Advertisement

ಡ್ರ್ಯಾಗನ್‌ ಮೇಲೆ ನಿಗಾಕ್ಕೆ ಆರು ಉಪಗ್ರಹ ಬೇಕು; ಕೇಂದ್ರಕ್ಕೆ ರಕ್ಷಣಾ ಸಂಸ್ಥೆಗಳ ಕೋರಿಕೆ

10:29 AM Aug 07, 2020 | mahesh |

ಹೊಸದಿಲ್ಲಿ: ಭಾರತ-ಚೀನ ನಡುವಿನ ಸುಮಾರು 4,000 ಕಿ.ಮೀ.ಗಳವರೆಗಿನ ನೈಜ ಗಡಿ ರೇಖೆ (ಎಲ್‌ಎಸಿ)ಯಲ್ಲಿ ಚೀನ ಸೇನೆ ನಡೆಸುತ್ತಿರುವ ಕಾರ್ಯಾಚರಣೆಗಳ ಮೇಲೆ ನಿಗಾ ಇಡಲು ತಮಗೆ ನಾಲ್ಕರಿಂದ ಆರು ಉಪಗ್ರಹಗಳ ಸೇವೆಯ ಆವಶ್ಯಕತೆಯಿದೆ ಎಂದು ರಕ್ಷಣಾ ಸಂಸ್ಥೆಗಳು, ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿವೆ. ಅಲ್ಲದೆ, ಉಪಗ್ರಹಗಳ ಸೇವೆಯಿಂದ ಗಡಿ ಸಮೀಪದ ಭಾರತದ ನೆಲದಲ್ಲಿ ಮಾತ್ರವಲ್ಲದೆ ಗಡಿಯಾಚೆಗಿನ ಚೀನ ನೆಲದೊಳಗೆ ಚೀನ ಸೈನಿಕರು ರೂಪಿಸುವ ತಂತ್ರಗಾರಿಕೆಯನ್ನೂ ಮನನ ಮಾಡಲು ಸಹಾಯವಾಗುತ್ತವೆ ಎಂದು ರಕ್ಷಣಾ ಸಂಸ್ಥೆಗಳು ಕೇಂದ್ರ ಸರಕಾರವನ್ನು ಕೇಳಿಕೊಂಡಿವೆ.

Advertisement

ಗಡಿ ರೇಖೆಯ ಬಳಿಯಲ್ಲಿ ಚೀನ ತನ್ನ ಪ್ರಾಂತ್ಯದೊಳಗಿನ ಕ್ಸಿಂಜಿಯಾಂಗ್‌ ಎಂಬಲ್ಲಿ ಚೀನ ಸೇನೆಯು ಕವಾಯತು ಮತ್ತಿತರ ಚಟುವಟಿಕೆಗಳನ್ನು ನಡೆಸುತ್ತಿದೆ. ಹಂತಹಂತವಾಗಿ ಅಲ್ಲಿ ಸುಮಾರು 40,000 ಯೋಧರನ್ನು ಚೀನ ಜಮಾವಣೆಗೊಳಿಸಿದೆ. ಹಾಗಾಗಿ, ಚೀನ ಸೇನೆಯ ಚಲನವಲನಗಳನ್ನು ಅವಲೋಕಿಸಲು ಉಪಗ್ರಹಗಳ ನೆರವು ಬೇಕಿದೆ ಎಂದು ರಕ್ಷಣಾ ಸಂಸ್ಥೆಗಳು ವಿವರಿಸಿವೆ ಎಂದು “ಎಎನ್‌ಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನಕ್ಕೆ ತಾಕೀತು: ಮತ್ತೂಂದೆಡೆ, ಪೂರ್ವ ಲಡಾಖ್‌ನ ಗಡಿ ರೇಖೆಯ ಪ್ರಾಂತ್ಯಗಳಿಂದ ಚೀನ ಸರಕಾರ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಂಡರಷ್ಟೇ, ತಾನು ತನ್ನ ಸೇನೆಯನ್ನು ಹಿಂಪಡೆಯುವುದಾಗಿ ಭಾರತ, ಚೀನಕ್ಕೆ ಖಡಕ್ಕಾಗಿ ಹೇಳಿದೆ. ಪೂರ್ವ ಲಡಾಖ್‌ನಲ್ಲಿ ಗಡಿ ರೇಖೆಯ ಬಳಿಯವರೆಗೆ ಬಂದು ವಿವಾದಿತ ಭೂ ಪ್ರದೇಶಗಳನ್ನು ತನ್ನ ವಶಕ್ಕೆ ಹವಣಿಸುವ ಪ್ರಯತ್ನವನ್ನು ಚೀನ ಕೈಬಿಡಬೇಕು.ನೀವು ಹಿಂದೆ ಸರಿದರಷ್ಟೇ ನಾವೂ ಹಿಂದೆ ಸರಿಯುತ್ತೇವೆ ಎಂದು ಕಡ್ಡಿ ತುಂಡು ಮಾಡಿದಂತೆ ಉತ್ತರಿಸಿದೆ.

ಹಲವಾರು ದಿನಗಳಿಂದ ನಡೆಯುತ್ತಿರುವ ಭಾರತ-ಚೀನ ಸೇನಾಧಿಕಾರಿಗಳ ಮಾತುಕತೆಯ ಅಂಗವಾಗಿ ಇತ್ತೀಚೆಗೆ ನಡೆದ ಸಭೆಯಲ್ಲಿ ಚೀನದ ಅಧಿಕಾರಿಗಳು, ಪಾಂಗೊಂಗ್‌ ಸರೋವರದ ಉತ್ತರ ಭಾಗದಲ್ಲಿರುವ ಫಿಂಗರ್‌ 3 ವಲಯದಲ್ಲಿ ಭಾರತೀಯ ಸೇನೆ ನಿರ್ಮಿಸಿಕೊಂಡಿರುವ ಧನ್‌ಸಿಂಗ್‌ ಥಾಪಾ ಪೋಸ್ಟ್‌ ಅನ್ನು ತೆರವುಗೊಳಿಸಬೇಕೆಂದು ಭಾರತದ ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ. ಆದರೆ, ಇದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು ಆ ಪೋಸ್ಟ್‌ ತೊರೆಯುವುದು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಖಡಕ್‌ ಉತ್ತರ: ಬುಧವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಚೀನ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ವಿಚಾರವನ್ನು ಪ್ರ ಸ್ತಾಪ ಮಾಡುವ ವ್ಯರ್ಥ ಪ್ರಯತ್ನ ನಡೆಸಿದೆ. ಇದಕ್ಕೆ ಗುರುವಾರದಂದು ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಇಲಾಖೆ, “ಚೀನ ಇಂಥ ಅಚಾತುರ್ಯಗಳನ್ನು ಕೆಲ ದಿನಗಳಿಂದ ಮಾಡುತ್ತಲೇ ಬಂದಿದೆ. ಆದರೆ, ಅದಕ್ಕೆ ಜಾಗತಿಕ ಮಟ್ಟದಲ್ಲಿ ಸೂಕ್ತವಾದ ಬೆಂಬಲ ಸಿಗುತ್ತಿಲ್ಲ. ಆದರೂ, ಚೀನ ವ್ಯರ್ಥ ಪ್ರಯತ್ನ ಮುಂದುವರಿಸುತ್ತಲೇ ಇದೆ ಎಂದಿದೆ.

Advertisement

ಏನಿದು ಧನ್‌ಸಿಂಗ್‌ ಪೋಸ್ಟ್‌?
ಫಿಂಗರ್‌ 3ನಲ್ಲಿ ಭಾರತೀಯ ಸೇನೆ ಧನ್‌ ಸಿಂಗ್‌ ಪೋಸ್ಟ್‌ ಎಂಬ ಸೇನಾ ವೀಕ್ಷಣಾ ಗೋಪುರ ನಿರ್ಮಿಸಿದೆ. ಅದನ್ನು ತೆರವುಗೊಳಿಸಬೇಕು ಎಂದು ಚೀನ ಪಟ್ಟು ಹಿಡಿದಿದೆ. ಆದರೆ, ಹಿಂದಿನ ಒಪ್ಪಂದದ ಪ್ರಕಾರ, ಫಿಂಗರ್‌ 3 ಪ್ರಾಂತ್ಯವು ಭಾರತ-ಚೀನ ಗಡಿ ರೇಖೆಗೆ ಹತ್ತಿರದಲ್ಲಿದ್ದು ಅದು ಭಾರತದ ನೆಲದೊಳಗಿನ ಪ್ರದೇಶ. ಹಾಗಾಗಿ, ಅಲ್ಲಿ ಪೋಸ್ಟ್‌ ನಿರ್ಮಿಸಿರುವುದು ಸಹಜವಾಗಿಯೇ ಇದೆ ಎಂದು ಭಾರತ ವಾದ ಮಂಡಿಸಿದೆ. ಆದರೆ, ಚೀನ ಅದನ್ನು ಒಪ್ಪುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next