ದಾವಣಗೆರೆ: ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ನಾಗಪ್ಪ ನವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಸಂಘದ ಪದಾಧಿಕಾರಿಗಳು ಗುರುವಾರ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಿ.ಎಸ್. ಷಡಕ್ಷರಪ್ಪಗೆ ಮನವಿ ಸಲ್ಲಿಸಿದರು.
ತೋರಣಗಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊರ ವಲಯದಲ್ಲಿರುವ ಕುಡಿಯುವ ನೀರಿನ ಘಟಕಕ್ಕೆ ಸಂಪರ್ಕ ಒದಗಿಸಿರುವ ವಿದ್ಯುತ್ ತಂತಿ ತಗುಲಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಸುದ್ದಿ ತಿಳಿದ ಗ್ರಾಮ ಪಂಚಾಯತಿ ಕಾರ್ಯದರ್ಶಿ ನಾಗಪ್ಪ ಸ್ಥಳಕ್ಕೆ ತೆರಳಿದ್ದಾಗ 8-10 ಮಂದಿ ಕಿಡಿಗೇಡಿಗಳು ಏಕಾಏಕಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಕಿವಿ, ತಲೆಗೆ ತೀವ್ರ ಹೊಡೆತ ಬಿದ್ದಿದೆ. ಅನೇಕ ಕಡೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ. ವಿದ್ಯುತ್ ತಂತಿ ತಗುಲಿದ ಪರಿಣಾಮ ವ್ಯಕ್ತಿ ಮೃತಪಟ್ಟಿರುವುದು ನಿಜಕ್ಕೂ ವಿಷಾದನೀಯ ಸಂಗತಿ. ಆದರೆ, ಘಟನಾ ಸ್ಥಳಕ್ಕೆ ತೆರಳಿದ್ದಂತಹ ಗ್ರಾಮ ಪಂಚಾಯತ್ ಕಾರ್ಯದರ್ಶಿಗೆ ಮಾತನಾಡಲಿಕ್ಕೂ ಅವಕಾಶ ನೀಡದೆ ಏಕಾಏಕಿ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ.
ಕೆಲವರು ಈ ರೀತಿ ಹಲ್ಲೆ ನಡೆಸಿದ್ದು ದುಷ್ಕೃತ್ಯದ ಸಂಚು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಮುಂದೆ ಇಂತಹ ಘಟನೆ ಮರುಕಳಿಸದಂತೆ ನಿಗಾವಹಿಸಬೇಕು ಎಂದು ಒತ್ತಾಯಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ಎಸ್. ಎಂ. ಸಂಗಮೇಶ್, ವಿವೇಕಾನಂದ, ಎಂ.ಆರ್. ಸಿದ್ದಪ್ಪ, ಐ.ಸಿ. ವಿದ್ಯಾವತಿ, ಪ್ರೇಮ, ಮಾಳಮ್ಮ, ಮಮತಾ, ಶಿವಕುಮಾರ್, ಅಭಿಜಿತ್, ಇಶ್ರತ್, ಸುನೀಲ್ ಇತರರು ಮನವಿ ಸಲ್ಲಿಸಿದ ಸಂದರ್ಭದಲ್ಲಿದ್ದರು.