ಚೆನ್ನೈ: ಜಾತ್ಯತೀತತೆಯ ಹೆಸರಿನಲ್ಲಿ ಭಾರತದ ಜನತೆಗೆ ವಂಚನೆ ಎಸಗಲಾಗಿದೆ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಪ್ರತಿಪಾದಿಸಿದ್ದು, ಜಾತ್ಯತೀತತೆ ಎನ್ನುವುದು ಯುರೋಪಿಯನ್ ಪರಿಕಲ್ಪನೆಯಾಗಿದ್ದು, ಭಾರತದಲ್ಲಿ ಅಗತ್ಯವಿಲ್ಲ ಎಂದು ಚರ್ಚೆ ಹುಟ್ಟು ಹಾಕಿದ್ದಾರೆ.
ಸೆಪ್ಟೆಂಬರ್ 22 ರಂದು ಕನ್ಯಾಕುಮಾರಿಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, “ಈ ದೇಶದ ಜನರ ವಿರುದ್ಧ ಅನೇಕ ವಂಚನೆಗಳು ನಡೆದಿವೆ ಮತ್ತು ಅವುಗಳಲ್ಲಿ ಒಂದು ಜಾತ್ಯತೀತತೆಯ ತಪ್ಪು ವ್ಯಾಖ್ಯಾನ. ಸೆಕ್ಯುಲರಿಸಂ ಎಂದರೆ ಏನು? ಸೆಕ್ಯುಲರಿಸಂ ಎಂದರೆ ಯುರೋಪಿಯನ್ ಪರಿಕಲ್ಪನೆ, ಮತ್ತು ಅದು ಭಾರತೀಯ ಪರಿಕಲ್ಪನೆಯಲ್ಲ” ಎಂದಿದ್ದಾರೆ.
ಯುರೋಪ್ ನಲ್ಲಿ, ಚರ್ಚ್ ಮತ್ತು ರಾಜನ ನಡುವಿನ ಸಂಘರ್ಷದಿಂದಾಗಿ ಜಾತ್ಯತೀತತೆ ಹುಟ್ಟಿಕೊಂಡಿತು. ಸ್ವಾತಂತ್ರ್ಯದ ಸಮಯದಲ್ಲಿ ಸಂವಿಧಾನದ ಕರಡು ರಚನೆಯ ಸಮಯದಲ್ಲಿ, ಜಾತ್ಯತೀತತೆಯ ಬಗ್ಗೆ ಚರ್ಚಿಸಲು ಯಾರೋ ಪ್ರಸ್ತಾಪಿಸಿದರು ಎಂದರು.
1976 ರಲ್ಲಿ ಸಂವಿಧಾನದ ಪೀಠಿಕೆಯಲ್ಲಿ “ಜಾತ್ಯತೀತತೆ” ಪದವನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಪರಿಚಯಿಸಿದರು ಎಂದು ಆರ್.ಎನ್. ರವಿ ಟೀಕಿಸಿದರು.
ರಾಜ್ಯಪಾಲರ ಹೇಳಿಕೆಗಳ ಕುರಿತು ಟೀಕೆಗಳೂ ವ್ಯಕ್ತವಾಗಿದ್ದು, ಉನ್ನತ ಹುದ್ದೆ ಅಲಂಕರಿಸಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಖಂಡನೆಯೂ ವ್ಯಕ್ತವಾಗಿದೆ.