಹಣ ಬರಲು ಬಾಕಿ ಇವೆ. ಬೆಳ್ತಂಗಡಿ, ಸುಳ್ಯ ಮುಂತಾದೆಡೆ ಇನ್ನೂ ಹಣ ನೀಡಲು ಬಾಕಿ ಇದೆ’ ಎಂದು ಸಂಘದ ಅಧ್ಯಕ್ಷ ದಿನೇಶ್‌ ಕುಂಪಲ “ಉದಯವಾಣಿ ಸುದಿನ’ಕ್ಕೆ ತಿಳಿಸಿದ್ದಾರೆ.

Advertisement

ಕೇಂದ್ರ ರಾಜಕೀಯ ಮುಖಂಡರು ಮಂಗಳೂರಿಗೆ ಭೇಟಿ ಸಂದರ್ಭ ಬಳಸಲಾಗಿದ್ದ ವಾಹನಗಳ ಬಿಲ್‌ ನೀಡಲು ಕೂಡ ಪೊಲೀಸ್‌ ಇಲಾಖೆ ಹಲವು ತಿಂಗಳು ಕಾಯಿಸಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಬಳಕೆ ಮಾಡಲಾದ ಎಲ್ಲ ವಾಹನಗಳಿಗೆ ಹಣ ನೀಡಲಾಗಿತ್ತು. ಲೋಕಸಭಾ ಚುನಾವಣೆ ಸಂದರ್ಭ ಬಳಸಿದ್ದ ವಾಹನಗಳ ಬಾಡಿಗೆ ಸಂಪೂರ್ಣ ಸಂದಾಯವಾಗದ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆ ಉದ್ದೇಶಕ್ಕೆ ವಾಹನ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಅಸೋ ಸಿಯೇಶನ್‌ ಅನ್ನು ಸಂಪರ್ಕಿಸಿದ್ದರೂ ನೀಡಿಲ್ಲ ಎಂದಿದ್ದಾರೆ ಅಸೋ ಸಿಯೇಶನ್‌ನ ಪ್ರಮುಖರು.

ಸೀಸನ್‌ ಸಮಯ
“ಡಿಸೆಂಬರ್‌ ಬಂತೆಂದರೆ ಟ್ಯಾಕ್ಸಿ ಮಾಲಕರಿಗೆ ಸೀಸನ್‌ ಸಮಯ. ಒಂದೆಡೆ ಕ್ರಿಸ್ಮಸ್‌, ಹೊಸ ವರ್ಷ, ಶಬರಿಮಲೆ ಯಾತ್ರೆ ಸಹಿತ ಈ ಮೊದಲೇ ಬಾಡಿಗೆಗಳು ನಿಗದಿಯಾಗಿರುತ್ತವೆ. ಬಾಡಿಗೆಗಾಗಿ ನಿಲ್ಲಿಸಿದ್ದ ಟ್ಯಾಕ್ಸಿಗಳನ್ನು ಏಕಾಏಕಿ ತೆಗೆದುಕೊಂಡು ಹೋಗುವುದರಿಂದ ಚಾಲಕರಿಗೆ ತೊಂದರೆಯಾಗುತ್ತಿದೆ. ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಶಾಲೆಗಳಿಗೆ ಕ್ರಿಸ್ಮಸ್‌ ರಜೆ ಘೋಷಿಸಿದ್ದು, ಮಂಗಳೂರಿನ ಪ್ರೇಕ್ಷಣಿಯ ಸ್ಥಳಗಳ ದರ್ಶನಕ್ಕಾಗಿ ಟ್ಯಾಕ್ಸಿ ಮುಂಗಡ ಬುಕ್ಕಿಂಗ್‌ ಮಾಡಿದವರಿಗೆ ತೊಂದರೆ ಉಂಟಾಗುತ್ತದೆ. ಪೂರ್ವನಿಯೋಜಿತವಾಗಿ ಮನವಿ ಮಾಡಿದ ಬಳಿ ಕಾರು ಕೇಳುವುದು ಬಿಟ್ಟು ಏಕಾಏಕಿ ತೆಗೆದುಕೊಂಡು ಹೋಗುವುದರಿಂದ ನಮಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎನ್ನುತ್ತಾರೆ ಮ್ಯಾಕ್ಸಿಕ್ಯಾಬ್‌ ಮತ್ತು ಟ್ಯಾಕ್ಸಿಮೆನ್‌ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಆನಂದ್‌ ಕೆ.

ಸಂಘದ ಪ್ರಮುಖರ ಜತೆ ಚರ್ಚಿಸುತ್ತೇವೆ
ನಗರದಲ್ಲಿ ಭದ್ರತೆ ಪರಿಶೀಲನೆಗೆಂದು ಪೊಲೀಸ್‌ ಅಧಿಕಾರಿಗಳು ಸಂಚರಿಸಲು 50 ವಾಹನಗಳನ್ನು ಒದಗಿಸುವಂತೆ ಪೊಲೀಸ್‌ ಇಲಾಖೆ ಮನವಿ ಮಾಡಿತ್ತು. ಈಗಾಗಲೇ ಕೇವಲ 15 ಸರಕಾರಿ ಕಾರುಗಳು ದೊರಕಿವೆ. ಉಳಿದಂತೆ ಖಾಸಗಿ ಕಾರುಗಳನ್ನು ಬಳಸುತ್ತೇವೆ. ಈ ಹಿಂದೆ ನಿಯೋಜಿಸಿದ ಟ್ಯಾಕ್ಸಿಗಳ ಮಾಲಕರಿಗೆ ಹಣ ಸಿಕ್ಕಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸಂಘದ ಪ್ರಮುಖರ ಜತೆ ಚರ್ಚಿಸುತ್ತೇವೆ.
 - ಸಿಂಧೂ ಬಿ. ರೂಪೇಶ್‌, ಡಿಸಿ

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next