ಬೆಂಗಳೂರು: ರಾಜ್ಯಾದ್ಯಂತ ಮಹಿಳಾ ಆರೋಗ್ಯ ಸಿಬ್ಬಂದಿಗೆ ಹೆಚ್ಚಿನ ಭದ್ರತೆ ಹಾಗೂ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕೃತಕ ಬುದ್ದಿ ಮತ್ತೆಯುಳ್ಳ ಅತ್ಯಾಧುನಿಕ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ತಿಳಿಸಿದರು.
ವಿಕಾಸಸೌಧದಲ್ಲಿ ಶುಕ್ರವಾರ ನಡೆದ ಉನ್ನತಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಹಾಸ್ಟೆಲ್‌ಗಳಲ್ಲಿ ಆರೋಗ್ಯ ಮಹಿಳಾ ಸಿಬ್ಬಂದಿ ಹಾಗೂ ವೃತ್ತಿಪರರಿಗೆ ಸೂಕ್ತ ಭದ್ರತೆ ನಿಟ್ಟಿನಲ್ಲಿ ಕ್ರಮವಹಿಸಬೇಕು. ಈ ಕುರಿತು ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರು ಬರವಣಿಗೆ ಮೂಲಕ ಪ್ರತಿಕ್ರಿಯೆ ಸಂಗ್ರಹಿಸಿ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ವೈದ್ಯಕೀಯ ಸಂಸ್ಥೆಗಳಲ್ಲಿ ಭದ್ರತಾ ಲೆಕ್ಕಪರಿಶೋಧನಾ ಸಮಿತಿ ರಚಿಸಬೇಕು. ಹೆಚ್ಚುವರಿ ಭದ್ರತಾ ಸಿಬ್ಬಂದಿಗಳಿದ್ದಲ್ಲಿ ಅವರ ಹಿನ್ನೆಲೆ ಪರಿಶೀಲಿಸಬೇಕು. ಮಹಿಳಾ ಆರೋಗ್ಯ ಸಿಬ್ಬಂದಿಗೆ ಆವರಣದಲ್ಲಿಯೇ 24/7 ಕ್ಯಾಂಟೀನ್ ಸೌಲಭ್ಯ ಇರುವಂತೆ ವ್ಯವಸ್ಥೆ ಕಲ್ಪಿಸಬೇಕು. ಕೆಲಸದ ಜಾಗದಲ್ಲಿ ಸುರಕ್ಷತೆ ಒದಗಿಸಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿ ಅನುಸರಿಸಬೇಕಿದೆ ಎಂದರು.
ಮಾಜಿ ಸೇನಾ ಸಿಬ್ಬಂದಿಯಿಂದ ಕೇಂದ್ರಿಯ ನಿಯಂತ್ರಣ ಕೊಠಡಿ ಸ್ಥಾಪಿಸುವ ಯೋಜನೆಯನ್ನು ಅಧಿಕಾರಿಗಳು ಪ್ರಸ್ತುತಪಡಿಸಿದರು. ಇಲ್ಲಿ ಸಿಸಿಟಿವಿ ಕಣ್ಗಾವಲು, ಬೀದಿ ದೀಪದ ವ್ಯವಸ್ಥೆ ಮತ್ತು ವೈಯಕ್ತಿಕ ಭದ್ರತಾ ವ್ಯವಸ್ಥೆಯೊಂದಿಗೆ ಮೇಲ್ವಿಚಾರಣೆ ಮಾಡಬಹುದು. ನಿಯಂತ್ರಣ ಕೊಠಡಿಯು 24/7 ಸಹಾಯವಾಣಿ ಇರಲಿದೆ. ಪುರುಷ ಮತ್ತು ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ಕರ್ತವ್ಯ ಮತ್ತು ವಿಶ್ರಾಂತಿ ಕೊಠಡಿಗಳನ್ನು ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ವೈದ್ಯಕೀಯ ಕ್ಯಾಂಪಸ್‌ಗಳಲ್ಲಿ ಎಐ ತಂತ್ರಜ್ಞಾನದ ಸುಧಾರಣೆ ತರಲಿದೆ ಎಂದು ವಿವರಿಸಿದರು. ಯಾವುದೇ ಭದ್ರತಾ ಲೋಪವಾದಲ್ಲಿ ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಔಷಧಗಳ ಖರೀದಿಗೆ ಹೊಸ ಟೆಂಡರ್ ಪ್ರಕ್ರಿಯೆಗೆ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದರು.
ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಬಿ.ಎಲ್. ಸುಜಾತಾ ರಾಥೋಡ್ ಪ್ರಸ್ತುತ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಜಂಟಿ ಕಾರ್ಯದರ್ಶಿ ವೆಂಕಟೇಶಮೂರ್ತಿ, ರಾಷ್ಟ್ರೀಯ ವೈದ್ಯಕೀಯ ಮಿಷನ್ ನಿರ್ದೇಶಕ ವೈ. ನವೀನ್ ಭಟ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.