ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ (ಮೇ 28) ನೂತನ ಸಂಸತ್ ಭವನ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಉದ್ಘಾಟನೆಗೂ ಮುನ್ನ ಉದ್ಭವಿಸಿದ ವಿವಾದಗಳ ಹಿನ್ನೆಲೆಯಲ್ಲಿ ಭವನದ ಆವರಣದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಈ ಪ್ರದೇಶದ ಸುತ್ತಮುತ್ತ ನಿಯೋಜಿಸಲಾಗಿದೆ ಎಂದು ದೆಹಲಿ ಪೊಲೀಸ್ ವಿಶೇಷ ಅಧಿಕಾರಿ ದೀಪೇಂದರ್ ಪಾಠಕ್ ಹೇಳಿದ್ದಾರೆ.
ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಸಮಾಜವಾದಿ ಪಕ್ಷ (ಎಸ್‌ಪಿ) ಸೇರಿದಂತೆ 19 ವಿರೋಧ ಪಕ್ಷಗಳು, ಸಂಸತ್ ಭವನದ ಉದ್ಘಾಟನಾ ಸಮಾರಂಭ ಬಹಿಷ್ಕರಿಸುವುದಾಗಿ ಘೋಷಿಸಿವೆ.
ಆವರಣದ ಗೋಡೆಗಳ ಮೇಲೆ ದುಷ್ಕರ್ಮಿಗಳು ಹಾಕಬಹುದಾದ ಕೆಲವು “ಪ್ರಧಾನಿ ವಿರೋಧಿ” ಮತ್ತು “ಭಾರತ ವಿರೋಧಿ” ಘೋಷಣೆಗಳ ಬಗ್ಗೆ ದೆಹಲಿ ಪೊಲೀಸರು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ.
ಅಲ್ಲದೆ, ಕುಸ್ತಿ ಒಕ್ಕೂಟದ ಮುಖ್ಯಸ್ಥರ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಮೇ 28 ರಂದು ಹೊಸ ಸಂಸತ್ ಭವನದ ಮುಂದೆ ಮಹಿಳಾ ಮಹಾಪಂಚಾಯತ್ ನಡೆಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: Kerala: ಸಾವಿರ ವರ್ಷದ ಪುರಾತನ ದೇವಾಲಯವನ್ನು ಭೂಮಿಯಿಂದ 6 ಅಡಿ ಎತ್ತರಕ್ಕೆ ಏರಿಸಿದ್ದೇಗೆ?