Advertisement

ಜಾತ್ಯತೀತ ಸಮಾಜ ನಿರ್ಮಾಣ ಅನಿವಾರ್ಯ

01:11 PM Apr 05, 2017 | |

ದಾವಣಗೆರೆ: ಪ್ರಸ್ತುತ ವಾತಾವರಣದಲ್ಲಿ ಜಾತ್ಯತೀತ ಸಮಾಜ ನಿರ್ಮಾಣ ತೀರಾ ಅತ್ಯಗತ್ಯವಾಗಿದೆ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯವರ 60ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಅಂಗವಾಗಿ ಶಿವಯೋಗಾಶ್ರಮದಲ್ಲಿ ಮಂಗಳವಾರ ಹಮ್ಮಿಕೊಂಡ ಜಮುರಾ ನಾಟಕೋತ್ಸವ- ಜಾನಪದ ಸೊಬಗು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಈಗಿನ ವಾತಾವರಣದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ. ಅವರಿಂದಲೇ ಜಾತಿ ಎಂಬ ಭೂತ ಮತ್ತೆ ಪ್ರಬಲವಾಗುತ್ತಿದೆ. ಶಿಕ್ಷಣ ನಗರಿ ದಾವಣಗೆರೆಯೂ ಸಹ ಜಾತಿಮುಕ್ತ ವಾತಾವರಣ ಕಂಡು ಬರುತ್ತಿಲ್ಲ. ಸಿನಿಮಾ, ರಂಗಭೂಮಿ ಸಹ ಜಾತಿ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು. ಈ ಹಿಂದೆ ಅನಕ್ಷರಸ್ಥರು ಹೆಚ್ಚಾಗಿದ್ದರು. ಆದರೆ, ಅವರಲ್ಲಿ ಮಾನವೀಯತೆ, ಜಾತಿ ಮುಕ್ತಮನಸ್ಸು ಇತ್ತು.

ಯಾವುದೇ ಜಾತಿಯ ಭೇದ ಭಾವನೆ ಇಲ್ಲದೆ ಎಲ್ಲ ಮಕ್ಕಳು ಒಟ್ಟಿಗೆ ಆಟವಾಡುತ್ತಿದ್ದರು. ಎಲ್ಲ ಜಾತಿಯವರನ್ನು ಚಿಕ್ಕಪ್ಪ, ಚಿಕ್ಕಮ್ಮ, ಮಾವ, ದೊಡ್ಡಪ್ಪ… ಹೀಗೆ ಕರೆಯುತ್ತಿದ್ದರು. ತಮ್ಮ ಪೂರ್ವಾಶ್ರಮದಲ್ಲೂ ಪಕ್ಕದ ಮನೆಯ ಹಿಂದುಳಿದವರ ಜೊತೆ ಆತ್ಮೀಯ ಭಾವನೆ ಇತ್ತು. ಆದರೆ, ಈಗ ಅಂತಹ ವಾತಾವರಣ ತೀರಾ ಕಡಿಮೆ ಎಂದು ತಿಳಿಸಿದರು. ಬಸವ ಚೇತನ ಜಯದೇವಸ್ವಾಮೀಜಿಯವರು ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕಿದವರು.

ಹಡಪದ ಸಮಾಜದವರ ಮನೆಯಲ್ಲಿ ಪೂಜೆ ನೆರವೇರಿಸಿ, ಪ್ರಸಾದ ಸೀÌಕರಿಸಿದ್ದರು. ಅಂತಹ ಆದರ್ಶವನ್ನು ಮುರುಘಾಮಠ ಪಾಲಿಸುತ್ತಾ ಬರುತ್ತಿದೆ. ಡಾ| ಶಿವಮೂರ್ತಿ ಮುರುಘಾ ಶರಣರು ಅಧಿಕಾರಕ್ಕೆ ಬಂದ ನಂತರ ಚಿತ್ರದುರ್ಗದ ಚಿನ್ಮೂಲಾದ್ರಿ ಮಠದಲ್ಲಿ ಎಲ್ಲಾ ಜಾತಿ, ಸಮಾಜದವರು ಮುಕ್ತವಾಗಿ ಹೋಗಿ ಬರುವ ವಾತಾವರಣ ನಿರ್ಮಾಣ ಮಾಡಿದ್ದಾರೆ. ನಾವೆಲ್ಲರೂ ಜಾತಿ ಮುಕ್ತ ಸಮಾಜ ನಿರ್ಮಾಣದ ಆದರ್ಶತೆಯೊಂದಿಗೆ ಮುಂದುವರೆಯಬೇಕು ಎಂದು ತಿಳಿಸಿದರು. 

ಸಾನ್ನಿಧ್ಯ ವಹಿಸಿದ್ದ ಶಿರಸಂಗಿಯ ಶ್ರೀ ಬಸವ ಮಹಾಂತ ಸ್ವಾಮೀಜಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒತ್ತಡ ಮತ್ತು ಬೇಸರ ಎನ್ನುವುದು ಸಾಮಾನ್ಯ. ಒತ್ತಡ ಮತ್ತು ಬೇಸರ ಇಲ್ಲವೇ ಇಲ್ಲ ಎನ್ನುವವರು ಯಾರೂ ಇರಲಿಕ್ಕೆ ಸಾಧ್ಯವೇ ಇಲ್ಲ. ನಾಟಕ, ನಗು, ಸಂಗೀತ, ನೃತ್ಯ, ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಒತ್ತಡ ಮತ್ತು ಬೇಸರದಿಂದ ಹೊರ ಬರುವಂತಾಗಬೇಕು ಎಂದು ತಿಳಿಸಿದರು. 

Advertisement

ನಾಟಕೋತ್ಸವ, ಜಾನಪದ ಸಂಗಮ ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್‌ ಸದಸ್ಯ ರಮೇಶ್‌ಬಾಬು ಮಾತನಾಡಿ, ಚಿತ್ರದುರ್ಗ ಮಠದ ಜಯದೇವಶ್ರೀಗಳು ಸ್ವಾತಂತ್ರ ಪೂರ್ವದಲ್ಲಿ ಉಚಿತ ಪ್ರಸಾದ ನಿಲಯ ಪ್ರಾರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದವರು. ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದವರು. ಜಮುರಾ ನಾಟಕೋತ್ಸವದ ಮೂಲಕ ನಮ್ಮ ಸಂಸ್ಕೃತಿ, ಆದರ್ಶದ ಅನಾವರಣ ಆಗುತ್ತಿದೆ ಎಂದು ಪ್ರಶಂಸಿದರು. 

ಮಾಜಿ ಶಾಸಕ ಮಹಿಮಾ ಜೆ. ಪಟೇಲ್‌ ಮಾತನಾಡಿ, ನಾಟಕ, ಸಿನಿಮಾ ಕ್ಷೇತ್ರ ತಿಳಿವಳಿಕೆ ನೀಡುವ ಕೆಲಸ ಮಾಡುತ್ತಿವೆ. ಅವುಗಳಲ್ಲಿನ ಉತ್ತಮ ಅಂಶಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಸಿನಿಮಾ ರಂಗದ ಪ್ರಭಾವದಿಂದ ನಾಟಕ ಕಲೆ ಕೀಣಿಸುತ್ತಿದ್ದರೂ ತನ್ನ ಗಟ್ಟಿತನದಿಂದ ಇಂದಿಗೂ ಆ ಕ್ಷೇತ್ರ ಜೀವಂತವಾಗಿ ಉಳಿದಿದೆ. ನಾವೆಲ್ಲರೂ ವಿಕಾಸದ ಹಾದಿಯಲ್ಲಿ ಭರವಸೆಯೊಂದಿಗೆ ಮುನ್ನಡೆಯಲು ಇಂತಹ ಕಾರ್ಯಕ್ರಮ ಸ್ಫೂರ್ತಿಯಾಗಲಿ ಎಂದು ಆಶಿಸಿದರು.

ಬೆಂಗಳೂರಿನ ಸರ್ಪಭೂಷಣ ಮಠದ ಸ್ವಾಮೀಜಿ, ಶ್ರೀ ಕಾಯಕದ ಸ್ವಾಮೀಜಿ, ಕನ್ನಡ ಪರ ಹೋರಾಟಗಾರ ಬಸವರಾಜ್‌ ಐರಣಿ, ಡಾ| ರಾಜ್‌ ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ವಿಶ್ವನಾಥ್‌, ವರದಿಗಾರರ ಕೂಟದ ಅಧ್ಯಕ್ಷ ಬಸವರಾಜ್‌ ದೊಡ್ಮನಿ, ಹೆಚ್ಚುವರಿ ಅಧೀಕ್ಷಕಿ ಯಶೋಧಾ ಎಸ್‌. ವಂಟಗೋಡಿ ಇತರರು ಇದ್ದರು. ಗಂಜಿಗಟ್ಟೆ ಕೃಷ್ಣಮೂರ್ತಿ, ಮೀನಾಕ್ಷಮ್ಮ ಜಾನಪದ ಸೊಬಗು ನಡೆಸಿಕೊಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next